ಮೋಹನ್ ಹೆಗಡೆ ಅವರಿಗೆ ಕೆ.ಶಾಮರಾವ್ ಪ್ರಶಸ್ತಿ ಪ್ರದಾನ
ಕಾರವಾರ: ಹೊನ್ನಾವರ ತಾಲೂಕಿನ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆದ ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಕೆ. ಶಾಮರಾವ್ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ಕಾರ್ಯನಿರ್ವಾಹಕ ಸಂಪಾದಕರಾದ ಮೋಹನ್ ಹೆಗಡೆ ಅವರಿಗೆ ಹಾಗೂ ಜಿ.ಎಸ್ ಹೆಗಡೆ ಅಜ್ಜೀಬಳ ಪುರಸ್ಕಾರವನ್ನು ಹೊನ್ನಾವರದ ಪತ್ರಕರ್ತ ಸತೀಶ್ ತಾಂಡೇಲ್ ಅವರಿಗೆ ಪ್ರದಾನ ಮಾಡಲಾಯಿತು.
ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದಲ್ಲಿ ಜಿಲ್ಲಾ ವರದಿಗಾರರಾಗಿ, ಸಂಪಾದಕರಾಗಿ, ವ್ಯವಸ್ಥಾಪಕ ಸಂಪಾದಕರಾಗಿ, ಇದೀಗ ಲೋಕಶಿಕ್ಷಣ ಟ್ರಸ್ಟ್ ನಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ, ಸಂಯುಕ್ತ ಕರ್ನಾಟಕದಲ್ಲಿ ಬರುವ ಜನಾದೇಶ ಅಂಕಣದ ಮೂಲಕ ಮನೆಮಾತಾಗಿರುವ ಮೋಹನ್ ಹೆಗಡೆ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮೀನುಗಾರಿಕೆ ಬಂದರು ಹಾಗೂ ಒಳನಾಡು ಸಚಿವ ಮಂಕಾಳ ವೈದ್ಯ, ಶಾಸಕ ದಿನಕರ ಶೆಟ್ಟಿ ಅವರು ಪ್ರಸಸ್ತಿ ಪ್ರದಾನ ಮಾಡಿದರು.
ಇದೇ ವೇಳೆ ಜಿ.ಎಸ್ ಹೆಗಡೆ ಅಜ್ಜೀಬಳ ಪುರಸ್ಕಾರವನ್ನು ಹೊನ್ನಾವರದ ಪತ್ರಕರ್ತ ಸತೀಶ್ ತಾಂಡೇಲ್ ಅವರಿಗೂ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾಡಲಾಗದ ಕೆಲಸವನ್ನು ಇಂದಿಗೂ ಪತ್ರಿಕಾರಂಗ ಮಾಡುತ್ತಿದೆ. ಸಮಾಜವನ್ನು ತಿದ್ದುವುದು ಪತ್ರಿಕಾ ರಂಗ ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಇದ್ದದ್ದನ್ನು ಇದ್ದಂಗೆ ಬರೆಯುವವರಿಗೆ ಇಂದಿಗೂ ಗೌರವ ಇದೆ. ಆದರೆ ಕೆಲ ಪತ್ರಿಕೆಗಳು ಮಾಲಕರ ಕೈ ಅಲ್ಲಿ ಇರುವ ಕಾರಣ ಬದಲಾವಣೆಗಳಾಗುವ ಸ್ಥಿತಿ ಇದೆ. ಪತ್ರಿಕಾ ರಂಗ ಶ್ರೇಷ್ಠವಾದದ್ದು, ಆದ್ದರಿಂದ ಮಾಧ್ಯಮದವರು ಪ್ರತಿ ನಿತ್ಯ ಜನಸಾಮಾನ್ಯರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದರು.
ಮೋಹನ್ ಹೆಗಡೆ ಅವರು ಶ್ರೇಷ್ಠವಾದ ವಸ್ತು ನಿಷ್ಠರಾದವರು. ಕೆ. ಶಾಮರಾವ್ ಪ್ರಶಸ್ತಿ ಮೋಹನ್ ಹೆಗಡೆ ಅವರಿಗೆ ದೊರೆತಿರುವುದು ಪ್ರಶಸ್ತಿ ತೂಕ ಹೆಚ್ಚುವಂತಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋಹನ್ ಹೆಗಡೆ ಅವರು, ತವರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಖುಷಿ ತಂದಿದೆ. ಇಂದಿಗೂ ನಮ್ಮ ಸಂಸ್ಥೆಯಲ್ಲಿ ನನ್ನನ್ನು ಶಾಮರಾವ್ ದತ್ತು ಪುತ್ರ ಎಂದು ಭಾವಿಸುತ್ತಾರೆ. ಮುಳುಗಿ ಹೋದ ಸಂಸ್ಥೆಯನ್ನು ಕಟ್ಟಿ ನಿಲ್ಲಿಸಿದ ಶಕ್ತಿ ಶಾಮರಾವ್ ಅವರದ್ದು. ಪ್ರಶಸ್ತಿ ಘೋಷಣೆ ಮಾಡಿದಾಗ ನನಗಿಂತಲೂ ಹಿರಿಯರು ಇರುವಾಗ ಈ ಪ್ರಶಸ್ತಿ ತಗೊಳ್ಳುವುದೋ ಬಿಡುವುದೋ ಎಂಬ ಯೊಚನೆ ಮಾಡಿದೆ. ಆದರೆ ಈ ಪ್ರಶಸ್ತಿ ಪ್ರಾರಂಭಕ್ಕೆ ನಾನು ಕಾರಣ ಇರುವ ಕಾರಣ ಪ್ರಶಸ್ತಿ ಸ್ವೀಕಾರ ಮಾಡಲು ಒಪ್ಪಿಕ್ಕೊಂಡಿದ್ದೇನೆ. ಇದೀಗ ಪ್ರಶಸ್ತಿ ಸ್ವೀಕಾರದಿಂದ ಖುಷಿಯಾಗಿದೆ ಎಂದರು.
ಉತ್ತರಕನ್ನಡ ಜಿಲ್ಲೆ ಪತ್ರಿಕೋದ್ಯಮಕ್ಕೆ ಕಾರ್ಖಾನೆ ಇದ್ದಂತೆ. ಕಣ್ಣು ಬಿಟ್ಟರೆ ವಸ್ತು ಸಿಗುತ್ತೆ. ಕಿವಿ ತೆರೆದು ಕೇಳಿದರೆ ಜಾಗೃತಗೊಳಿಸುವ ಕೆಲಸ ಸಿಗುತ್ತದೆ. ಜಿಲ್ಲೆಯಲ್ಲಿ ಇಂದಿಗೂ ಅದೇಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದೆ ಎಂದರು.
ಇಂದು ಪತ್ರಿಕೋದ್ಯಮವನ್ನು ಬೆರೆ ರಿತಿಯಲ್ಲಿಯೇ ವ್ಯಾಖ್ಯಾನಿಸಬಹುದಾಗಿದೆ. ಸುದ್ದಿಯ ಸತ್ಯಾಸತ್ಯತೆ ಬಗ್ಗೆ ತಿಳಿದುಕ್ಕೊಳ್ಳುವ ವ್ಯವಧಾನ ಇಲ್ಲದಂತಾಗಿದೆ. ಕೋವಿಡ್ ಬಳಿಕ ಪತ್ರಿಕಾ ಓದುಗರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಪತ್ರಿಕೆಗಳು ವಾಣಿಜ್ಜಿಕರಣಗೊಳ್ಳುತ್ತಿವೆ. ಇನ್ನೊಂದು ಸ್ವಲ್ಪ ದಿನ ತೆರಳಿದರೆ ಪತ್ರಕರ್ತರಿಗೆ ನಾನೊಬ್ಬ ಪತ್ರಕರ್ತ ಎಂದು ಹೇಳಿಕ್ಕೊಳ್ಳಲು ಮುಜುಗರ ಪಡುವ ಸ್ಥಿತಿ ಬರಲಿದೆ. ಎಲ್ಲ ಪತ್ರಕರ್ತರು ಉತ್ತಮ ವರದಿಗಳ ಮೂಲಕ ಮನೆ ಮಾತಗಬೇಕು ಎಂದರು.
ಈ ವೇಳೆ ರಾಜ್ಯ ಕಾರ್ಯನಿರತ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ್ ಭಕ್ಕಳ, ಪ್ರಜಾವಾಣಿ ಪತ್ರಿಕೆ ಸಂಪಾದಕ ರವೀಂದ್ರ ಭಟ್, ಜಿ.ಯು ಭಟ್, ರಘುನಾಥ ಜಿ. ಪೈ ಸೇರಿದಂತೆ ಇನ್ನಿತರರು ಇದ್ದರು.