For the best experience, open
https://m.samyuktakarnataka.in
on your mobile browser.

ಮೊಸರಿನಲ್ಲಿ ಕಲ್ಲು ಹುಡುಕಬೇಡಿ

10:38 PM Jan 17, 2025 IST | Samyukta Karnataka
ಮೊಸರಿನಲ್ಲಿ ಕಲ್ಲು ಹುಡುಕಬೇಡಿ

ಬೆಳಗಾವಿ: ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲರನ್ನು ಆಹ್ವಾನಿಸಲಾಗಿದೆ. ಮಹಾತ್ಮಾ ಗಾಂಧಿಜೀಯವರಿಗೆ ಸಂಬಂಧಿಸಿದ ಸರ್ಕಾರಿ ಕಾರ್ಯಕ್ರಮಕ್ಕೆ ಸರ್ವ ಪಕ್ಷದವರನ್ನು ಆಹ್ವಾನಿಸಲಾಗಿದ್ದು, ಈ ವಿಚಾರದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರದ ಭೂಪಟದಲ್ಲಿ ಬೆಳಗಾವಿಗೆ ಉನ್ನತ ಸ್ಥಾನ-ಮಾನವಿದೆ. ಗಾಂಧಿ ಭಾರತ ಕಾರ್ಯಕ್ರಮದಿಂದ ಬೆಳಗಾವಿ ಇನ್ನಷ್ಟು ಪ್ರಸಿದ್ಧಿಗೆ ಒಳಗಾಗಲಿದೆ. ಮಹಾತ್ಮಾ ಗಾಂಧಿಜೀಯವರು ೧೦೦ ವರ್ಷದ ಹಿಂದೆ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸ್ಥಳದಿಂದಲೇ ಕಾಂಗ್ರೆಸ್ ವಿಸ್ತೃತ ಕಾರ್ಯಕಾರಣಿ ಸಭೆ ನಡೆಸಿ ಅನೇಕ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೀಗ ಜ. ೨೧ರಂದು ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಗಣ್ಯರು ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಬೆಳಗಾವಿಯ ಸುವರ್ಣವಿಧಾನ ಸೌಧದ ಎದುರಿಗೆ ಮಹಾತ್ಮಾ ಗಾಂಧಿ ಮೂರ್ತಿ ಅನಾವರಣಕ್ಕೆ ಸರ್ವ ಪಕ್ಷದವರಿಗೂ ಆಹ್ವಾನಿಸಲಾಗಿದೆ. ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬ ಸಂಸದ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಶಂಕುಸ್ಥಾಪನೆ ಕಲ್ಲಿನಲ್ಲಿಯೇ ಅವರ ಹೆಸರನ್ನು ಕೆತ್ತಲಾಗಿದೆ. ಸಂಸದರು ವೃಥಾ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಕಾರ್ಯಕ್ರಮಕ್ಕೆ ಸರ್ವಪಕ್ಷದವರನ್ನು ಆಹ್ವಾನಿಸಲಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರಿಗೂ ಆಹ್ವಾನ ನೀಡಲಾಗಿದೆ ಎಂದು ಅವರು ಹೇಳಿದರು.

Tags :