For the best experience, open
https://m.samyuktakarnataka.in
on your mobile browser.

'ಮ್ಯಾಟ್ರು' ತುಂಬಾ ಡೇಂಜರು…

09:01 PM Aug 23, 2024 IST | Samyukta Karnataka
 ಮ್ಯಾಟ್ರು  ತುಂಬಾ ಡೇಂಜರು…

ಚಿತ್ರ: ಪೌಡರ್
ನಿರ್ದೇಶನ: ಜನಾರ್ದನ್ ಚಿಕ್ಕಣ್ಣ
ನಿರ್ಮಾಣ: ಕೆ.ಆರ್.ಜಿ. ಸ್ಟೂಡಿಯೋಸ್ ಹಾಗೂ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್
ತಾರಾಗಣ: ದಿಗಂತ್, ಶರ್ಮಿಳಾ ಮಾಂಡ್ರೆ, ಧನ್ಯ ರಾಮ್‌ಕುಮಾರ್, ರಂಗಾಯಣ ರಘು, ರವಿಶಂಕರ್ ಗೌಡ, ಅನಿರುದ್ಧ್ ಆಚಾರ್ಯ ಹಾಗೂ ನಾಗಭೂಷಣ್ ಇತರರು.
ರೇಟಿಂಗ್ಸ್: 3

  • ಗಣೇಶ್ ರಾಣೆಬೆನ್ನೂರು
    ಇನ್ನೂ ಸ್ವಲ್ಪ ಹೊತ್ತು ಅಲ್ಲೇ ಇದ್ದಿದ್ರೆ ನಮ್ಮ ಮ್ಯಾಟ್ರು ಕ್ಲೋಸ್ ಮಾಡ್ಬಿಡ್ತಿದ್ರು… ಎನ್ನುತ್ತಾ ಜೀವ ಉಳಿಸಿಕೊಂಡ ಖುಷಿ, ಸಮಾಧಾನ ಮಿಶ್ರಿತ ಮಾತುಗಳಲ್ಲಿ ಬೈಕ್ ಓಡಿಸಿಕೊಂಡು ಹೋಗುತ್ತಾರೆ ದಿಗಂತ್ ಹಾಗೂ ಅನಿರುದ್ಧ್ ಆಚಾರ್ಯ. ಅಷ್ಟಕ್ಕೂ ಅವರು ಹೇಳುತ್ತಿದ್ದ ‘ಮ್ಯಾಟ್ರು’ ಬೇರೆ… ಖಳರ ದೃಷ್ಟಿಯಲ್ಲಿದ್ದ ‘ಮ್ಯಾಟ್ರೇ’ ಬೇರೆ..! ಅಂದಹಾಗೆ ಇದು ‘ಪೌಡರ್’ ಸುತ್ತ ಸುತ್ತುವ ‘ಮ್ಯಾಟ್ರು’…

ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ಯಾವ ರೀತಿಯ ‘ಪೌಡರ್’ ಎಂಬುದರ ಅರಿವಾಗುತ್ತದೆ. ಅದೇ ಹೋಗ್ತಾ ಹೋಗ್ತಾ ‘ಮ್ಯಾಟ್ರು’ ಆಗಿ ಮುಂದುವರಿಯುತ್ತದೆ. ಅಲ್ಲೀವರೆಗೂ ‘ಪೌಡರ್’ ಬಗ್ಗೆ ಧ್ಯಾನಿಸುತ್ತಿದ್ದ, ‘ಘಮ ಘಮ’ ಸುವಾಸನೆ ಬೀರಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ‘ಮ್ಯಾಟ್ರು’ ಘಾಟು ಜೋರಾಗಿಯೇ ಬೀಸತೊಡಗುತ್ತದೆ. ಅಲ್ಲಿಗೆ ಈ ‘ಮ್ಯಾಟ್ರು’ ಸಣ್ಣದಲ್ಲ… ಇದರ ಜಾಲವೇ ದೊಡ್ಡದು ಎಂಬಲ್ಲಿಗೆ ‘ಮಧ್ಯಂತರ’ ಆವರಿಸಿಕೊಳ್ಳುತ್ತದೆ.

‘ಪೌಡರ್’ ಸಿನಿಮಾದ ಮೊದಲಾರ್ಧ ಪಾತ್ರ ಪರಿಚಯ, ‘ಮ್ಯಾಟ್ರು’ ಪರಿಚಯಕ್ಕೆ ಸಮಯ ವಿನಿಯೋಗಿಸಲಾಗಿದೆ. ‘ಅಸಲಿ ಮ್ಯಾಟ್ರು’ ಶುರುವಾಗೋದೇ ದ್ವಿತೀಯಾರ್ಧದಲ್ಲಿ… ಅಂದಹಾಗೆ ಇದು ಡ್ರಗ್ಸ್ ಕುರಿತಾದ ಸಿನಿಮಾ. ಮಾದಕ ವಸ್ತುಗಳ ದಂಧೆ ಶುರುವಾಗುವ ರೀತಿ, ಅದನ್ನು ‘ವಿತರಣೆ’ ಮಾಡುವ ಜಾಲ, ಅದರ ಹಿಂದಿರುವ ಕೈಗಳ ಕುರಿತು ಸವಿಸ್ತಾರವಾಗಿ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ. ಆದರೆ ಅದನ್ನು ತಿಳಿಹಾಸ್ಯದ ಮೂಲಕ ದಾಟಿಸಬೇಕೋ… ಡಾರ್ಕ್ ಕಾಮಿಡಿಯ ಮುಖೇನವೋ, ಥ್ರಿಲ್ಲರ್ ಮಾದರಿಯಲ್ಲೋ ಎಂಬ ಗೊಂದಲಕ್ಕೀಡಾದವರಂತೆ ಅಲ್ಲಲ್ಲಿ ಗೋಚರವಾಗುತ್ತದೆ. ಹೀಗಾಗಿ ಕೆಲವೊಂದು ದೃಶ್ಯಗಳಲ್ಲಿ ಕಾಮಿಡಿ ಇದ್ದರೂ ನಗುವಿಗೆ ಬರವಿದೆ. ಕೆಲವೊಮ್ಮೆ ಪಂಚ್ ಡೈಲಾಗ್ ಎನಿಸಿದರೂ ‘ಡೋಸೇಜ್’ ಕಡಿಮೆ ಎನಿಸತೊಡಗುತ್ತದೆ. ಅದಾಗ್ಯೂ ಇಡೀ ಸಿನಿಮಾವನ್ನು ಲವಲವಿಕೆಯಿಂದ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ದಿಗಂತ್, ಶರ್ಮಿಳಾ ಮಾಂಡ್ರೆ, ಧನ್ಯ ರಾಮ್‌ಕುಮಾರ್, ರಂಗಾಯಣ ರಘು, ರವಿಶಂಕರ್ ಗೌಡ, ಅನಿರುದ್ಧ್ ಆಚಾರ್ಯ ಹಾಗೂ ನಾಗಭೂಷಣ್ ಗಮನ ಸೆಳೆಯುತ್ತಾರೆ.ವಾಸುಕಿ ವೈಭವ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

Tags :