ಮೋದಿ ಹವಾದ ಮುಂದೆ ಗ್ಯಾರಂಟಿಗಳು ಗೌಣ
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರ ಹವಾದ ಮುಂದೆ ಈ ಕಾಂಗ್ರೆಸ್ಸಿನ ಪಂಚ ಗ್ಯಾರಂಟಿಗಳು ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಮೇಲೆ ಕಾಂಗ್ರೆಸ್ ನಂಬಿಕೊಂಡಿದೆ. ಇದು ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶದಲ್ಲಿ ನರೇಂದ್ರ ಮೋದಿಯವರು ಮಾಡಿರುವ ಕೆಲಸ ಕಾರ್ಯಗಳೇ ಜನರು ಮೆಚ್ಚಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿಗಳಿಗೆ ಜನರು ಮನ್ನಣೆ ನೀಡುವುದಿಲ್ಲ ಎಂದು ಒತ್ತಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತದ ವಿರುದ್ಧ ಪ್ರತಿನಿತ್ಯ ಟೀಕೆ ಮಾಡುತ್ತಿರುವ ಕಾಂಗ್ರೆಸ್ಸಿಗರು ಮೊದಲು ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ಜೆಡಿಎಸ್ ಮೈತ್ರಿ ಬಗ್ಗೆ ಪತ್ರಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ದೇವೇಗೌಡರ ನಿರ್ಧಾರದಿಂದ ಮೈತ್ರಿ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ದೇವೇಗೌಡರ ಅನುಭವ, ಬಿಜೆಪಿಯ ಮೋದಿ ಅಲೆ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವುಶ್ವಾಸ ವ್ಯಕ್ತಪಡಿಸಿದರು.
ಮೈತ್ರಿಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಲೋಕಸಭಾ ಚುನಾವಣೆ ಸೇರಿದಂತೆ ಮುಂದೆ ಬರುವ ಸ್ಥಳೀಯ ಚುನಾವಣೆಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೋದಿಯವರು ಮೂರನೇ ಬಾರಿಯೂ ಪ್ರಧಾನಿ ಆಗುತ್ತಾರೆ. ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮುಂದಿನ ಐದು ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ. ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರೋಧಿ ಧೋರಣೆ ಅನುಸರಿಸುತ್ತಿದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ. ಇಂದಿರಾ ಗಾಂಧಿ ಸದಸ್ಯರೆಲ್ಲರಿಗೂ ಕೊಟ್ಟಿದೆ. ಅಂಬೇಡ್ಕರ್ ಅವರಿಗೆ ದೆಹಲಿಯಲ್ಲಿ 6*3 ಜಾಗ ಕೊಟ್ಟಿಲ್ಲ. ಹೀಗಾಗಿ ಮುಂಬೈನ ದಾದರ್ ನಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು.
ಅದೇ ದೆಹಲಿಯಲ್ಲಿ ನೆಹರೂ… ಎಕರೆ, ಇಂದಿರಾ ಗಾಂಧಿ ಅವರಿಗೆ 45 ಎಕರೆ, ರಾಜೀವ್ ಗಾಂಧಿಗಡ 15 ಎಕರೆ ಜಾಗ ಕೊಟ್ಟರು. ಅಂಬೇಡ್ಕರ್ ಅವರಿಗೆ ಜಾಗ ಕೊಡಲಿಲ್ಲ. ಇದು ಸರಿನಾ ಎಂದು ಪ್ರಶ್ನಿಸಿದರು.
ಮೋದಿ ಸರ್ಕಾರ ಅಂಬೇಡ್ಕರ್ ಊರು ಮತ್ತು ಮನೆಯನ್ನು ಅಭಿವೃದ್ಧಿ ಮಾಡಿದೆ. ನಾಗಪುರದಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದೀಕ್ಷಭೂಮಿಯನ್ನು ಅಭಿವೃದ್ಧಿ ಮಾಡಿದೆ. ಹಾಗೆಯೇ ಲಂಡನ್ ನಲ್ಲಿ ಶಿಕ್ಷಣ ಪಡೆದ ಜಾಗವನ್ನು ಹಾಸ್ಟೆಲ್ ಮಾಡಿದೆ. ಅಂಬೇಡ್ಕರ್ ಅವರು ಸಂಸದರಾಗಿ ದೆಹಲಿಯಲ್ಲಿದ್ದ ಮನೆಯನ್ನು ಮ್ಯೂಸಿಯಂ ಆಗಿ ಮಾಡಿದೆ. ಕಾಂಗ್ರೆಸ್ ಎರಡು ಚುನಾವಣೆಗಳನ್ನು ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಎಸ್ ಸಿ- ಎಸ್ ಟಿ ಅಭಿವೃದ್ಧಿಗೆ ಮೀಸಲಿಟ್ಟ ಅನುಧಾನವನ್ನು ಬೇರೆ ಅಭಿವೃದ್ಧಿಗೆ ಬಳಜೆ ಮಾಡಿಕೊಂಡು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹರ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಹರಿಹರ ಶಾಸಕ ಬಿ.ಪಿ.ಹರೀಶ್, ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಸೇರಿದಂತೆ ಇನ್ನಿತರರಿದ್ದರು. ಇದೇ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಜನ್ಮದಿನ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಸಿಹಿ ತಿನಿಸಿ ಶುಭಾಶಯ ಕೋರಿದರು.