ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೋದಿ `ಅಶ್ವಮೇಧ ಕುದುರೆ'ಗೆ ಪ್ರಬುದ್ಧ ಲಗಾಮು

11:47 AM Jun 06, 2024 IST | Samyukta Karnataka

ಪ್ರಬುದ್ಧ ಮತದಾರ. ಮುಗಿದ ಮಹಾ ಚುನಾವಣೆಯ ಫಲಿತಾಂಶ ಗಮನಿಸಿದರೆ ಭಾರತೀಯ ಮತದಾರನೇ ಹೀರೊ. ನಾಲ್ಕು ತಿಂಗಳ ಕಾಲ ಇಡೀ ದೇಶದಲ್ಲಿ ಒಂದು ರೀತಿಯ ಉದ್ವಿಗ್ನತೆ, ಆತಂಕ, ರೋಷಾವೇಷ, ಠೇಂಕಾರಗಳಿಂದ ಭಯಗೊಂಡಿದ್ದ ಮತದಾರ ಮತ ಚಲಾಯಿಸುವ ವೇಳೆ ಎಂತಹ ನಿರ್ಲಿಪ್ತ ಮತ್ತು ಯೋಜನಾ ಬದ್ಧ ವಿವೇಚನೆಯನ್ನು ಬಳಸಿದ್ದಾನೆ ಎನ್ನುವುದು ಇಂದಿನ ಫಲಿತಾಂಶದಿಂದ ವ್ಯಕ್ತವಾಗುವ ಸ್ಪಷ್ಟ ಅಭಿಪ್ರಾಯ.

ಎಷ್ಟು ಚಾಣಾಕ್ಷ ನೋಡಿ. ಯಾರಿಗೂ ಬಹುಮತವಿಲ್ಲ. ಒಕ್ಕೂಟ, ಮಿತ್ರಪಕ್ಷ ಎಲ್ಲವನ್ನೂ ಸಂಭಾಳಿಸಿಕೊಂಡೇ ಮುಂದಿನ ಭಾರತದ ಭವಿತವ್ಯ ಎನ್ನುವುದನ್ನು ತನ್ನ ಬ್ಯಾಲೆಟ್ ಮೂಲಕ ದಿಕ್ಕು ತಪ್ಪಿದವರ, ಸರಿದಾರಿಗೆ ಹೋಗಲು ಆದೇಶ ನೀಡಿದಂತಿದೆ.

ದೇಶಾದ್ಯಂತ ಒಂದು ಅಭಿಪ್ರಾಯ ಇತ್ತು. ಮೋದಿ ಮತ್ತೆ ಪ್ರಧಾನಿಯಾಗಬೇಕು. ಆದರೆ ಈ ಈರ್ಷ್ಯೆ, ಈ ಸೆಡವು, ಈ ತಂತ್ರಗಾರಿಕೆ, ಸರ್ಕಾರದ ದರ್ಪ ಠೇಂಕಾರಗಳಿಗೆ ಲಗಾಮು ಬೇಕೇ ಬೇಕು ಎಂದು. ಆಡಿದ್ದೇ ಆಟ ಮತ್ತು ತಮ್ಮದೇ ಸತ್ಯ ಎಂಬ ಪ್ರತಿಪಾದನೆಯಲ್ಲಿ ತೊಡಗಿದವರಿಗೆ ಲಗಾಮು ಹಾಕಿದಂತಾಗಿದೆ ಅಲ್ಲವೇ?

ಲಗಾಮು ಹಾಕಿದ ರೀತಿಯಲ್ಲಿ ಮತದಾರ ಗುಪ್ತವಾಗಿಯೇ ಕಾರ್ಯನಿರ್ವಹಿಸಿದ್ದಾನೆ. ಹತ್ತು ವರ್ಷಗಳಲ್ಲಿ ಕಳೆದ ಐದು ವರ್ಷ ಒಂದೇ ಪಕ್ಷಕ್ಕೆ ಅತ್ಯಧಿಕ ಬಹುಮತ ಕೊಟ್ಟರೆ ಏನಾದೀತು ಎನ್ನುವುದನ್ನು ಮತದಾರ ಬೆಕ್ಕಸ ಬೆರಗಾಗಿ ಕಂಡಿದ್ದಾನೆ. ಪ್ರಜಾಪ್ರಭುತ್ವದ ಗಟ್ಟಿ ಬೇರಾಗಿರುವ ಜನಾದೇಶವನ್ನೇ ಅಲ್ಲಾಡಿಸುವ ಯತ್ನ, ಪಕ್ಷಗಳ ವಿಭಜನೆ, ಸಾರ್ವಜನಿಕ ಸ್ವತ್ತುಗಳ, ವಿಶೇಷವಾಗಿ ಸಾಂವಿಧಾನಿಕ ಸಂಸ್ಥೆಗಳ ಘನತೆ ಗೌರವಗಳ ನಿರ್ಲಕ್ಷ್ಯ, ಇವೆಲ್ಲಗಳ ಜೊತೆ ಜನತೆಗೆ ಸ್ಪಷ್ಟವಾಗುವ ರೀತಿಯಲ್ಲಿ ಅಧಿಕಾರದ ದುರ್ಬಳಕೆ, ಇವುಗಳಿಗೆಲ್ಲ ತಡೆ ಒಡ್ಡಲೇ ಬೇಕು ಎನ್ನುವ ಮತದಾರ ಪ್ರಭುವಿನ ನಿರ್ಣಯವೇ ಇಂದಿನ ಫಲಿತಾಂಶ.

ಹೌದು. ಎನ್‌ಡಿಎ, ವಿಶೇಷವಾಗಿ ಮೋದಿ ಆಡಳಿತದಲ್ಲಿ ವಿಶ್ವಮಾನ್ಯ ಗೌರವ ದೇಶಕ್ಕೆ ದೊರತಿದೆ. ಹಾಗೆಯೇ ದೇಶ ಆರ್ಥಿಕವಾಗಿ, ವ್ಯಾವಹಾರಿಕವಾಗಿ ಬಲಾಢ್ಯವೂ ಆಗಿದೆ. ಉತ್ತಮ ಆಡಳಿತ ಜನರಿಗೆ ಕಣ್ಣಿಗೆ ರಾಚುತ್ತಿತ್ತು. ಕಾಶ್ಮೀರದಂತಹ ಸಮಸ್ಯೆ, ತ್ರಿವಳಿ ತಲ್ಲಾಖ್ ರದ್ದು ಮತ್ತು ಭಾರತೀಯ ನಾಗರಿಕ ಕಾಯ್ದೆ (ಪೌರತ್ವ ತಿದ್ದುಪಡಿ- ಸಿಎಎ) ಇತ್ಯಾದಿಗಳಿಗಿಂತ ಜನರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಐವತ್ತು ವರ್ಷಗಳಲ್ಲಿ ಆಗದಿದ್ದುದು ಹತ್ತು ವರ್ಷಗಳಲ್ಲಿ ಆಯಿತು. ಮೂಲಭೂತ ಸೌಕರ್ಯಗಳಲ್ಲಿ ನಡೆದ ಕ್ರಾಂತಿಕಾರಕ ಬೆಳವಣಿಗೆ ಪ್ರತಿಪಕ್ಷದವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಿದೆ. ಆದರೆ ಅವೆಲ್ಲವನ್ನೂ ಒಪ್ಪಿಯೂ ನಾಗಾಲೋಟಕ್ಕೆ ತಡೆ ಒಡ್ಡಲು ಕಾರಣ ಸರ್ಕಾರದ ಜನವಿರೋಧಿ ಧೋರಣೆಗಳೇನೋ !?

ನಿಜ. ಕೇಂದ್ರ ಸರ್ಕಾರದಲ್ಲಿ ಕಳೆದ ಹತ್ತು ವರ್ಷದ ಭ್ರಷ್ಟಾಚಾರ ಬೆಳಕಿಗೆ ಬಂದಿಲ್ಲ. ಹಾಗಂತ ಭ್ರಷ್ಟ ವ್ಯವಸ್ಥೆಗೆ ಪೋಷಣೆ ದೊರಕಿಲ್ಲ ಎಂದಿಲ್ಲ. ಭ್ರಷ್ಟರೆಲ್ಲರನ್ನೂ ಒಗ್ಗೂಡಿಸಿ ತನ್ನಲ್ಲಿ ಜೋಡಿಸಿಕೊಂಡಿರುವ `ವಾಷಿಂಗ್ ಮಷಿನ್' ತಂತ್ರ ಜನರ ಕಣ್ಣಿಗೆ ಕಾಣದ್ದೇನಲ್ಲ. ಸರ್ಕಾರಿ ಯೋಜನೆಗಳು ಅದ್ಭುತ ಘೋಷಣೆಗಳಾಗಿ ಉಳಿದವು. ಮೋದಿ ಆದರ್ಶ ಗ್ರಾಮ ಯೋಜನೆಯೇ ಯಾವ ಸಂಸದನೂ, ಯಾವ ಸರ್ಕಾರವೂ ಮಾಡಿಲ್ಲ.

ಮುದ್ರಾ, ಕೌಶಾಲ್ಯಾಭಿವೃದ್ಧಿ ಇತ್ಯಾದಿಗಳು ಜನತೆಗೆ ತಲುಪಿಲ್ಲ. ಲಕ್ಷಾಂತರ ಕೋಟಿ ರೂಪಾಯಿ ಉದ್ಯಮಿಗಳ ಸಾಲ-ಬಡ್ಡಿ ಮನ್ನಾ ಮಾಡಿರುವ ಸುದ್ದಿ ಎಷ್ಟೇ ಗೌಪ್ಯವಾಗಿದ್ದರೂ ಹೊರಗೆ ಬಂದಾಗ ಅದಕ್ಕೆ ಉತ್ತರ ನೀಡುವ ಕಾರ್ಯ ಮೋದಿ ಮತ್ತು ಅವರ ಸರ್ಕಾರ ಪಕ್ಷದಿಂದ ಕೊನೆಗೂ ಆಗಿಲ್ಲ. ಕಣ್ಣಿಗೆ ರಾಚುವಂತೆ ಕೃಷಿ ಬಿಮಾ ಯೋಜನೆಯ ಹಣ ಉದ್ಯಮಿಗಳ ಕೈ ಸೇರಿದ್ದು, ಬೆಲೆ ಏರಿಕೆ ಇವೆಲ್ಲವುಗಳನ್ನೂ ಜನ ಸಹಿಸಿಕೊಂಡರು. ಕಾರಣ. ದೇಶ ಭಕ್ತಿ, ರಾಷ್ಟ್ರೀಯತೆ ಮತ್ತು ಏನೋ ಪರಿವರ್ತನೆ ಆಗುತ್ತಿದೆ ಎನ್ನುವಂತಹ ಒಂದು ಮಹಾ ಉತ್ಸಾಹ.

ಜನರಿಗೆ ಮೋದಿ ಮೇಲೆ ಪ್ರೀತಿ ಅಭಿಮಾನವಿದೆ. ಆದರೆ ಒಟ್ಟಾರೆ ಸರ್ಕಾರ, ಅವರ ತಂಡ ನಡೆದುಕೊಂಡ ರೀತಿ ಇದೆಯಲ್ಲ. ಅದರ ಬಗ್ಗೆ ಭಯವಿದೆ. ಎಷ್ಟೇ, ಏನೇ ಹುಸಿ ಇದ್ದರೂ ಕೂಡ ಅದನ್ನು ನಿಜ ಎಂದು ಸಾಬೀತುಪಡಿಸಲು ಮತ್ತು ಅದಕ್ಕೆ ಪೂರಕವಾಗಿ ವೇದಿಕೆ ಸೃಷ್ಟಿಸಿದ ಮೋದಿ ತಂಡ ಚುನಾವಣೆ ಘೋಷಣೆಯವರೆಗೆ ಯಶಸ್ವಿಯಾಗಿದ್ದೇವೆ ಎಂದೇ ತಿಳಿದುಕೊಂಡಿತ್ತು. ತಾವು, ತಮ್ಮ ವಿಚಾರ, ಧೋರಣೆಗಳಿಗೆ ಅಪಸ್ವರ ಎತ್ತುವವರು ರಾಷ್ಟ್ರ ದ್ರೋಹಿಗಳು ಎನ್ನುವ ಪರಿಕಲ್ಪನೆಯನ್ನು ಬಿತ್ತಿ ಎಂತಹ ಮಟ್ಟಕ್ಕಾದರೂ ಹೊಸಕಿ ಹಾಕುವ ಧೋರಣೆಗೆ ಈಗ ಜನ ಅದು ತಪ್ಪು ಎಂದು ಸ್ಪಷ್ಟಪಡಿಸಿದಂತಾಗಿದೆ.

ಚುನಾವಣೆ ಘೋಷಣೆಯ ವೇಳೆ ಪ್ರಥಮ ಹಂತದಲ್ಲಿ ಅಭಿವೃದ್ಧಿ, ರಾಮ ಮಂದಿರ, ವಿಶ್ವದಲ್ಲಿ ಭಾರತದ ಸ್ಥಾನಮಾನ ಇತ್ಯಾದಿಗಳನ್ನೇ ಪ್ರಧಾನವಾಗಿ ಇಟ್ಟುಕೊಂಡಿದ್ದರಿವರು. ಆದರೆ ಬೆಲೆ ಏರಿಕೆ, ಎನ್‌ಡಿಎ ಪ್ರತಿನಿಧಿಗಳು ಜನರಿಗೆ ತಲುಪಿಲ್ಲ ಎನ್ನುವುದು ಸ್ಪಷ್ಟವಾಗತೊಡಗುತ್ತಿದ್ದಂತೇ ಎರಡನೇ ಹಂತದಿಂದ ಭಾವನಾತ್ಮಕ ವಿಷಯಗಳಿಗೆ ಮಹತ್ವ ದೊರೆಯಿತು. ಪ್ರತಿಪಕ್ಷಗಳನ್ನು ಅಪಾರವಾದ ಕಟು ಟೀಕೆ ಮಾಡಿದ್ದನ್ನು ಜನರೇ ಸಂಶಯದಿಂದ ನೋಡುವಂತಾಯಿತು. ಎಲ್ಲರೂ ಒಂದೇ, ಯಾವ ವಿಷಯ ಸರಿ ಇದೆ ಎನ್ನುವ ಅಭಿಪ್ರಾಯವನ್ನು ಕಂಡುಕೊಂಡರು. ಭ್ರಷ್ಟಾಚಾರಗಳ ಬಗ್ಗೆ ಟೀಕಿಸಿದರೆ ಇವರದ್ದೇ ಹಲವು ರಾಜ್ಯ ಸರ್ಕಾರಗಳು, ಇವರೇ ಸೆಳೆದುಕೊಂಡ ಭ್ರಷ್ಟರು ಕಣ್ಣಿಗೆ ರಾಚುವಂತಾಯಿತು.

ಜನಾದೇಶದ ಬಗ್ಗೆ ಮಾತನಾಡುತ್ತಲೇ ಹಲವು ಪಕ್ಷಗಳನ್ನು ವಿಭಜಿಸಿದ್ದು, ಹಲವು ನಾಯಕರನ್ನು ತಮ್ಮತ್ತ ಸೆಳೆದುಕೊಂಡಿದ್ದು, ಕುಟುಂಬ ರಾಜಕಾರಣವನ್ನು ಮೊದಲು ಟೀಕಿಸಿದರೆ ನಂತರ ಇವರದ್ದೇ ಪಕ್ಷ ಅಣ್ಣ- ತಮ್ಮ; ತಂದೆ- ಮಗ ಎಲ್ಲವನ್ನೂ ಕೂಡ ಅವರಿಗೇ ಅಧಿಕಾರವೇ ಎಂದು ಪ್ರಶ್ನಿಸುಂತಾಯಿತು. ನಿಮ್ಮವರೇ ವಂಶ ಪಾರಂರ‍್ಯ ಬೆಳೆಸಿಲ್ಲವೇ ಎಂದು ಅಮಿತ್ ಶಾರಿಂದ ಹಿಡಿದು ಸಾಮಾನ್ಯ ಪಂಚಾಯ್ತಿ ಸದಸ್ಯರವರೆಗೆ ಬೊಟ್ಟು ಮಾಡಿ ತೋರಿಸಲಾರಂಭಿಸಿದರು.

ಇವೆಲ್ಲವೂ ಎರಡನೇ ಚರಣದಲ್ಲಿ ವಿಫಲವಾದಾಗ ಜಾತಿ ಮತ್ತು ಕೋಮು ವಿಷಯವೇ ಪ್ರಧಾನವಾಯಿತು. ಮಂಗಳಸೂತ್ರವನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಎನ್ನುವುದು; ಇಂಡಿ ಕೂಟ ಪಿತ್ರಾರ್ಜಿತ ಆಸ್ತಿಯನ್ನು ಹಂಚಿಬಿಡುತ್ತದೆ ಎನ್ನುವುದು; ಸ್ಕ್ಯಾನಿಂಗ್ ಮತ್ತು ಕಾಸ್ಟು ಸ್ವತಃ ಪ್ರಧಾನಿಯೇ ಕೈಗೆತ್ತಿಕೊಂಡರು. ನಂತರದ ಆರು ಏಳನೇ ಹಂತದಲ್ಲಿ ಪ್ರತಿಪಕ್ಷದ ಟೀಕೆಗಳು ಪ್ರತ್ಯಾರೋಪಗಳು ವಸ್ತುವಾದವೇ ವಿನಾ ಜನರ ಸಮಸ್ಯೆ ಬಗೆಹರಿಯಲಿಲ್ಲ. ಜನ ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ. ಕಾರಣ ಎನ್‌ಡಿಎ ಮೋದಿಯಾದಿಯಾಗಿ ಜನರನ್ನು ಸಂಪರ್ಕಿಸುವಲ್ಲಿ ಬಹುಶಃ ವಿಫಲವಾಯಿತೇನೋ?

ನಿಮ್ಮ ವೋಟು ಮೋದಿಗೇ ಬೀಳುತ್ತದೆ; ಇದು ಮೋದಿ ಗ್ಯಾರಂಟಿ ಎಂದು ಭಾವನಾತ್ಮಕ ವಿಷಯ ಪ್ರಸ್ತಾಪಿಸಿ ಓಟು ಬೀಳುತ್ತದೆ ಎನ್ನುವ ಭ್ರಮೆಯಲ್ಲಿದ್ದವರಿಗೆ ಈಗ ಶಾಕ್ ಆಗಿದೆ.

ಈಗ ಯಾವ ಮಾಡೆಲ್ ತೋರಿಸುತ್ತಾರೆ? ಯೋಗಿ ಎಂದರು. ಯೋಗಿ ತನ್ನ ನೆಲದಲ್ಲೇ ಹೆಚ್ಚು ಸ್ಥಾನವನ್ನು ಇಂಡಿ ಕೂಟಕ್ಕೆ ನೀಡಿದರು ! ಗುಜರಾತ್ ಫಲಿತಾಂಶ ನಂಬದಷ್ಟು ಅಚ್ಚರಿ ಮೂಡಿಸಿತು.

ಇಷ್ಟಿದ್ದೂ ಕೂಡ ಮೋದಿ ಪ್ರಧಾನಿಯಾಗಲಿ. ಮೋದಿ ಆಡಳಿತ ಬೇಕು ಎನ್ನುವ ಆಶಯ ದೇಶಾದ್ಯಂತ ಇತ್ತು. ಆದರೆ ಅವರ ಮೇಲಿನ ವಿಶ್ವಾಸ ಉಳಿಸಿಕೊಳ್ಳಲು ಅವರದ್ದೇ ಪಕ್ಷ ಹಿಂದೆ ಸರಿಯಿತೇ?

ರಾಮ ಮಂದಿರ ನಿರ್ಮಾಣದ ಬಗ್ಗೆ ಬಹಳ ಭರವಸೆ ಇಟ್ಟಿದ್ದರು. ಆದರೆ ಎಲ್ಲೂ ಕೂಡ ಅದು ಮತವಾಗಿ ಪರಿವರ್ತನೆ ಆಗಿಲ್ಲ. ಮೋದಿ ಗ್ಯಾರಂಟಿ ಎನ್ನುವುದಾಗಲೀ, ೫೬ ಇಂಚಿನ ಎದೆಯಾಗಲೀ, ದೇಶ ಐದನೇ ಆರ್ಥಿಕ ಸದೃಢ ದೇಶವಾಗಿದೆ ಎನ್ನುವ ಘೋಷಣೆಯಾಗಲೀ ಜನ ಭಾಗಶಃ ಒಪ್ಪಿಕೊಂಡರೇ ಹೊರತು ಸಹಮತ ದೊರೆಯಲಿಲ್ಲ. ಜನರಿಗೆ ತುಂಬ ಕಾಡಿದ್ದು ನಿರುದ್ಯೋಗ, ಅನಿಶ್ಚಿತತೆ, ಆತಂಕ, ದುಗುಡ.

ಕರ್ನಾಟಕ ವಿಧಾನಸಭಾ ಚುನಾವಣೆಯೇ ಎಚ್ಚರಿಕೆಯಾಗಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದ ಧೋರಣೆ, ಪ್ರತಿಪಕ್ಷದ ಸರ್ಕಾರವನ್ನು ಹತ್ತಿಕ್ಕುವುದು ಅಥವಾ ಒಡೆಯುವುದೇ ಆಗಿಬಿಟ್ಟಿತ್ತು. ಬರ ಪರಿಹಾರ, ಅಥವಾ ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಅನುದಾನಕ್ಕೆ ಕರ್ನಾಟಕ, ಕೇರಳ, ತಮಿಳುನಾಡು ಇವೆಲ್ಲ ನ್ಯಾಯಾಲಯದ ಮೊರೆಯನ್ನೂ ಹೋಗಬೇಕಾಯಿತು. ಚುನಾವಣಾ ಆಯೋಗದ ಹಲ್ಲು ಕಿತ್ತಿದ್ದು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕ, ಹಲವು ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿಯನ್ನೇ ಮಾಡದಿರುವುದು, ಮಾಹಿತಿ ಹಕ್ಕು ಆಯೋಗ, ಲೋಕಪಾಲದ ಜೊತೆಗೆ ಹಲವು ಸ್ವಾಯತ್ತ ಸಂಸ್ಥೆಗಳ ನಿರ್ಲಕ್ಷö್ಯ ಬಹುಶಃ ದೇಶ ಮಟ್ಟದಲ್ಲಿ ಸಮಸ್ಯೆಯಾಯಿತೇನೋ?

ಇದರ ಬದಲು ಅಲ್ಪಸ್ವಲ್ಪ ಪಡ್ಡೆತನ- ಪೆದ್ದುತನ ತೋರುತ್ತಿದ್ದ ರಾಹುಲ್, ಯುಪಿಎ- ಇಂಡಿ ಘಟಬಂಧನ್ ಸಹನೆಯಿಂದ ಜನರ ಬಳಿ ತೆರಳಿದ್ದು ಅಷ್ಟರ ಮಟ್ಟಿಗೆ ಲಾಭದಾಯಕವಾಯಿತು. ಜನಕ್ಕೆ ಇಂಡಿ ಕೂಟ ಸಹನೀಯವೆನಿಸಿದ್ದಕ್ಕೆ ಎನ್‌ಡಿಎ ಹತ್ತು ವರ್ಷಗಳಲ್ಲಿ ಆಗಿರುವ ಇಂತಹ ಹಲವು ಅಪಸವ್ಯಗಳಂತೂ ಇದ್ದೇ ಇವೆ. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನಿಯುಕ್ತಿಯಾದ ನಂತರ ಕಾಂಗ್ರೆಸ್ ಚಿತ್ರಣ ಬದಲಾದದ್ದು, ರಾಹುಲ್ ಗಾಂಧಿ ಯಾತ್ರೆ ಕೈಗೊಂಡಿದ್ದು, ೨೮ ಪಕ್ಷಗಲನ್ನು ಒಗ್ಗೂಡಿಸಿ ಜನತಾ ಜನಾರ್ಧನ ಬಳಿ ಹೋದದ್ದು, ವೈಯಕ್ತಿಕ ಟೀಕೆಗಿಳಿಯದೆ, ಸರ್ಕಾರ, ವ್ಯವಸ್ಥೆ, ಆಡಳಿತ ಟೀಕಿಸಿ `ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಮತ್ತು ಗ್ಯಾರಂಟಿ' ಭರವಸೆ ಬಿತ್ತಿದ್ದು ಫಲ ನೀಡಿದೆ... ಎಲ್ಲಕ್ಕೂ ಹೆಚ್ಚಾಗಿ ಎನ್.ಡಿ.ಎ ಗೆ ಲಗಾಮು ಬೇಕಿದೆ... ಎಂಬುದನ್ನು ಜನರೇ ನಿರ್ಧರಿಸಿದಂತಿದೆ ಫಲಿತಾಂಶ.

ಇರಲಿ. ವಿಕಸಿತ ಭಾರತದ ಭವ್ಯ ಕನಸುಗಳೊಂದಿಗೆ ಹೊರಟಿದ್ದ `ಅಶ್ವಮೇಧ ಕುದುರೆ'ಯನ್ನು ಭಾರತೀಯ ಎದುರಿಸಿದ್ದಾನೆ. ಮುಂದಿನ ಒಂದೆರಡು ದಿನಗಳ ರಾಜಕೀಯ ಶಾಲೆಯಲ್ಲಿ ಯಾವ್ಯಾವ ಪಾಠಗಳು ನಡೆಯುತ್ತವೆ ನೋಡೋಣ. ಆದರೆ ಯಾರೇ ಗದ್ದುಗೆ ಏರಲಿ. ಈ ಸಲ ಮತದಾರ ಪ್ರಭು ಏಕಾಗಿ ಇಂತಹ ಪಾಠ ಕಲಿಸಿದ ಎನ್ನುವುದು ಅವಧಿಯ ಉದ್ದಕ್ಕೂ `ಆತ್ಮಾವಲೋಕನ ಪಾಠ'ವಾಗಿರಲಿ. ಇದುವೇ ಜನಾಶಯ.

Next Article