ಮೋದಿ ಗ್ಯಾರಂಟಿ, ಶಾಶ್ವತ, ಸಾಮಾಜಿಕ ನ್ಯಾಯದ ಗ್ಯಾರಂಟಿ
ಹುಬ್ಬಳ್ಳಿ: ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಜವಾಬ್ದಾರಿಯಿಂದ ನಾವು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಮತ್ತೊಮ್ಮೆ ಅದನ್ನು ಜನರ ಮುಂದಿಟ್ಟು ಚರ್ಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆ ವಿಶ್ವಾಸದ ಮೇರೆಗೆ ಜವಾಬ್ದಾರಿಯಿಂದ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಲಹೆ ಸೂಚನೆಗಳನ್ನು ಪಡೆದು ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಅದರಲ್ಲಿ ಏನೇನಿದೆ ಎಂದು ಜನರ ಮುಂದಿಟ್ಟು, ಚರ್ಚಿಸುತ್ತೇವೆ ಎಂದರು.
ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ, ದೇಶ ಕಟ್ಟುವ ಗ್ಯಾರಂಟಿ, ಬದುಕು ಕಟ್ಟುವ ಗ್ಯಾರಂಟಿ, ಸಾಮಾಜಿಕ ನ್ಯಾಯ ನೀಡುವ ಗ್ಯಾರಂಟಿ ಎಂದರು.
ಸಂವಿಧಾನ ತಿದ್ದುಪಡಿಗೂ ಅವಕಾಶ ಇಟ್ಟಿದ್ದಾರೆ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿಯವರು, ಡಾ. ಬಿ.ಆರ್ ಅಂಬೇಡ್ಕರ್ ಅವರು ದೂರದೃಷ್ಟಿಯಿಂದ ಸಂವಿಧಾನ ರಚಿಸಿದ್ದು, ಅದಕ್ಕೆ ಜೀವಂತಿಕೆಯಿಟ್ಟು ತಿದ್ದುಪಡಿಗೂ ಅವಕಾಶ ಇಟ್ಟಿದ್ದಾರೆ ಎಂದರು.
ನಾವು ಬ್ರಿಟಿಷರಿಂದ ಪಡೆದ ಸ್ವಾತಂತ್ರ‍್ಯವನ್ನು, ಪ್ರಜಾಪ್ರಭುತ್ವವನ್ನು ಹೇಗೆ ನಿಭಾಯಿಸಬೇಕು ಎನ್ನುವ ಚಿಂತನೆ ನಮಗೆ ಇರಲಿಲ್ಲ. ಅದಕ್ಕೊಂದು ಚೌಕಟ್ಟು, ನೀತಿ, ರೀತಿಯನ್ನು ಸಂವಿಧಾನದ ಮೂಲಕ ಅಳವಡಿಸಿ ಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರ್. ಅವರ ಚಿಂತನೆ, ತತ್ವ-ಸಿದ್ಧಾಂತ ಇಂದಿಗೂ ಪ್ರಸ್ತುತ. ಅವರು ದೇಶಕ್ಕೆ ದೊಡ್ಡ ಶಕ್ತಿ ಎಂದರು.