ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಯಾರಿಗೆಲ್ಲ ಆಗಬೇಕು ಕಪಾಳ ಮೋಕ್ಷ?

12:02 AM Apr 04, 2024 IST | Samyukta Karnataka

………ಕಪಾಳಕ್ಕೆ ಹೊಡೆಯಿರಿ!
ರಾಜ್ಯ ಸಂಸ್ಕೃತಿ ಸಚಿವರ ಈ ಹೇಳಿಕೆ ವಾರುದ್ದಕ್ಕೂ ಆಕ್ಷೇಪ, ಟೀಕೆ, ಟಿಪ್ಪಣಿ, ಆಕ್ರೋಶಗಳಿಗೆ ಮಾರ್ದನಿಯಾಯಿತು. ಇನ್ನೂ ನಿಂತಿಲ್ಲ. ಸಚಿವ ಶಿವರಾಜ ತಂಗಡಗಿ ಹೇಳಿದ್ದು ಮೋದಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದು.
ಈ ಬಹಿರಂಗ ಅಣತಿ ತನ್ನದೇ ಆದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿರುವುದು ಸಹಜ. ಏಕೆಂದರೆ ಪ್ರತಿಯೊಬ್ಬ ಮಂದಿಗೂ ಅವರದ್ದೇ ಅಭಿಮಾನಿ, ಒಪ್ಪು-ಅಲ್ಲಗಳ ತಂಡ ಇದ್ದೇ ಇರುತ್ತವೆ. ಸಚಿವ ತಂಗಡಗಿಗೂ ಅಷ್ಟೇ.
ಅವರಾಡಿದ ಮಾತನ್ನು ಪಾಲಿಸುವ ತಂಡದವರಿಗೆ ಇದು ಉನ್ಮಾದಕಾರಿ. ಈ ಮಾತು ಹಿಂಸೆ, ಕಾನೂನು ಬಾಹೀರ, ಅಲ್ಲದೇ ಸಮಾಜ ದ್ರೋಹಿಗಳಿಗೆ ಉನ್ಮಾದ ಹಾಗೂ ಅಸ್ತ್ರ. ತಂಗಡಗಿ ನಂತರ ಏನೇ ಸಮಜಾಯಿಷಿ ನೀಡಲಿ. ಅವರ ಪಕ್ಷ ಮತ್ತು ಸರ್ಕಾರ ಕಪಾಳಕ್ಕೆ ಬಾರಿಸಿ' ಎನ್ನುವ ಮಾತಿನಿಂದ ದೂರ ಉಳಿದು ತಪ್ಪಿಸಿಕೊಳ್ಳುವ ಯತ್ನ ಮಾಡಿತು. ಅಷ್ಟರ ಮಟ್ಟಿಗೆ ಕಪಾಳಕೆ ಬೀಸುವ ಕೈ ನಿತ್ರಾಣಗೊಂಡಿತು ಎನ್ನಬಹುದು. ಮಹಾ ಚುನಾವಣೆಯ ಹೊಸ್ತಿಲಲ್ಲಿರುವ ಜನತೆಗೆ ಶಿವರಾಜ ತಂಗಡಗಿ ಅವರೊಂದು ಅಸ್ತ್ರ ನೆನಪಿಸಿದಂತಾಗಿಲ್ಲವೇ? ಜನರಲ್ಲಿ ಮತದಾನ ಮಾಡುವ ಕೈಯಿದೆ. ಯಾರು ಯೋಗ್ಯರು, ಯಾರು ಅಯೋಗ್ಯರು ಎನ್ನುವ ಚಿಂತನೆ ನಡೆಸುವಷ್ಟು ಪ್ರಬುದ್ಧರಿದ್ದಾರೆ. ಹಾಗಿದ್ದಾಗ ಚುನಾವಣೆಯಲ್ಲಿ ಏಕೆ ಮತದಾನದ ಮೂಲಕ ಅಯೋಗ್ಯರಿಗೆ ಕಪಾಳ ಮೋಕ್ಷ ಮಾಡಬಾರದು? ಇಂತಹ ಅಸ್ತ್ರವನ್ನು ನಾವೇಕೆ ಬಳಸುತ್ತಿಲ್ಲ? ಈ ಕಪಾಳ ಮೋಕ್ಷಕ್ಕೆ ಐದು ವರ್ಷಕ್ಕೊಮ್ಮೆ ಅವಕಾಶ. ಈಗ ಬಂದಿರುವ ಅವಕಾಶವನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಲ್ಲವೇ? ದೇಶದ ಪ್ರಬುದ್ಧ ಮತದಾರ ಅಂಥವರ ಕಪಾಳಕ್ಕೆ ಬಡಿದು ಅವರ ಸ್ಥಾನ ಮಾನ ತೋರಿಸಿದ್ದಾರೆ. ಮಾಡಿರುವ ತಪ್ಪಿಗೆ, ಮದವೇರಿದವರಿಗೆ, ಧನ ದೌಲತ್ತು ದಬ್ಬಾಳಿಕೆ ಮೆರೆದವರಿಗೆ ಕಪಾಳ ಮೋಕ್ಷ ಮಾಡಿಲ್ಲವೇ? ಮತದಾನಕ್ಕೆ ಹೊರಟಿರುವ ದೇಶದ ನೂರು ಕೋಟಿ ಮಂದಿ ಈಗ ಹಲವಾರು ಕಾರಣಗಳಿಂದ ಅಯೋಗ್ಯರಿಗೆ ಕಪಾಳಕ್ಕೆ ಮತಪೆಟ್ಟಿಗೆಯ ಮೂಲಕ ಮೋಕ್ಷ ಕೊಡಿಸಬೇಕಾಗಿದೆ. ಇದಕ್ಕೆ ಸರಳ ಮಾನದಂಡ ಮತದಾರ ಅನುಸರಿಸಿದರೆ ಸಾಕು. ಐದು ವರ್ಷಗಳ ಹಿಂದೆ ನೀವು ಆರಿಸಿದ ಪ್ರತಿನಿಧಿ ನಿಮ್ಮ ಮತಕ್ಕೆ ನ್ಯಾಯ ಒದಗಿಸಿದ್ದಾರೆಯೇ? ನಿಮ್ಮ ಪ್ರದೇಶವನ್ನು, ಜನರ ಸಮಸ್ಯೆ, ಸಂಕಷ್ಟಗಳಿಗೆ ಕಿವಿಯಾಗಿದ್ದಾರೆಯೇ? ಐದು ವರ್ಷದಲ್ಲಿ ಒಮ್ಮೆಯಾದರೂ ನಿಮ್ಮೆದುರು(ಸಮೂಹದ ಎದಿರು) ಕಾಣಿಸಿಕೊಂಡು ಅಭಿವೃದ್ಧಿಗೆ ಕಿಂಚಿತ್ ನೆರವಾಗಿದ್ದಾರಾ? ಕಾರ್ಯಕ್ಷಮತೆ, ಹೋಗಲಿ, ನಡವಳಿಕೆ ಜನಪರವಾಗಿತ್ತಾ? ನಿಮ್ಮ ಮತಕ್ಕೊಂದು ಈ ಸಂಸದ ಬೆಲೆ ತಂದುಕೊಟ್ಟನಾ? ಗೌರವ ನೀಡಿದನಾ? ಇಷ್ಟಾದರೂ ಪರಿಗಣಿಸಿ. ಇಲ್ಲದಿದ್ದರೆ ಮತಪೆಟ್ಟಿಗೆಗಳ ಮೂಲಕ ಕಪಾಳಕ್ಕೆ ಹೊಡೆಯಬಹುದಲ್ಲ...! ಎಷ್ಟೋ ಸಂಸದರು ಈ ಚುನಾವಣೆ ಬಂದಾಗ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೆ ಅವರೇ ಮತ ಕೇಳುತ್ತಿದ್ದಾರೆ. ಇಷ್ಟು ದಿನ ಎಲ್ಲಿದ್ದಿರಿ? ಏನು ಕಡಿದು ಕಟ್ಟೆ ಹಾಕಿದಿರಿ? ಮತ ಪಡೆದ ನಂತರ ತಮ್ಮ ಕ್ವಚಿತ್ ಕೊಡುಗೆ ಏನು? ನಿಮ್ಮ ಪ್ರಗತಿಯ ಪತ್ರ ಏನು? ಎಂದು ಕೇಳಲು ಇರುವ ಅವಕಾಶ ಇದುವೇ ಅಲ್ಲವೇ? ತೃಪ್ತಿದಾಯಕವಾಗಿದ್ದರೆ ಪಾಸ್ ಮಾಡಿ. ಇಲ್ಲ, ನಪಾಸ್ ಮಾಡಿ. ಸ್ಪರ್ಧಿಸಿದವರೆಲ್ಲ ಅಂಥವರೇ. ಅವರಲ್ಲ, ಇಂವ. ಇವರಲ್ಲ, ಅಂವ, ಎನ್ನುವ ಸ್ಥಿತಿ ಇರುವಾಗ ಯಾರ ಕಪಾಳಕ್ಕೆ ಹೊಡೆಯುವುದು? ಇದು ಸಾಮಾನ್ಯ ಪ್ರಶ್ನೆ. ಚುನಾವಣೆ ಅಂದರೆ ಹಾಗಲ್ಲಾರಿ, ಪಕ್ಷ ಇರುತ್ತೆ, ಪಂಗಡ ಇರುತ್ತೆ, ವ್ಯವಹಾರ ಇರುತ್ತೆ, ವ್ಯವಸ್ಥೆ ಇರುತ್ತೆ. ಸಹಸ್ರಾರು ಕಾರಣಗಳಿರುತ್ತೆ. ಹಾಗಾಗಿ ಮತಪೆಟ್ಟಿಗೆ ಮೂಲಕ ಕಪಾಳಕ್ಕೆ ಹೊಡೆಯುವುದು ಸಹಜವೇ? ಸುಲಭವೇ? ಇವೆಲ್ಲ ಆಗು ಹೋಗುವ ವಿಚಾರಗಳಲ್ಲ ಬಿಡಿ...! ನಿಜ. ಈ ದೇಶದಲ್ಲಿ ಹಿಂಸೆ, ಕಲಹ, ಜಾತಿ, ಮತಗಳೆಲ್ಲವೂ ಮತ ಗಳಿಕೆಯ ಶಕ್ತಿ ಯುಕ್ತಿಗಳು. ಊಹಿಸಿ. ಅಥವಾ ಇತಿಹಾಸ ಗಮನಿಸಿ. ಎಲ್ಲಿ ದೊಂಬಿ, ಗಲಭೆಗಳು ಜರುಗುತ್ತವೋ, ಅಲ್ಲಿ ಬಹುತೇಕ ಕಡೆ ತೀರ್ಪು ಆ ದುಷ್ಟಶಕ್ತಿಯ ವಿರುದ್ಧವಾಗಿ ಇರಬೇಕಲ್ಲವೇ? ಆದರೆ ಮತದಾರನ ಭಯ, ಆತಂಕ, ಹಾಗೇ ಅದೇ ಶಕ್ತಿಗಳ ವಿಜೃಂಭಣೆಯೂ ಆಗುತ್ತದೆ. ಜನರನ್ನು ಭಯ ಹುಟ್ಟಿಸಿ ಮತಗಟ್ಟೆಯತ್ತ ಬಾರದಂತೆ ಮಾಡುವುದು ಒಂದು ತಂತ್ರ. ಚುನಾವಣೆ ತಂತ್ರ ಎನ್ನುವುದು ಯಾರಿಗೂ ನಿಲುಕದ, ಊಹಿಸದ ಒಂದು ಯಕ್ಷಿಣಿ. ಐದು ವರ್ಷ ತೆಪ್ಪಗೆ ಕುಳಿತ ರಾಜಕಾರಣಿ ಜನರೆದುರು ಬಂದು ಮಂದಿರ, ಮಸೀದಿ, ಜಾತಿ, ಪ್ರಚೋದನೆ ನಡೆಸಿ ಮತ ಯಾಚಿಸಿ ಮತ್ತೆ ಆಯ್ಕೆಯಾಗುತ್ತಾನೆ. ಅವರ ಮಾತುಗಳೋ ಅದೇ ಬೆಂಕಿಯುಂಡೆ. ಇಲ್ಲಿ ದೇಶಭಕ್ತಿ, ವಿದೇಶಿ ಶಕ್ತಿ, ಪ್ರಾದೇಶಿಕ ಸಮಸ್ಯೆ, ಜನರ ಬೇಡಿಕೆ ಎಲ್ಲವೂ ಚುನಾವಣಾ ತಂತ್ರದ ಭಾಗವಾಗಿರುತ್ತವೆ. ಉದಾಹರಣೆಗೆ ಕಳಸಾ ಬಂಡೂರಿ ಯೋಜನೆ ತೆಗೆದುಕೊಳ್ಳಿ. ಕಳೆದ ನಾಲ್ಕು ಸಂಸತ್ ಚುನಾವಣೆ, ನಾಲ್ಕು ವಿಧಾನಸಭಾ ಚುನಾವಣೆ, ಮೂರು ವಿಧಾನ ಪರಿಷತ್ ಚುನಾವಣೆಗಳಲ್ಲಿ ಇದು ಪ್ರಮುಖ ವಿಷಯವಾಗಿತ್ತು. ಇನ್ನೂ ಎರಡ್ಮೂರು ಚುನಾವಣೆ, ಇದೇ ಯೋಜನೆ ನೆಪದಲ್ಲಿಯೇ ಜರುತ್ತವೆ. ನಿಸ್ಸಂಶಯ. ಈ ಸಮಸ್ಯೆ ಬಗೆಹರಿಯಿತೆನ್ನಿ. ಆಗ ರಾಜಕೀಯ ಪಕ್ಷಗಳಿಗೆ ಮತ ಗಳಿಕೆಯ ವಸ್ತುವೊಂದು ಇಲ್ಲವಾದಂತೆ!. ಹಾಗೆಯೇ ಮಲೆನಾಡು ಭಾಗದ ಅರಣ್ಯ ಭೂಮಿ ಕೃಷಿ ಅತಿಕ್ರಮಣ-ಸಕ್ರಮ ವಿವಾದ. ಮೂರುವರೆ ದಶಕಗಳಿಂದ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಂಸದರು-ಶಾಸಕರುಗಳೇ ಯಥಾಸ್ಥಿತಿ ಕಾದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ! ಜನ ಬಹುದೊಡ್ಡ ನಿರೀಕ್ಷೆಯಲ್ಲಿರುತ್ತಾರೆ. ಈ ವ್ಯಕ್ತಿ, ಈ ಸರ್ಕಾರದಿಂದ ತಮ್ಮ ಸಮಸ್ಯೆ ಬಗೆಹರಿದೀತೆಂದು. ಆದರೆ ಎರಡು ಹೆಜ್ಜೆ ಮುಂದೆ, ಒಂದು ಹೆಜ್ಜೆ ಹಿಂದೆ ಈ ಸ್ಥಿತಿಯಲ್ಲಿ ಸಮಸ್ಯೆಗಳನ್ನು ಜೀವಂತವಾಗಿ ಉಳಿಸಿಕೊಳ್ಳಲಾಗುತ್ತದೆ. ನಿರಂತರವಾಗಿ ಜೋಪಾನವಾಗಿ ಇಟ್ಟುಕೊಳ್ಳಲಾಗುತ್ತದೆ. ಇದೇ ರಾಜಕಾರಣ ಅಲ್ಲವೇ? ಮೇಕೆದಾಟು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ತುಂಗಭದ್ರಾ ಜಲಾಶಯದ ವಿವಾದ, ಆಲಮಟ್ಟಿ, ಕೃಷ್ಣಾ ಮೇಲ್ದಂಡೆ ಯೋಜನೆ ಇವೆಲ್ಲ ಹಾಗೆಯೇ. ಒಂದೊಂದು ಸರ್ಕಾರ ಬಂದಾಗ ಹೊಸ ಜಟಿಲತೆಯನ್ನು ಸೃಷ್ಟಿಸುವುದು. ಹೊಸ ವಿವಾದತ್ತ ರಾಜಕಾರಣವನ್ನು ಒಯ್ಯುವುದು. ದೇಶದ ಕಳೆದ ಏಳೆಂಟು ಲೋಕಸಭಾ ಚುನಾವಣೆಗಳಲ್ಲಿ ರಾಮ ಮಂದಿರದ ನಿರ್ಮಾಣವೇ ಮತಬ್ಯಾಂಕ್ ಆಗಿತ್ತಲ್ಲವೇ? ಈಗ ಮಂದಿರ ಮುಗಿಯಿತು. ಮಂದಿರದ ಕ್ರೆಡಿಟ್ ಪಡೆದುಕೊಳ್ಳುವ ಚುನಾವಣೆ ಬಂದಂತಾಯಿತು. ೨೦೧೪ರ ಲೋಕಸಭಾ ಚುನಾವಣೆ ಕಪ್ಪು ಹಣ ಮತ್ತು ಹಗರಣಗಳ, ಭ್ರಷ್ಟಾಚಾರದ ಮೇಲೆ ನಡೆದ ಚುನಾವಣೆ. ಹತ್ತು ವರ್ಷಗಳಲ್ಲಿ ಕಪ್ಪು ಹಣ ದೇಶಕ್ಕೆ ಬಂತಾ? ಹಿಂದಿನ ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥಗೊಂಡವಾ? ಅದರೊಟ್ಟಿಗೆ ಹೊಸ ಹೊಸ ಸ್ವರೂಪದಲ್ಲಿ ಭ್ರಷ್ಟತೆ ಉದ್ಭವವಾಯಿತಲ್ಲ? ಅವೆಲ್ಲ ಈ ಚುನಾವಣೆಯ ವಸ್ತುವಾಗಬೇಕಲ್ಲವೇ? ಚುನಾವಣೆಯಲ್ಲಿ ಬರ, ಅನಾವೃಷ್ಟಿಯೂ ಅಸ್ತ್ರವೇ. ರಾಜ್ಯದ ಅನಾವೃಷ್ಟಿ ಪ್ರಸ್ತುತ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಅಸ್ತ್ರವಾದರೆ, ಕೇಂದ್ರದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಇದು ಕಸಿವಿಸಿಯ ಕ್ಷಣ. ಭಾಷೆ, ಗಡಿ, ಜೊತೆ ಈಗ ಜಾತಿಗಣತಿ, ಜಾತಿ ಸಮುದಾಯಗಳಿಗೆ ಮೀಸಲಾತಿ ಕೊಡುವ ಕುರಿತ ವಿವಾದಗಳೆಲ್ಲವೂ ಚುನಾವಣೆ ಅಸ್ತ್ರಗಳಾದವಲ್ಲ? ಅದು ಬಿಡಿ. ಭಾರತ ರತ್ನ ಪ್ರಶಸ್ತಿಯನ್ನು ಕೂಡ ಚುನಾವಣೆಯ ಪೂರ್ವ ಘೋಷಣೆ ಮಾಡಿದ್ದು ಈಗ ಮತಗಳಿಕೆಯ ಹಿಂದಿನ ತಂತ್ರವಾಯಿತಲ್ಲ? ಕನಿಷ್ಠ ಕನಿಷ್ಠ ಎಂದರೂ ಹತ್ತಿಪ್ಪತ್ತು ಕೋಟಿ ಒಳಗೆ ಒಂದು ಲೋಕಸಭಾ ಚುನಾವಣೆ ನಡೆಸಲಾದೀತೇ? ಹಾಗಾಗಿ ಜನಸೇವೆಯೇ ಜನಾರ್ದನನ ಸೇವೆ ಎನ್ನುವ ಮಾತು ಎಲ್ಲವೂ ಅಪಹಾಸ್ಯ. ಚುನಾವಣಾ ಕಣದಲ್ಲಿ ನಿಂತವರ, ಅಥವಾ ರಾಜಕೀಯ ಪಕ್ಷಗಳು ನೀಡುವ ಟಿಕೆಟ್‌ಗಳನ್ನು ಗಮನಿಸಿದರೆ ಹಣವಂತರ ಕಾಲವಿದು. ಕಪಾಳಕ್ಕೆ ಹೊಡೆಯಿರಿ... ಸಂಸ್ಕೃತಿ ಸಚಿವರ ಈ ಹೇಳಿಕೆ ಆಕ್ಷೇಪಾರ್ಹ ನಿಜ. ಇದೂ ಒಂದು ಮತಗಳಿಕೆಯ ತಂತ್ರ ಎಂಬುದು ಸಾಬೀತಾಗಿದೆ. ಆಪ್ ಪ್ರಮುಖ ಅರವಿಂದ ಕೇಜ್ರಿವಾಲ್ ಅವರಿಗೆ ಪ್ರತಿ ಚುನಾವಣೆಯ ಪೂರ್ವ ಸಾರ್ವಜನಿಕರ ಎದಿರು ಮೂರು ಸಾರೆ ಕಪಾಳ ಮೋಕ್ಷ ಮಾಡಲಾಗಿದೆ. ಕಪಾಳಕ್ಕೆ ಬಾರಿಸಿದ ಘಟನೆಯನ್ನು ಪ್ರತಿ ಪಕ್ಷದವರ ಮೇಲೆ ಕೇಜ್ರಿವಾಲ್ ಹಾಕಿ ಜನರ ಸಹಾನುಭೂತಿ ಪಡೆದು ಗೆದ್ದು ಬಂದರು. ವಾಸ್ತವ, ಕಪಾಳ ಮೋಕ್ಷ ಮಾಡಿದವರೆಲ್ಲ ಆಪ್ ಅಭಿಮಾನಿಗಳೇ, ಕಾರ್ಯಕರ್ತರೇ ! ಇತ್ತೀಚೆಗೆ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿ,ಕೆನ್ನೆಗೆ ಬಾರಿಸಬೇಕು' ಎಂದು ಹೇಳಿದ್ದೇ ಮೋದಿಗೆ ಅಸ್ತ್ರವಾಯಿತು. `ದೀದಿ, ದೀದಿ…. ಎಲ್ಲಿದ್ದೀರಿ? ನಿಮ್ಮ ಏಟು ನನಗೆ ಆಶೀರ್ವಾದ' ಎಂದು ಅದೇ ಕೋಲ್ಕತ್ತಾ ನೆಲದಲ್ಲಿ ಮತ ಬೇಟೆಗೆ ಪ್ರಧಾನಿ ಇಳಿದಿದ್ದರು.
ಈಗ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಆಪ್ ಮತಗಳಿಕೆಗೆ ಅದೇ ಅಸ್ತ್ರ. ಮಮತಾ ಬ್ಯಾನರ್ಜಿ ಬಿದ್ದು ಆಸ್ಪತ್ರೆ ಸೇರಿದಾಗ ಅಲ್ಲಿ ಶಸ್ತ್ರಚಿಕಿತ್ಸೆಯ ಫೋಟೊ ವೈರಲ್ ಆಯಿತು. ಪ್ರತಿ ಚುನಾವಣೆಗೂ ಪೂರ್ವ ದೀದಿ ಆಸ್ಪತ್ರೆಗೇಕೆ ಚಿಕಿತ್ಸೆಗೆ ಹಾಜರಾಗುತ್ತಾರೆ ಎಂಬ ಪ್ರಶ್ನೆ ಬಂತು. ಮೊನ್ನೆ ಮೊನ್ನೆ ಎಚ್.ಡಿ. ಕುಮಾರಸ್ವಾಮಿ ಚೆನ್ನೈ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದದ್ದು ಸಂಶಯ-ವಿವಾದಗಳನ್ನು ಎಬ್ಬಿಸಿತಲ್ಲವೇ?
ಚುನಾವಣೆ ಎಂದರೆನೇ ಹೀಗೆ! ಎಲ್ಲ ತಂತ್ರವೂ ಬಳಕೆಯಾಗುತ್ತದೆ. ಆದರೆ ಮತದಾರ ಜಾಗೃತಿ ಮತ್ತು ಪ್ರೌಢಿಮೆಯನ್ನು ಸಾಣೆ ಹಚ್ಚುತ್ತದೆ. ಹಾಗಾಗಿಯೇ ಅಯೋಗ್ಯರಿಗೆ, ಗರ್ವ ಮೆರೆಯುವವರಿಗೆ, ಮದದಲ್ಲಿ ಮೆರೆಯುವವರಿಗೆ ಈಗ ಕಪಾಳ ಮೋಕ್ಷದ ಕಾಲ, ಅಲ್ಲವೇ !?

Next Article