For the best experience, open
https://m.samyuktakarnataka.in
on your mobile browser.

ಮೋದಿ ಕಾಂಗ್ರೆಸ್‌ಗೆ ಬೈದಷ್ಟು ಒಳ್ಳೆಯದಾಗುತ್ತದೆ: ಖರ್ಗೆ

07:59 PM Apr 29, 2024 IST | Samyukta Karnataka
ಮೋದಿ ಕಾಂಗ್ರೆಸ್‌ಗೆ ಬೈದಷ್ಟು ಒಳ್ಳೆಯದಾಗುತ್ತದೆ  ಖರ್ಗೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಹಾಗೂ ನಾಯಕರನ್ನು ಬೈಯುವುದೆ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ‌ ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸೇಡಂ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಮಾತನಾಡಿದರು.

ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಹಾಗೂ ನನಗೆ ಬೈಯುತ್ತಲೇ ಇರುತ್ತಾರೆ. ನಮಗೆ ಬೈಯುವ ಬದಲು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಮೋದಿ ವಿವರಿಸಲಿ ಎಂದರು.

ಆರ್ಟಿಕಲ್ 371 (J) ಜಾರಿಗೆ ತರಲು 330 ಸದಸ್ಯರ ಬೆಂಬಲ ಬೇಕಾಗಿತ್ತು. ನಾನು ಎಲ್ಲ ಸದಸ್ಯರ ಮನೆಗೆ ವೈಯಕ್ತಿಕ ಭೇಟಿ ನೀಡಿ ಅವರ ಬೆಂಬಲ ಕೋರಿದ್ದೆ. ಅವರೆಲ್ಲರ ಸಹಕಾರದಿಂದ ಅದು‌ ಜಾರಿಯಾಗಿತ್ತು. ಈ ಪ್ರಮುಖ ಯೋಜನೆಯ ಜೊತೆಗೆ ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ ಐಸಿ, ಜವಳಿ ಪಾರ್ಕ್, ರೇಲ್ವೆ ಕೋಚ್ ಫ್ಯಾಕ್ಟರಿ ಮುಂತಾದ ಯೋಜನೆಗಳು ನಮ್ಮ ಕಾಲದಲ್ಲಿ ಆಗಿದ್ದವು. ಇಂತಹ ಯಾವುದಾದರೂ ಯೋಜನೆಯನ್ನು ಮೋದಿ ನಮ್ಮ ಜಿಲ್ಲೆಗೆ ಕೊಟ್ಟಿದ್ದರೆ ಹೇಳಲಿ ಎಂದು ಸವಾಲಾಕಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದಿ ಖರ್ಗೆ, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಐದು ಪ್ರಮಖ ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ ದೇಶದ ಪೂರ್ವ ಪಶ್ಷಿಮ ಹಾಗೂ ಉತ್ತರ ದಕ್ಷಿಣದವರೆಗೆ ಪಾದಯಾತ್ರೆ ಮಾಡಿ ಜನರ ಕಷ್ಟ ಅರಿತಿದ್ದಾರೆ.

50 ವರ್ಷದಲ್ಲೇ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ, ಸ್ವತಂತ್ರ ನಂತರ ನೆಹರು ಅವರು ಪ್ರಜಾತಂತ್ರ ವ್ಯವಸ್ಥೆ ಯನ್ನು‌ ಉಳಿಸದಿದ್ದರೆ ಹಾಗೂ ಅಂಬೇಡ್ಕರ್ ಸಂವಿಧಾನ ತರದಿದ್ದರೆ ನೀವು ಪ್ರದಾನಿಯಾಗುತ್ತಿರಲಿಲ್ಲ ಹಾಗೂ ಅಮಿತ್ ಶಾ ಗೃಹ ಸಚಿವನಾಗುತ್ತಿರಲಿಲ್ಲ ಎಂದು ಟಾಂಗ್ ನೀಡಿದರು.

"ನಾರಿ ನ್ಯಾಯ, ಯುವನ್ಯಾಯ, ರೈತನ್ಯಾಯ, ಶ್ರಮಿಕ್ ನ್ಯಾಯ, ಜಾತಿ ನ್ಯಾಯ ಎನ್ನುವ ನ್ಯಾಯಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದ್ದು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಮೋದಿ ಸುಳ್ಳಿನ‌ ಸರದಾರ. ನಮ್ಮ ಪ್ರಣಾಳಿಕೆಯನ್ನು ಟೀಕಿಸಿ ಕಾಂಗ್ರೆಸ್ ಮಂಗಲಸೂತ್ರ ಕಿತ್ತುಕೊಳ್ಳುತ್ತದೆ ಹಾಗೂ ಸಂಪತ್ತನ್ನು ಸಮಾನವಾಗಿ ಹಂಚುತ್ತದೆ ಎಂದು ಸುಳು ಹೇಳುತ್ತಿದ್ದಾರೆ." ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಅವರು ಈ‌ ಸಂದರ್ಭದಲ್ಲಿ ಮನವಿ ಮಾಡಿದರು.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ನೀಡಿ ಮೋದಿ ಸರ್ಕಾರವನ್ನು ಕೆಳಗೆ ಇಳಿಸಲು ಸಹಕರಿಸಿ ಎಂದರು.

ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ದೋರಣೆ ಅನುಸರಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುವಂತೆ ಸನ್ನಿವೇಶ ನಿರ್ಮಾಣವಾಗಿತ್ತು. ನಂತರ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಮೊರೆ‌ ಹೋಗಬೇಕಾಯಿತು ಎಂದರು.

ಬಿಜೆಪಿ 400 ಸೀಟು ಗೆದ್ದಲ್ಲಿ ಎಸ್ ಸಿ‌, ಎಸ್ ಟಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸುತ್ತದೆ. ಹಾಗಾಗಿ, ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿ ಹುನ್ನಾರ ವಿಫಲಗೊಳಿಸಿ ಎಂದು ರೇವಂತರೆಡ್ಡಿ ಮನವಿ ಮಾಡಿ ಕಳೆದ ಸಲ 28 ಬಿಜೆಪಿ ಸೀಟುಗಳನ್ನು ಗೆಲ್ಲಿಸಿದ್ದೀರಿ ಈ ಸಲ ಕಾಂಗ್ರೆಸ್ ನ 28 ಸೀಟು ಗೆಲ್ಲಿಸಿ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ದೆಹಲಿ ಪೊಲೀಸರು ಹೈದರಾಬಾದ್ ನ ನನ್ನ ಮನೆಗೆ ನೋಟಿಸು ಕೊಡಲು ಬಂದಿದ್ದಾರಂತೆ. ಮೋದಿಯವರೇ ಇ.ಡಿ, ಐ.ಡಿ ಯನ್ನು ಕಳಿಸುತ್ತೀರಿ ಈಗ ದಿಲ್ಲಿ ಪೊಲೀಸರನ್ನು ಕಳಿಸಿದ್ದೀರಿ ನಾನು ಇದಕ್ಕೆಲ್ಲ ಹೆದರುವುದಿಲ್ಲ‌ ಎಂದು ರೇವಂತ್ ರೆಡ್ಡಿ ನಾನು ನಿಮ್ಮ ಪಕ್ಕದ ತೆಲಂಗಾಣದಲ್ಲಿ ಇರುತ್ತೇನೆ. ಯಾವುದೇ ಸಂದರ್ಭ ಎದುರಾದರೆ ನನಗೆ ಒಂದು ಕರೆ ನೀಡಿ ನಾನು ನಿಮ್ಮ ಸಹಾಯಕ್ಕೆ ಓಡೋಡಿ‌ ಬರುತ್ತೇನೆ ಎಂದು ಕರ್ನಾಟಕದ ಜನರಿಗೆ ಅಭಯ ನೀಡಿದರು.

ಕೇಂದ್ರ ಸರ್ಕಾರ ಅಸಹಕಾರ ಮುಂದುವರೆಸಿದ್ದರಿಂದ ಅನ್ನಭಾಗ್ಯ ಯೋಜನೆ ಜಾರಿಗೆಗೊಳಿಸುವಲ್ಲಿ ತುಸು ತಡವಾಯಿತು. ಆದರೂ ಕೂಡಾ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆಯಾಗಿ ಫಲಾನುಭವಿಗಳಿಗೆ ಅಕ್ಕಿ ಖರೀದಿಗಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಲು ಕ್ರಮ‌ಕೈಗೊಂಡಿತು. ಇದು ಬಡವರ ಪರವಾದ ನಮ್ಮ ಬದ್ಧತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಿದೆ ಎಂದ ಪಾಟೀಲ್ ಪಕ್ಷದ ಅಭ್ಯರ್ಥಿಗೆ ನಿಮ್ಮ ಆಶೀರ್ವಾದ ನೀಡಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ 40 ಸಾವಿರಕ್ಕೂ ಅಧಿಕ ಮತಗಳಿಂದ ಆರಿಸಿ ಕಳಿಸಿದಿರಿ ಅದರಂತೆ ರಾಧಾಕೃಷ್ಣ ಅವರಿಗೂ ಮತಗಳ ಆಶೀರ್ವಾದ ಮಾಡಿ ಎಂದರು.

ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲ, ನಾಸೀರ್ ಹುಸೇನದ, ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಯು.ಬಿ.ವೆಂಕಟೇಶ್ ಸೇರಿದಂತೆ ಹಲವರಿದ್ದರು.