ಮೋದಿಗೆ ರಾಜಕೀಯ ನಿವೃತ್ತಿಯ ಸವಾಲು ಹಾಕಿದ ಸಿದ್ದರಾಮಯ್ಯ
ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಮಾಡಲು ಆಗದಿದ್ದರೆ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ?
ಮೈಸೂರು: ನಮ್ಮ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಆರೋಪಗಳು ಚುನಾವಣಾ ಭಾಷಣಕ್ಕಷ್ಟೇ ಸೀಮಿತ. ಇವುಗಳಲ್ಲಿ ಯಾವ ಸತ್ಯವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರ ಆಯೋಗ ವರದಿ ಸಲ್ಲಿಸಿದ್ದು, 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ ಅನ್ನು 2,140 ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಏನು ಹೇಳುತ್ತಾರೆ? ಭ್ರಷ್ಟಾಚಾರ ಮಾಡಿರುವುದು ಕರ್ನಾಟಕ ಬಿಜೆಪಿ ಸರ್ಕಾರ, ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ. ಭ್ರಷ್ಟಾಚಾರ ಮಾಡುವುದೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಬಕಾರಿ ಇಲಾಖೆಯಲ್ಲಿ ಕರ್ನಾಟಕ ಸರ್ಕಾರ 700 ಕೋಟಿ ವಸೂಲಿ ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಮಾಡಲು ಆಗದಿದ್ದರೆ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ? ಸುಳ್ಳು ಹೇಳಲು ಇತಿಮಿತಿ ಇರಬೇಕು. ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದಾರೆ. ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದಿರುವುದರಿಂದ ಹತಾಶರಾಗಿ ನನ್ನ ಮತ್ತು ನಮ್ಮ ಸರ್ಕಾರವನ್ನು ಪ್ರಧಾನಿಯವರು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕಾನೂನು ಪ್ರಕಾರ ಮಾಡುವ ತನಿಖೆ ನಡೆಸಲಿ, ಅದಕ್ಕೆ ಯಾವುದೇ ರೀತಿಯ ಪ್ರತಿರೋಧವನ್ನು ನಾವು ಒಡ್ಡುವುದಿಲ್ಲ. ಇಡಿ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಸುಳ್ಳು ಆರೋಪಗಳ ಮೇಲೆ ತನಿಖೆ ನಡೆಯುತ್ತಿದೆ ಎಂಬುದಷ್ಟೇ ಹೇಳಬಲ್ಲೇ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿರುವಂತೆ ಮುಸ್ಲಿಂಮರಿಗೂ ಮೀಸಲಾತಿ ನೀಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ಸರ್ಕಾರ ತೆಗೆದುಕೊಂಡಿಲ್ಲ. ಈಗಾಗಲೇ ಸುಳ್ಳು ಸುದ್ದಿ ಹರಡಿ ಸಮಾಜದ ಸೌಹಾರ್ದತೆ ಕೆಡಿಸಲು ಕರ್ನಾಟಕ ಬಿಜೆಪಿ ಆರಂಭಿಸಿದೆ. ಅವರಿಗೆ ಕೋಮುಗಲಭೆ ಸೃಷ್ಟಿಸುವುದೇ ಕಾಯಕವಾಗಿದೆ. ಬಿಜೆಪಿಯವರೆಂದೂ ಸಮಾಜದಲ್ಲಿ ಶಾಂತಿ, ಸೋದರತ್ವ ನೆಲೆಸಬೇಕೆಂದು ಬಯಸಿದವರೇ ಅಲ್ಲ ಎಂದರು.