ಯತ್ನಾಳರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು
ಹುಬ್ಬಳ್ಳಿ: ಜಗಜ್ಯೋತಿ ಬಸವೇಶ್ವರರ ಬಗ್ಗೆ ಹಗುರವಾಗಿ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹೀಂ ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಮೊದಲು, ಸಾಣೇಹಳ್ಳಿಗೆ ಹೋಗಿ ರಾಗಿ ಮುದ್ದೆ ತಿಂದು ಬಸವ ತತ್ವ ಕಲಿಯಲಿ. ಯತ್ನಾಳ ಅವರು ತಮ್ಮ ಮತ್ತು ವಿಜಯೇಂದ್ರ ಜಗಳದ ನಡುವೆ ಸಾಬರನ್ನ ಯಾಕೆ ತರುತ್ತಿದ್ದಾರೆ. ವಿಜಯೇಂದ್ರ-ಯತ್ನಾಳ ಗಲಾಟೆ ಕಂಟ್ರೋಲ್ ಮಾಡೋಕೆ ಅವರ ಹೈಕಮಾಂಡ್‌ಗೂ ಆಗತಿಲ್ಲ. ನೋಟಿಸ್ ಕೊಟ್ಟರೂ ಏನೂ ಆಗಲ್ಲ. ಯತ್ನಾಳ ಬಿಟ್ರೆ ಏನು ಲಾಸ್ ಆಗತ್ತೆ ಗೊತ್ತಿಲ್ಲ. ಆದರೆ, ಯಡಿಯೂರಪ್ಪ ಬಿಟ್ಟರೆ ಲಾಸ್ ಆಗತ್ತೆ ಎಂದು ಈಗಾಗಲೇ ತೋರಸಿದ್ದಾರೆ. ಹಿಂದೂ ಸಮಾವೇಶ ಯಾಕೆ, ಮಹದಾಯಿ ವಿಚಾರವಾಗಿ ಸಭೆ ಮಾಡಿ. ಇಷ್ಟು ದಿನ ರಾಮಮಂದಿರ ಅಂದ್ರಿ ಇವಾಗ ಯಾಕೆ ಸಾಬರು ಬೇಕು. ರಾಜ್ಯ ರಾಜಕಾರಣ ಹೊಲಸೆದ್ದು ಹೋಗಿದೆ. ಬಿಜೆಪಿಯವರು ಇಷ್ಟು ದಿನ ರಾಮನ ಹೆಸರ ಮೇಲೆ ವೋಟ್ ಕೇಳಿದ್ರು, ಇಷ್ಟು ದಿನ ರಾಮ ಅಂದ್ರು, ಇದೀಗ ಸಾಬರ ಹೆಸರಲ್ಲಿ ವೋಟ್ ಕೇಳಿದ್ದಾರೆ. ಅವರಿಗೆ ಎಷ್ಟು ಗತಿಗೇಡು ಬಂದಿದೆ ಎಂದು ಕಿಡಿ ಕಾರಿದರು.
ಬಿಜೆಪಿಯವರ ಜೊತೆ ಜೆಡಿಎಸ್ ಲವ್ ಮ್ಯಾರೇಜ್ ಆಗಿದೆ. ಎಷ್ಟ ದಿನ ಇರತ್ತೆ ಎಂಬುದನ್ನು ನೊಡೋಣ. ನಾವು ನಾವು ತೃತೀಯ ರಂಗ ಹುಟ್ಟು ಹಾಕತೀವಿ. ಒಂದು ಸಂಘ ಕಟ್ಟಲು ತೀರ್ಮಾನ ಮಾಡಿದ್ದೇವೆ. ಸಿದ್ದರಾಮಯ್ಯ ಸ್ವಾಭಿಮಾನದ ಸಮಾವೇಶದ ಬಗ್ಗೆ ನಾನು ಮಾತಾಡಲ್ಲ. ಸಿದ್ದರಾಮಯ್ಯ ಶಕ್ತಿ ಸಿದ್ದರಾಮಯ್ಯಗೆ ಇದೆ. ಡಿಕೆ ಶಿವಕುಮಾರ್ ಶಕ್ತಿ ಅವರಿಗೆ ಇದೆ. ಸಿಎಂ ಇಳಿಸೋ ಪ್ರಯತ್ನ ವಿಚಾರ ಗೊತ್ತಿಲ್ಲ ಎಂದರು.
ವಕ್ಫ್ ಬೋರ್ಡ್ ಕಾಯ್ದೆ ಮಾಡಿದ್ದು ಕಾಂಗ್ರೆಸ್ ಅಲ್ಲ. ಅದನ್ನು ಮಾಡಿದ್ದು ಬ್ರಿಟಿಷರು. ಎಲ್ಲಾ ಆಸ್ತಿಯನ್ನು ವಕ್ಫ್ ಎಂದು ಹೇಳಲು ಆಗಲ್ಲ. ಅದಕ್ಕೆ ಅದರದ್ದೇ ಆದ ನಿಯಮ ಇದೆ. ವಕ್ಫ್ ಬೋರ್ಡ್ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟು ಹೈಕೋರ್ಟ್‌ಗೆ, ಜಡ್ಜ್‌ಗೆ ಕೊಡಬೇಕು. ಹೈಕಮಾಂಡ್ ಒಲಿಸಲು ರಾಜ್ಯದಲ್ಲಿ ವಕ್ಫ್ ಹೋರಾಟ ಮಾಡುತ್ತಿದಾರೆ ಎಂದು ಆರೋಪಿಸಿದರು.