ಯಡೂರು ವೀರಭದ್ರ ದೇವಸ್ಥಾನ ಜಲಾವೃತ
ಬೆಳಗಾವಿ(ಯಕ್ಸಂಬಾ): ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಇಂದು ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಪಂಚ ನದಿಗಳಿಗೆ ೨,೭೭,೭೦೩ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಒಂದು ಅಡಿಯಷ್ಟು ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಯಡೂರಿನ ವೀರಭದ್ರ ದೇವಸ್ಥಾನ ಜಲಾವೃತಗೊಂಡಿದೆ.
೮-೯ ದಿನಗಳಿಂದ ಮಹಾರಾಷ್ಟ್ರ ಜಲಾನಯನ ಪ್ರದೆಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಮತ್ತು ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನೀರು ನಿರಂತರವಾಗಿ ಹರಿದು ಬರುತ್ತಿದ್ದು ಶನಿವಾರಕ್ಕಿಂತ ಇಂದು ೨೭,೩೨೮ ಕ್ಯೂಸೆಕ್ ನೀರು ಹೆಚ್ಚಿಗೆ ಹರಿದು ಬರುತ್ತಿದೆ. ಸುಳಕೂಡ ಬ್ಯಾರೇಜ್‌ನಿಂದ ದೂಧಗಂಗಾ ನದಿಗೆ ೪೭,೫೨೦ ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ ೨,೩೦,೧೮೩ ಕ್ಯೂಸೆಕ್ ಹೀಗೆ ಒಟ್ಟು ೨,೭೭,೭೦೨ ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಬೆಳೆಗಳು ಜಲಾವೃತಗೊಳ್ಳುತ್ತಿವೆ. ಕೃಷ್ಣಾ ನದಿ ದಂಡೆಯ ಸುಕ್ಷೇತ್ರ ಯಡೂರಿನ ವೀರಭದ್ರ ದೇವಸ್ಥಾನ ಇಂದು ನಸುಕಿನ ಜಾವದಲ್ಲಿ ಜಲಾವೃತಗೊಂಡಿದೆ.