ಮೈಸೂರು: ಹಲವು ವಿಮಾನ ಸಂಚಾರ ರದ್ದು
ಮೈಸೂರು: ನಗರದಿಂದ ರಾಜ್ಯದ ವಿವಿಧ ನಗರಗಳಿಗೆ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ಸದ್ಯ ಚೆನ್ನೈ ವತ್ತು ಹೈದರಾಬಾದ್ ನಡುವಿನ ಎರಡು ಪ್ರಮುಖ ಸಂಚಾರ ಮಾರ್ಗಗಳನ್ನಷ್ಟೇ ಉಳಿಸಿಕೊಂಡು ಉಳಿದೆಲ್ಲಾ ನಗರಗಳ ಸಂಪರ್ಕ ಯಾನ ರದ್ದಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಮೈಸೂರಿನಿಂದ ಕೊಚ್ಚಿ ಮತ್ತು ಗೋವಾ ನಡುವಿನ ವಿಮಾನ ಸಂಚಾರ ಹೆಚ್ಚು ಜನಪ್ರಿಯವಾಗಿತ್ತು. ಇದೂ ಸಹ ರದ್ದಾಗಿದೆ. ಇದಲ್ಲದೆ ರಾಜ್ಯದೊಳಗಿನ ಬೆಳಗಾವಿ, ಕಲ್ಬುರ್ಗಿ ಮತ್ತು ಹುಬ್ಬಳ್ಳಿ ನಡುವಿನ ಸಂಚಾರವೂ ನಿಂತಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗಿದ್ದರೂ ಮೈಸೂರು ವಿಮಾನ ನಿಲ್ದಾಣ ಯಾವುದೇ ಹೆಚ್ಚುವರಿ ಚಟುವಟಿಕೆಗಳಿಲ್ಲದೆ ಮತ್ತೆ `ಬಿಕೋ' ಎನ್ನುವ ಸ್ಥಿತಿ ಉಂಟಾಗಿದೆ.
ಸಹಾಯ ಧನ ನಿಂತಿದೆ: ಮೈಸೂರಿನಿಂದ ವಿವಿಧ ನಗರಗಳಿಗಿದ್ದ ವಾಯು ಯಾನ ಸಂಪರ್ಕ ರದ್ದಾಗಿರುವುದನ್ನು ನಿಲ್ದಾಣದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯದಲ್ಲಿ ಹೈದರಾಬಾದ್, ಮೈಸೂರು ಹಾಗೂ ಚೆನ್ನೈ ಮೈಸೂರು ನಡುವಿನ ಇಂಡಿಗೋ ಸಂಸ್ಥೆಯ ವಿಮಾನಗಳನ್ನು ಹೊರತುಪಡಿಸಿ, ಬೇರಾವುದೇ ಸಂಸ್ಥೆಯ ವಿಮಾನಗಳು ನಗರ ವಿಮಾನ ನಿಲ್ದಾಣದಿಂದ ಸಂಚರಿಸುತ್ತಿಲ್ಲ ಎಂದೂ ಇವರು ಖಚಿತಪಡಿಸಿದರು.
ಟಿಕೆಟ್ ದರ ಹೆಚ್ಚಳ ಅಸಾಧ್ಯ : ಹಾಗೊಂದು ವೇಳೆ ಕೇಂದ್ರ ನೀಡುವ ಸಬ್ಸಿಡಿ ಕೈಬಿಟ್ಟು ವಿಮಾನ ಯಾನದ ಟಿಕೆಟ್ ದರ ಹೆಚ್ಚಿಸಿದರೆ ಪ್ರಯಾಣಿಕರು ಬರುವುದಿಲ್ಲವೆಂಬ ಶಂಕೆ ವಿಮಾನ ಸಂಸ್ಥೆಗಳನ್ನು ಕಾಡುತ್ತಿದೆ. ಟಿಕೆಟ್ ದರ ಹೆಚ್ಚ್ಚಿಸುವುದರ ಬದಲು ಸಂಚಾರವನ್ನೇ ರದ್ದು ಮಾಡುವುದು ಸೂಕ್ತವೆಂದು ಹಲವು ಸಂಸ್ಥೆಗಳು ನಿರ್ಧಾರಕ್ಕೆ ಬಂದಿವೆ. ಹೀಗಾಗಿ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿ ವರ್ಗ ಮಾಹಿತಿ ನೀಡಿದೆ.