ಯತ್ನಾಳ ಯುನಿವರ್ಸಲ್ ಗುರು
ವಿಜಯಪುರ: ಯತ್ನಾಳ ಯುನಿವರ್ಸಲ್ ಗುರು ಇದ್ದ ಹಾಗೆ, ಏನು ಬೇಕಾದರೂ ಹೇಳುತ್ತಾರೆ. ಯತ್ನಾಳ ಅವರ ಐನ್‌ಸ್ಟೆನ್ ಥೇರಿ ನಮಗೆ ಗೊತ್ತಾಗಲ್ಲ ನಾನು ಅವರ ಲೆವಲ್‌ಗೆ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಲೇವಡಿ ಮಾಡಿದರು.
ನಗರದ ಬಿಎಲ್‌ಡಿಈ ಸಂಸ್ಥೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೆವಲ ಹಾರಿಕೆ ಉತ್ತರ ನೀಡುತ್ತಾರೆ. ದಿಂಗಾಲೇಶ್ವರ ಶ್ರೀಗಳಿಗೆ ಹಣ ಬಂದಿದೆ ಎಂದು ಹೇಳುತ್ತಾರೆ. ಆ ಹಣ ಎಲ್ಲಿಂದ ಬಂತು, ಯಾವ ನೋಟ್, ಎಷ್ಟು ಬಂತು ಎಂದು ಹೇಳುವುದಿಲ್ಲ. ಮೊದಲು ಅದನ್ನು ಹೇಳಲಿ. ನೀವು ಅವರನ್ನೇ ಕೇಳಿ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ, ಸತ್ಯ ಮರೆಮಾಚುವಲ್ಲಿ ನಿಸ್ಸೀಮರು ಎಂದು ಹರಿಹಾಯ್ದರು.
ಎಲ್ಲ ವಿಷಯವನ್ನು ರಾಜಕೀಯಗೊಳಿ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಯವರು ಉದ್ದೇಶವಾಗಿ ಬಿಟ್ಟಿದೆ. ಮೋದಿ ವಿಶ್ವ ಗುರು ಅಂತಾರೆ ಹಾಗಾದರೆ ಪ್ರಚಾರ ಏಕೆ ಮಾಡಬೆಕು. ಜೆಡಿಎಸ್ ಜೊತೆ ಏಕೆ ಮೈತ್ರಿ ಮಾಡಿಕೊಂಡಿರಿ, ಜನಾರ್ಧನ ರೆಡ್ಡಿ ಅವರನ್ನು ಬಿಜೆಪಿಗೆ ಏಕೆ ಕರೆ ತಂದಿರಿ ಗೊತ್ತಿಲ್ಲವಾ ? ಕಾರಣ ಇಷ್ಟೇ ಈ ಬಾರಿ ಮೋದಿ ಅವರಿಗೆ ಸೋಲುವ ಭೀತಿ ಎದುರಾಗಿದೆ. ಮೋದಿ ಹೋದಲೆಲ್ಲ ಜೈ ಶ್ರೀರಾಮ ಅಂತಾರೆ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ವಾ ? ಎಂದು ಹರಿಹಾಯ್ದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೧೮ ರಿಂದ ೨೦ ಸೀಟ್ ಗೆಲ್ಲುತ್ತದೆ. ಪ್ರಹ್ಲಾದ್ ಜೋಶಿ ಅವರು ನಾನು ಕೇಳಿದ ಪ್ರಶ್ನೆಗಳಿಗೆ ಈವರೆಗೂ ಉತ್ತರ ನೀಡಿಲ್ಲ. ಇಂದಿರಾ ಗಾಂಧಿ ಸರ್ಕಾರ ಹಾಗೂ ಯುಪಿಎ-೧ ಹಾಗೂ ಯುಪಿಎ-೨ ಸರ್ಕಾರದಲ್ಲಿ ಜನಸಾಮಾನ್ಯರಿಗೆ ನೀಡಿರುವ ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಯೋಜನೆಗಳಿಂದ ಪ್ರತಿ ಬಡವರ ಮನೆಗೆ ತಿಂಗಳಿಗೆ ೮ ರಿಂದ ೧೦ ಸಾವಿರ ರೂಪಾಯಿ ಹೋಗುತ್ತಿದೆ. ಜನರು ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪರ ನಿಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.