For the best experience, open
https://m.samyuktakarnataka.in
on your mobile browser.

ಮೋದಿ ವಿಶ್ವ ಶ್ರೇಷ್ಠ ನಾಯಕ ಎಂಬುದನ್ನು ಸಾಬೀತು ಪಡಿಸಿದ ಮಾಲ್ಡಿವ್ಸ್

09:09 PM Jan 09, 2024 IST | Samyukta Karnataka
ಮೋದಿ ವಿಶ್ವ ಶ್ರೇಷ್ಠ ನಾಯಕ ಎಂಬುದನ್ನು ಸಾಬೀತು ಪಡಿಸಿದ ಮಾಲ್ಡಿವ್ಸ್

ಮಂಗಳೂರು: ಪ್ರಧಾನಿ ಮೋದಿಯವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ಭಾರತೀಯರ ಆಕ್ರೋಶಕ್ಕೆ ಗುರಿಯಾದ ಮಾಲ್ಡಿವ್ಸ್ ತನ್ನ ಮೂರು ಸಚಿವರ ತಲೆದಂಡಗೊಳಿಸಿ, ಭಾರತದ ಕ್ಷಮೆಯಾಚಿಸಿರುವುದು, ಇಡೀ ಜಗತ್ತಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ವರ್ಚಸ್ಸಿಗೆ, ಜನಪ್ರಿಯತೆಗೆ ಸಾಕ್ಷಿ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ನಮ್ಮ ಪ್ರಧಾನಿಗಳನ್ನು ಸುಖಾಸುಮ್ಮನೆ ಟೀಕಿಸಿ ಭಾರತದಾದ್ಯಂತ ಆಕ್ರೋಶಕ್ಕೆ ಕಾರಣವಾಗಿ ಬಾಯ್ಕಾಟ್-ಮಾಲ್ಡೀವ್ಸ್ ಅಭಿಯಾನ ಶುರುವಾದ ಬೆನ್ನಲೇ ಭಾರತದಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿದ್ದು, ಮುಂದಿನ ದಿನಗಳಲ್ಲಿಯೂ ಅದು ಮುಂದುವರೆಯುವುದರಿಂದ ಆ ದೇಶಕ್ಕೆ ಆರ್ಥಿಕವಾಗಿ ದೊಡ್ಡ ಹೊಡೆತವುಂಟಾಗಿದೆ. ಇದರಿಂದ ಆ ದೇಶ ಕಂಗಾಲಾಗಿದೆ.
ಪ್ರಧಾನಿ ಮೋದಿಯವರ ಜನಪ್ರಿಯತೆ ಹಾಗೂ ಭಾರತದ ಸಾಮರ್ಥ್ಯವನ್ನು ಕಂಡು ದಂಗಾಗಿರುವ ಮಾಲ್ಡಿವ್ಸ್, ಅವಹೇಳನಕಾರಿಯಾಗಿ ಟೀಕಿಸಿದ ತನ್ನ ಸಚಿವರನ್ನು ಅಮಾನತುಗೊಳಿಸಿದ್ದಲ್ಲದೇ ಭಾರತದ ಕ್ಷಮೆ ಯಾಚಿಸಿರುವುದು ಇಡೀ ಜಗತ್ತು ನೋಡುತ್ತಿದೆ. ಇಂತಹ ಸಂದರ್ಭದಲ್ಲಿಯೂ ನಮ್ಮಲ್ಲಿ ಕೆಲವು ಅಪ್ರಬುದ್ಧ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರ ಬಗ್ಗೆ ತುಚ್ಛವಾಗಿ ಮಾತನಾಡಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದು ಅತ್ಯಂತ ಬೇಸರದ ಸಂಗತಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸಿಎಂ ಡಿಕೆಶಿ ಹೇಳಿಕೆಗೆ ತಿರುಗೇಟು:
ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಮಂತ್ರಾಕ್ಷತೆ ಹಂಚುತ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಕಾಮತ್, ರಾಜ್ಯದ ಜನರಿಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ೫ ಕೆ.ಜಿ. ಅಕ್ಕಿ ವಿತರಣೆಯಾಗುತ್ತಿದೆ. ಆದರೆ ಅಧಿಕಾರಕ್ಕೇರಿ ೮ ತಿಂಗಳು ಕಳೆದರೂ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ ೧೦ ಕೆ.ಜಿ. ಅಕ್ಕಿ ಎಲ್ಲಿ? ಅಕ್ಕಿ ಕೊಡಲಾಗದೇ ರಾಜ್ಯದ ಜನರಿಗೆ ಮೋಸ ಮಾಡಿದ ಕಾಂಗ್ರೆಸ್, ಜನರು ಆಕ್ರೋಶಗೊಂಡಾಗೆಲ್ಲಾ ಅವರ ಗಮನವನ್ನು ಮತ್ತೊಂದಷ್ಟು ದಿನ ಬೇರೆಡೆ ಸೆಳೆಯಲು ಇಂತಹ ಪುಕ್ಕಟೆ ಹೇಳಿಕೆ ಕೊಟ್ಟು ಹೋಗುತ್ತಾರೆ ಅಷ್ಟೇ ಎಂದು ಪ್ರಕಟಣೆಯಲ್ಲಿ ಕಾಮತ್ ತಿಳಿಸಿದ್ದಾರೆ.