ಯಾರು ವನ್ಯಜೀವಿಗಳ ಪರವಾಗಿ ನಿಲ್ಲುತ್ತಾರೆ…
ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು, ರಾಜಕಾರಣಿಗಳು, ಕನ್ನಡ ಪರ ಹೋರಾಟಗಾರರು, ಈ ಪ್ರದೇಶದಲ್ಲಿ ನೆಲೆ ಇರುವ ನಿವಾಸಿಗಳು, ಅರಣ್ಯ ಅಧಿಕಾರಿಗಳು ಯಾರು?
ಬೆಂಗಳೂರು: ಬಂಡೀಪುರ ಅರಣ್ಯ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ ನೀಡುವ ಕುರಿತಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ, ಈ ಕುರಿತಂತೆ ಪೋಸ್ಟ್ ಮಾಡಿದ್ದು ಬಂಡೀಪುರ ರಾತ್ರಿ ಸಂಚಾರ ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿಯವರು ಸಂವಾದ ನಡೆಸಲು ಕರೆ ನೀಡಿದಾಗ, ಯಾರು ವನ್ಯಜೀವಿಗಳ ಪರವಾಗಿ ನಿಲ್ಲುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ – ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು, ರಾಜಕಾರಣಿಗಳು, ಕನ್ನಡ ಪರ ಹೋರಾಟಗಾರರು, ಈ ಪ್ರದೇಶದಲ್ಲಿ ನೆಲೆ ಇರುವ ನಿವಾಸಿಗಳು, ಅರಣ್ಯ ಅಧಿಕಾರಿಗಳು ಯಾರು? ಕೇರಳದಿಂದ ಒತ್ತಡ ಹೆಚ್ಚಾಗುತ್ತಿದ್ದರೂ,ಈ ಹಿಂದಿನ ಕರ್ನಾಟಕ ಸರ್ಕಾರಗಳು ರಾತ್ರಿ ಪ್ರಯಾಣ ನಿಷೇಧ ಜಾರಿಗೊಳಿಸಿದ್ದವು. ಬಂಡೀಪುರ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶವನ್ನು ಸಹ ನೀಡಿದೆ. ಆದರೂ, ಈ ನಿಷೇಧವನ್ನು ತೆರವುಗೊಳಿಸುವ ಪ್ರಯತ್ನಗಳನ್ನು ದೃಢವಾಗಿ ತಿರಸ್ಕರಿಸುವ ಬದಲು, ನಮ್ಮ ರಾಜ್ಯದ ಉಪ ಮುಖ್ಯಮಂತ್ರಿ ಚರ್ಚೆಗೆ ಒತ್ತಾಯಿಸುತ್ತಿದ್ದಾರೆ ಎಂದು ತೋರುತ್ತದೆ ಇದರ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಸಹ ಪ್ರಸ್ತಾಪವನ್ನು ನಿರಾಕರಿಸುತ್ತಿಲ್ಲ. ವಯನಾಡ್ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿಯ ತುಷ್ಟೀಕರಣದಿಂದಾಗಿ ಕರ್ನಾಟಕದ ವನ್ಯಜೀವಿ ಮತ್ತು ಪರಿಸರ ಪರಂಪರೆಯನ್ನು ಅಪಾಯಕ್ಕೆ ದೂಡಿದಂತಾಗುತ್ತದೆ. ಇಂತಹ ಕ್ರಮಗಳು ನಿಷ್ಪ್ರಯೋಜಕ ಹಾಗೂ ನ್ಯಾಯಸಮ್ಮತವಾದುದಲ್ಲ ಎಂದಿದ್ದಾರೆ.