ಯಶಸ್ಸಿಗೆ 4D ಸೂತ್ರ ಹೇಳಿದ DK
ಮೊದಲು ಕನಸು ಕಾಣಬೇಕು, ಆ ಕನಸನ್ನು ನನಸು ಮಾಡಿಕೊಳ್ಳುವ ಆಸೆ ಇರಬೇಕು. ಅದಕ್ಕೋಸ್ಕರ ನಿರಂತರ ಕೆಲಸ ಮಾಡಬೇಕು. ಶಿಸ್ತು ಇರಬೇಕು.
ಬೆಂಗಳೂರು: ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ 4 ಡಿ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಹರ ಲಾಲ್ ನೆಹರು ಅವರ ಜಯಂತಿ ಅಂಗವಾಗಿ ಇಂದು ವಿಧಾನಸೌಧದಲ್ಲಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅವರೇ ನಮ್ಮ ಆಸ್ತಿ. ನಮ್ಮಂತೆಯೇ ಅವರು ಮುಂದೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು. ನಂಬಿಕೆ ಇದ್ದರೆ ಎಲ್ಲವೂ ಸಾಧ್ಯ. ಅದಕ್ಕೆ ಸರಿಯಾದ ಪ್ರಯತ್ನ ಹಾಗೂ ಪರಿಶ್ರಮವಿರಬೇಕು. ಮಕ್ಕಳ ಆಲೋಚನೆಗಳು ಹೆಚ್ಚು ದೂರದೃಷ್ಟಿಯಿಂದ ಕೂಡಿರಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತಹ ಜ್ಞಾನವನ್ನು ಪಡೆಯಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ 4 ಡಿ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಮೊದಲು ಕನಸು ಕಾಣಬೇಕು, ಆ ಕನಸನ್ನು ನನಸು ಮಾಡಿಕೊಳ್ಳುವ ಆಸೆ ಇರಬೇಕು. ಅದಕ್ಕೋಸ್ಕರ ನಿರಂತರ ಕೆಲಸ ಮಾಡಬೇಕು. ಶಿಸ್ತು ಇರಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ. ಹಾಗೆಯೇ ಮಕ್ಕಳು ಅವರ ಜೀವನ ರೂಪಿಸಿದ ತಂದೆ, ತಾಯಿ ಹಾಗೂ ಗುರುಗಳನ್ನು ಎಂದಿಗೂ ಮರೆಯಬಾರದು. ಈ ಸಂವಾದ ಕಾರ್ಯಕ್ರಮದಿಂದ ಮಕ್ಕಳ ದಿನಾಚರಣೆಯು ಹೆಚ್ಚು ಅರ್ಥಪೂರ್ಣವಾಗಿದ್ದು, ಮಕ್ಕಳ ವಿಚಾರ ವಿನಿಮಯಕ್ಕೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.