ಯಾರೂ ಬೇಜವಾಬ್ದಾರಿ ಹೇಳಿಕೆ ನೀಡಬಾರದು
ವಿಜಯಪುರ: ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯಾರೂ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಿಸಬಾರದು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದರ `ಗೋದ್ರಾ' ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಶ್ರೀರಾಮಚಂದ್ರ ಭಾರತೀಯರೆಲ್ಲರ ಆರಾಧ್ಯ ದೈವ. ರಾಮಭಕ್ತರಲ್ಲಿ ಆತಂಕ ಹುಟ್ಟಿಸುವ ಯಾವುದೇ ಹೇಳಿಕೆ ಖಂಡನೀಯ ಎಂದರು.
ಯಾರಿಗಾದರೂ ವಿಧ್ವಂಸಕ ಕೃತ್ಯಗಳ ಮಾಹಿತಿ ಇದ್ದರೆ ಸಂಬಂಧಿಸಿದ ಇಲಾಖೆ ಗಮನಕ್ಕೆ ತರಬೇಕು ಹೊರತು ಮಾಧ್ಯಮಗಳಿಗೆ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು. ಹಿರಿಯ ರಾಜಕಾರಣಿಗಳಿಂದ ಇಂಥ ಹೇಳಿಕೆ ಸರಿಯಲ್ಲ ಎಂದರು.
ರಾಜಕಾರಣಿಗಳು ಯಾವುದೇ ವಿಷಯದ ಬಗ್ಗೆ ಪೂರ್ವಾಪರ ಯೋಚಿಸದೇ ಹೇಳಿಕೆ ನೀಡಬಾರದು. ಆ ಹೇಳಿಕೆಯ ಪರಿಣಾಮಗಳ ಬಗ್ಗೆ ಸ್ವಲ್ಪ ಚಿಂತನೆ ನಡೆಸಿದರೆ ಅವರಿಗೆ ತಿಳಿಯುತ್ತದೆ ಇದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯ ಎಂದರು.
ಶ್ರೀರಾಮಮಂದಿರ ನಿರ್ಮಾಣವಾಗುತ್ತದೆ. ರಾಮ ಮಂದಿರ ರಾಮಮಂದಿರವಾಗಿ ಉಳಿಸಿಕೊಳ್ಳುವುದು ಹಿಂದುಗಳ ಕರ್ತವ್ಯ. ಹಿಂದೂಗಳು ಹಿಂದೂಗಳಾಗಿ ಉಳಿದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದರು.