For the best experience, open
https://m.samyuktakarnataka.in
on your mobile browser.

ಮೈಸೂರು "ಮಹಾರಾಜ"

10:52 PM Sep 01, 2024 IST | Samyukta Karnataka
ಮೈಸೂರು  ಮಹಾರಾಜ

ಬೆಂಗಳೂರು: ೩ನೇ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ೨೦ ಲೀಗ್‌ನ ಚಾಂಪಿಯನ್ ಆಗಿ ಮೈಸೂರು ವಾರಿಯರ್ಸ್ ಪಡೆ ಹೊರಹೊಮ್ಮಿದೆ. ಕಳೆದ ಎರಡು ಆವೃತ್ತಿಗಳ ರನ್ನರ್‌ಅಪ್‌ಗಳಾದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ನಡುವಿನ ಫೈನಲ್ ಗುದ್ದಾಟದಲ್ಲಿ ವಾರಿಯರ್ಸ್ ೪೫ ರನ್‌ಗಳ ರೋಚಕ ಜಯ ಗಳಿಸುವ ಮೂಲಕ ಟ್ರೋಫಿಗೆ ಮುತ್ತಿಟ್ಟಿದೆ. ಬ್ಲಾಸ್ಟರ್ಸ್ ಪರ ಎಲ್‌ಆರ್ ಚೇತನ್ ಅರ್ಧಶತಕ ಬಾರಿಸಿದ್ದು ಹೊರತುಪಡಿಸಿದರೆ, ಮತ್ಯಾವ ಆಟಗಾರ ಕೂಡ ದಿಟ್ಟ ಹೋರಾಟ ನೀಡಲಿಲ್ಲ.
ಇದಕ್ಕೂ ಮೊದಲು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ತವರಿನ ಅಭಿಮಾನಿಗಳೆದುರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಯಾಂಕ್ ಅಗರ್ವಾಲ್ ಪಡೆ, ಕೋದಂಡ ಅಜಿತ್ ಕಾರ್ತಿಕ್‌ರ ನೀರಸ ಪ್ರದರ್ಶನದ ಹೊರತಾಗಿಯೂ ಉತ್ತಮ ಆರಂಭ ಕಂಡಿತು. ಕೋದಂಡರನ್ನು ಕೇವಲ ೩ ರನ್‌ಗಳಿಗೆ ಔಟ್ ಮಾಡಿದ ನವೀನ್, ಬ್ಲಾಸ್ಟರ್ಸ್ ಪಡೆಯಲ್ಲಿ ಹುರುಪನ್ನು ತಂದರು. ಆದರೆ, ಆರಂಭಿಕ ಆಟಗಾರ ಎಸ್‌ಯು ಕಾರ್ತಿಕ್ ಹಾಗೂ ನಾಯಕ ಕರುಣ್ ನಾಯರ್‌ರ ಸ್ಫೋಟಕ ಬ್ಯಾಟಿಂಗ್ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿತು.
ಪವರ್ ಪ್ಲೇನಲ್ಲೇ ೫೦ ರನ್ ಗಳನ್ನು ದಾಟಿದ ಮೈಸೂರು ವಾರಿಯರ್ಸ್ ತಂಡಕ್ಕೆ ಕಾರ್ತಿಕ್ ಹಾಗೂ ಕರುಣ್ ನಾಯರ್ ೫೮ ಎಸೆತಗಳಲ್ಲಿ ೮೧ ರನ್‌ಗಳ ಜೊತೆಯಾಟ ಕಟ್ಟಿ ತಂಡವನ್ನು ನೂರರ ಗಡಿ ದಾಟಿಸಿದರು. ಎಸ್‌ಯು ಕಾರ್ತಿಕ್ ಕೇವಲ ೪೪ ಎಸೆತಗಳಲ್ಲಿ ೭ ಬೌಂಡರಿ ಹಾಗೂ ೩ ಸಿಕ್ಸರ್‌ಗಳ ಸಮೇತ ೭೧ ರನ್ ಗಳಿಸಿ ಶುಭಾಂಗ್ ಹೆಗ್ಡೆಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ ಕೂಡ ೪೫ ಎಸೆತಗಳಲ್ಲಿ ೬ ಬೌಂಡರಿ ೩ ಸಿಕ್ಸರ್‌ಗಳ ಸಮೇತ ೬೬ ರನ್ ಗಳಿಸಿ ನವೀನ್‌ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹರ್ಷಲ್ ಧರ್ಮಾನಿ ೬ ರನ್ ಗಳಿಸಿ ನಿರಾಸೆ ಮೂಡಿಸಿದರು.
ಮನೋಜ್ ಆಟಕ್ಕೆ ಬಹುಪರಾಕ್
ಮೈಸೂರು ವಾರಿಯರ್ಸ್ ಪಡೆಯ ಬೃಹತ್ ಮೊತ್ತದ ಕನಸನ್ನು ನನಸು ಮಾಡಿದ ಕೀರ್ತಿ ಮನೋಜ್ ಬಾಂಡಗೆಗೆ ಸಲ್ಲಬೇಕು. ಏಕೆಂದರೆ, ಜೆ. ಸುಚಿತ್ ಜೊತೆಗೂಡಿದ ಮನೋಜ್ ಬಾಂಡಗೆ, ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ ೧೩ ಎಸೆತಗಳಲ್ಲೇ ೫ ಸಿಕ್ಸರ್ ಹಾಗೂ ೨ ಬೌಂಡರಿ, ಅಜೇಯ ೪೪ ರನ್‌ಗಳನ್ನು ಗಳಿಸಿದ್ದಲ್ಲದೇ, ತಂಡವನ್ನೂ ಇನ್ನೂರರ ಗಡಿ ದಾಟಿಸಿ, ಆತ್ಮಸ್ಥೈರ್ಯ ಹೆಚ್ಚಿಸಿದರು. ಕೇವಲ ೪ ವಿಕೆಟ್‌ಗಳನ್ನು ಕಳೆದುಕೊಂಡ ಮೈಸೂರು ೨೦೭ ರನ್ ಕಲೆ ಹಾಕಿತು.
ಕುಸಿದ ಬೆಂಗಳೂರು ಬ್ಲಾಸ್ಟರ್ಸ್
ಮೈಸೂರು ವಾರಿಯರ್ಸ್ನ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಚೇಸಿಂಗ್ ಮಾಡಿದ ಬೆಂಗಳೂರು ತಂಡ ಆರಂಭದಿಂದಲೇ ಪೆಟ್ಟಿನ ಮೇಲೆ ಪೆಟ್ಟನ್ನು ಅನುಭವಿಸಿತು. ಎಲ್ ಆರ್ ಚೇತನ್ ಅರ್ಧಶತಕದ ಹೊರತಾಗಿಯೂ ನಾಯಕ ಮಯಾಂಕ್ ಅಗರ್ವಾಲ್ ೬ ರನ್ ಗಳಿಸಿ ಮೊದಲಿಗರಾಗಿ ಹೊರ ನಡೆದರು. ಭುವನ್ ರಾಜು, ಶಿವಕುಮಾರ್ ರಕ್ಷಿತ್ ಕೂಡ ಒಂದಂಕಿ ರನ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಈ ಮಧ್ಯೆ ಚೇತನ್ ಏಕಾಂಗಿಯಾಗಿ ಹೋರಾಡಿದರೂ, ಮೈಸೂರು ವಾರಿಯರ್ಸ್ ಪಡೆ ಎದುರು ಬ್ಲಾಸ್ಟರ್ಸ್ ಬ್ಯಾಟರ್‌ಗಳು ಪರದಾಟ ನಡೆಸಿದರು. ಹಾಗಾಗಿ, ಅಂತಿಮವಾಗಿ ೧೬೨ ರನ್‌ಗಳಿಸಿದ ಬೆಂಗಳೂರು ತಂಡ ೩೫ ರನ್‌ಗಳಿಂದ ಸೋಲುಂಡರು. ಅಲ್ಲದೇ ಚೊಚ್ಚಲ ಮಹಾರಾಜ ಟ್ರೋಫಿ ಫೈನಲ್‌ನಲ್ಲಿ ಗುಲ್ಬರ್ಗಾ ವಿರುದ್ಧ ಸೋತಿದ್ದ ಬ್ಲಾಸ್ಟರ್ಸ್ ಈಗ ಮೈಸೂರಿನ ವಿರುದ್ಧ ಸೋತು, ೨ನೇ ಬಾರಿ ಟ್ರೋಫಿ ಕೈ ಚೆಲ್ಲಿಕೊಂಡಿತು. ಮೈಸೂರು ಪರ ವಿದ್ಯಾಧರ್ ಪಾಟೀಲ್ ೩ ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್ ೨೦ ಓವರ್‌ಗಳಲ್ಲಿ ೪ ವಿಕೆಟ್‌ಗೆ ೨೦೭ ರನ್. ಬೆಂಗಳೂರು ಬ್ಲಾಸ್ಟರ್ಸ್ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೧೬೨ ರನ್.