For the best experience, open
https://m.samyuktakarnataka.in
on your mobile browser.

ಯಾರ ಅಡುಗೆ ಹೆಚ್ಚು ರುಚಿ?

02:00 AM Mar 13, 2024 IST | Samyukta Karnataka
ಯಾರ ಅಡುಗೆ ಹೆಚ್ಚು ರುಚಿ

ಮನೆ ಊಟ ರುಚಿಯೋ ಅಥವಾ ಹೋಟೆಲ್ ಊಟ ರುಚಿಯೋ ಎಂಬ ಪ್ರಶ್ನೆಗೆ ಬೇರೆ ಬೇರೆ ರೀತಿಯ ಉತ್ತರಗಳು ಇರುತ್ತವೆ. ಸದಾ ಹೋಟೆಲ್‌ನಲ್ಲಿ ತಿನ್ನೋವರು ಮನೆ ಊಟ ಚೆನ್ನಾಗಿರುತ್ತೆ ಎಂದು ಹೇಳುತ್ತಾರೆ. ಸದಾ ಮನೆಯಲ್ಲಿ ತಿನ್ನೋವರು ಹೋಟೆಲ್ ಊಟಾನೇ ಬೆಸ್ಟು ಎಂದು ಹೇಳುತ್ತಾರೆ. ಯಾರಿಗೆ ಯಾವುದು ಸಿಗೊಲ್ವೋ ಅದರ ಬಗ್ಗೆ ಅವರಿಗೆ ಆಸಕ್ತಿ ಇರುತ್ತದೆ.
ಗಂಡಸರು ಆಚೆ ತಿನ್ನೋದು ಜಾಸ್ತಿ ಎಂದು ವಿಶಾಲು ಆಗಾಗ ಹೇಳುತ್ತಿರುತ್ತಾಳೆ. ಇದು ಆಫೀಸುಗಳಲ್ಲಿ ತಿನ್ನೋ ಕರೆನ್ಸಿ ನೋಟಿನ ವಿಷಯ ಅಲ್ಲ. ಊಟದ ವಿಷಯ. ವಿಶ್ವ ಆಫೀಸಿಗೆ ಹೋದಾಗ ಮಧ್ಯಾಹ್ನದ ಊಟ ಅಲ್ಲೇ ಕ್ಯಾಂಟೀನ್‌ನಲ್ಲಿ ಆಗುತ್ತದೆ. ಸಂಜೆ ಟಿಫನ್ ಮಾಡಿಕೊಂಡು ಮನೆಗೆ ಬರುತ್ತಾನೆ. ರಾತ್ರಿ ನೆಟ್ಟಗೆ ಊಟ ಮಾಡುವುದಿಲ್ಲ. ಹೀಗಾಗಿ ಮನೆಯಲ್ಲಿ ಅವನು ತಿನ್ನುವುದೇ ಕಡಿಮೆ. ಈ ಬಗ್ಗೆ ವಿಶಾಲು ನನ್ನ ಬಳಿ ದೂರು ಕೊಟ್ಟಿದ್ದಳು. ಜಗಳ ಪರಿಹಾರಕ್ಕೆಂದು ನಾ ಹೋದ ದಿನ ವಿಶಾಲು ಸೊಗಸಾಗಿ ಮಸಾಲೆದೋಸೆ ಮಾಡಿದ್ದಳು. ರುಚಿಯಾಗಿತ್ತು, ತಿಂದೆ.
“ತುಂಬಾ ಚೆನ್ನಾಗಿದೆ ದೋಸೆ” ಎಂದೆ. ವಿಶ್ವ ಒಪ್ಪಲಿಲ್ಲ.
“ಇದಕ್ಕಿಂತ ಗರಿಗರಿ ದೋಸೆಗಳು ಸಿಗುತ್ತೆ. ಸ್ಪೆಷಲ್ ದೋಸೆ ಇಂಥ ಹೋಟೆಲ್ಲುಗಳಲ್ಲಿ ತಿನ್ಬೇಕು” ಎಂದು ಹೋಟೆಲ್‌ಗಳ ಹೆಸರು ಹೇಳಿ ಗರಿಗರಿ ದೋಸೆಯನ್ನು ಪರಿಪರಿಯಾಗಿ ಹೊಗಳಲು ಶುರು ಮಾಡಿದ.
ಆದರೆ ಹೋಟೆಲ್ ದೋಸೆ ಎಂದರೆ ಅದಕ್ಕೆ ವಿಪರೀತ ಎಣ್ಣೆ ಸುರಿಯುತ್ತಾರೆ. ಎಣ್ಣೆಯಲ್ಲಿ ಅಭ್ಯಂಜನ ಮಾಡಿಸಿ ಬೇಯಿಸುತ್ತಾರೆ. ಅದಕ್ಕೆ ಅದು ಸ್ಟಿಫ್ಫಾಗಿ ಹಪ್ಪಳದಂತಿರುತ್ತೆ. ಮನೆಯ ದೋಸೆ ಸಾಫ್ಟಾಗಿರುತ್ತೆ. ಕರುಂ, ಕುರುಂ ಎಂದು ತಿನ್ನಲು ಸಾಧ್ಯವಿಲ್ಲ.
“ನನ್ನ ಗಂಡನಿಗೆ ಮನೆ ತಿಂಡಿ ಅಂದ್ರೆ ಇಷ್ಟಾನೇ ಇಲ್ಲ, ಯಾವಾಗ್ಲೂ ಹೋಟೆಲ್‌ನಲ್ಲೇ ಹೋಗಿ ಚಪ್ಪರಿಸ್ತರ‍್ತಾರೆ. ಕೆಲವು ಚಿಕ್ಕ ಹೋಟೆಲ್‌ಗಳಲ್ಲಿ ಪಲ್ಯ ಮಾಡೋಕೆ ಆಲೂಗಡ್ಡೆ ಬಿಡಿಸೋದನ್ನ ಹೋಗಿ ನೋಡಿ ನೀವು. ಆಮೇಲೆ ಆಲೂ ಅಲರ್ಜಿ ಶುರುವಾಗುತ್ತೆ” ಎಂದಳು.
“ಹೆಂಗೆ ಬಿಡಿಸ್ತಾರೆ?” ಎಂದಾಗ ಅವಳು ತನ್ನ ಹಳ್ಳಿಯ ಹೋಟೆಲೊಂದನ್ನ ನೆನಪು ಮಾಡಿಕೊಂಡಳು.

“ಗೋಣೀಚೀಲದಲ್ಲಿ ಬೆಂದ ಆಲೂ ಹಾಕಿ ಕಾಲಲ್ಲಿ ತಾಳಬದ್ಧವಾಗಿ ತುಳೀತಾರಂತೆ. ತಕಿಟಧಿಂ ಧಿರನ ತಕಿಟಧಿಂ | ತಕಧಿಮಿ ತಕಿಟ ತಕಧಿಮಿ | ಅಂತ ತುಳಿದಾಗ ಸಿಪ್ಪೆ ತನಗೆ ತಾನೇ ಬಿಟ್ಟುಕೊಳ್ಳುತ್ತಂತೆ”. ವಿಶ್ವ ಅಸಹ್ಯದಿಂದ ಮುಖ ವಕ್ರ ಮಾಡಿದ. “ಇನ್ಮೇಲೆ ವಿಶ್ವ ಮನೇಲೇ ತಿಂತಾನೆ” ಎಂದು ಅವನ ಪರವಾಗಿ ನಾನು ಆಶ್ವಾಸನೆ ಕೊಟ್ಟೆ. ಆದರೆ ವಿಶಾಲು ಅನೇಕ ಸಂಗತಿಗಳ ನೆನಪು ಇಟ್ಟುಕೊಂಡಿದ್ದಳು. “ಇವರಿಗೆ ನಾನು ಕಷ್ಟ ಪಟ್ಟು ಬೆಳಿಗ್ಗೆ ಎದ್ದು ವಾಂಗೀಭಾತ್ ಮಾಡ್ಕೊಟ್ಟೆ. ಆಫೀಸ್‌ಗೆ ಹೋದ ಡಬ್ಬಿ ಓಪನ್ ಆಗದೆ ಹಾಗೇ ವಾಪಸ್ ಬಂದರೆ ನಂಗೆ ಅವಮಾನ ಮಾಡಿದಂತಲ್ವಾ ?” ಎಂದಳು. ಡಬ್ಬಿ ವಾಪಸ್ ಬರಲು ಕಾರಣವನ್ನು ವಿಶ್ವ ತಿಳಿಸಿದ. “ನೀನು ಡಬ್ಬಿಗೆ ಹಾಕ್ಕೊಟ್ಟಿದ್ದು ನಿಜ, ಆದ್ರೆ ನಮ್ಮ ಸಾಹೇಬ್ರಿಗೆ ಪ್ರಮೋಷನ್ ಸಿಕ್ತು. ಲಂಚ್ ಹೋಸ್ಟ್ ಮಾಡೋಕೆ ಒಂದು ದೊಡ್ಡ ಹೋಟೆಲ್‌ಗೆ ರ‍್ಕೊಂಡ್ಹೋದ್ರು. ಭಾರೀ ಊಟ ಹಾಕ್ಸಿ ಬೀಡಾ, ಬಾಳೆಹಣ್ಣು, ಐಸ್‌ಕ್ರೀಮು ಎಲ್ಲಾ ಕೊಡಿಸಿದ್ರು” ಎಂದ. “ಅರಸನ್ನ ನಂಬಿ ಪುರುಸನ್ನ ಬಿಡಬಾರದು” ಎಂದು ವಿಶಾಲು ಛೇಡಿಸಿದಳು. “ನೋಡು ವಿಶ್ವ, ಮನೇಲಿ ಯಾವ್ದೇ ತಾಯಿ ಅಥವಾ ಹೆಂಡತಿ ಪ್ರೀತಿಯಿಂದ ಶುದ್ಧವಾಗಿ ಅಡುಗೆ ಮಾಡ್ತಾರೆ. ಅದಕ್ಕೆ ಟೇಸ್ಟಿ ಪೌಡರ್‌ಗಳು ಹಾಕೋದಿಲ್ಲ. ಸೋಡಾ ಸುಣ್ಣಗಳು ಬೆರೆಸೋದಿಲ್ಲ. ಹಳೇ ಕಮಟು ಎಣ್ಣೆ ಸುರಿಯೋದಿಲ್ಲ. ಮನೆಮಂದಿಯ ಆರೋಗ್ಯ ಮುಖ್ಯ ಅಂತ ಅವರಿಗೆ ಗೊತ್ತು. ಇದನ್ನೆಲ್ಲಾ ಬಿಟ್ಟು ಹೋಟೆಲ್‌ಗೆ ಹೋಗ್ತೀಯಲ್ಲ, ನೀನು ಮಾಡ್ತಿರೋದು ಸರೀನಾ ?” ಎಂದು ದಬಾಯಿಸಿದಾಗ ವಿಶಾಲುಗೆ ಖುಷಿಯಾಯ್ತು. “ನಾವಿರೋದು ಇಬ್ರು, ಅವರಿಗೆ ಅಂತ ಅಡುಗೆ ಮಾಡಿ ಇಡ್ತೀನಿ. ಅವರು ಬರೊಲ್ಲ. ತಗೊಂಡ್ಹೋಗಿ ನಾಯಿಗೆ ಹಾಕ್ಬೇಕು” ಎಂದಾಗ ವಿಶ್ವನ ಮೇಲೆ ನಾನು ರೇಗಿದೆ. “ವಿಶ್ವ, ನೀನು ಮನೇಲಿ ಯಾವತ್ತು ಊಟ ಮಾಡ್ತೀಯ, ಯಾವತ್ತು ಊಟ ಮಾಡೊಲ್ಲ ಅನ್ನೋದು ಮುಂಚಿತವಾಗಿ ಹೇಳ್ಬೇಕು, ಕ್ಯಾಲೆಂಡರ್‌ನಲ್ಲಿ ಗುರುತು ಮಾಡಿಬಿಡು, ವಿಶಾಲೂಗೆ ನಿಶ್ಚಿಂತೆ” ಎಂದೆ. “ಹೌದು, ಎಲ್ಲರ ಮನೇಲಿ ಇದೇ ಗೋಳು. ಹೆಂಡ್ತಿ ಹಸಿದು ಕಾಯ್ತಾ ಇರೋವಾಗ ಗಂಡ ಆಚೆಯಿಂದ ಬಂದು ಊಟ ಆಯ್ತು ಅಂತಾರೆ. ಇನ್ನು ಕೆಲವು ಸಲ ಆಚೆಯಿಂದ ರ‍್ತಾರೆ. ಹೊಟ್ಟೆ ಹಸೀತಿದೆ ಏನ್ಮಾಡಿದ್ದೀಯ? ಅಂತಾರೆ. ಅಡುಗೆ ಮಾಡ್ಬೇಕಾ ಬೇಡ್ವಾ ಅನ್ನೋದು ಯಕ್ಷ ಪ್ರಶ್ನೆ ಆಗ್ಬಿಟ್ಟಿದೆ, ಸರ್ಕಾರ ನಡೆಸೋಕೆ ಗ್ಯಾರಂಟಿ ಇದೆ, ಸಂಸಾರ ನಡೆಸೋಕೆ ವಾರೆಂಟಿ ಇಲ್ಲ” ಎಂದಳು. “ಇವತ್ತು ಏನು ಅಡುಗೆ ಮಾಡಿದ್ದೀರ” ಎಂದೆ. “ಮನೆ ಊಟ ಇಷ್ಟ ಇಲ್ಲ ನಿಮ್ಮ ಫ್ರೆಂಡ್‌ಗೆ ಅಂತ ಹೋಟೆಲ್‌ನಿಂದ ಪಾರ್ಸೆಲ್ ಊಟ ತರಿಸಿದ್ದೀನಿ” ವಿಶಾಲೂ ಬ್ಯಾಗಿನಿಂದ ಪ್ಯಾಕೆಟ್‌ಗಳು ತೆಗೆದಾಗ ವಿಶ್ವನಿಗೆ ಆಶ್ಚರ್ಯವಾಯಿತು. “ಅರೇ! ಯಾವ ಹೋಟೆಲ್‌ನಿಂದ? ” ಎಂದು ಆಸೆಯಿಂದ ಕೇಳಿದ. “ತಿಂದ್ಮೇಲೆ ನಿಮ್ಗೇ ಗೊತ್ತಾಗುತ್ತೆ, ನೀವು ಇಷ್ಟ ಪಡೋ ಹೋಟೆಲ್‌ನಿಂದ ತರಿಸಿದ್ದೀನಿ. ಬನ್ನಿ ಮೂವರೂ ಕೂತು ಊಟ ಮಾಡೋಣ” ಎಂದು ಬೇರೆ ಬೇರೆ ಪೊಟ್ಟಣಗಳನ್ನು ಬಿಡಿಸಿದಳು. ಊಟ ಬಿಸಿಬಿಸಿಯಾಗಿತ್ತು. ಸಿಲ್ವರ್ ಫಾಯಿಲ್‌ನಲ್ಲಿ, ಬಾಳೆಎಲೆಯಲ್ಲಿ ಪಾರ್ಸೆಲ್ ಮಾಡಿ ಕೊಟ್ಟಿದ್ದರು. ಒಂದೊಂದು ಐಟಮ್ಮನ್ನು ಚಪ್ಪರಿಸುತ್ತಾ ವಿಶ್ವ ಹೊಗಳುತ್ತಾ ತಿಂದ. “ನೋಡಿದ್ಯಾ ಎಂಥ ರುಚಿ! ಸಾಂಬಾರ್ ಸೂಪರ್. ಸಾರು Excellent! ಈ ಪಲ್ಯಾನೂ ಮಾರ್ವಲಸ್” ಎಂದೆಲ್ಲಾ ಹೊಗಳುತ್ತಾ ಊಟ ಮಾಡಿದ. ವಿಶಾಲು ಮುಗುಳ್ನಗುತ್ತಿದ್ದಳು. ಹೋಟೆಲ್ ಊಟ ಚೆನ್ನಾಗಿದೆ ಎಂದಾಗ ವಿಶಾಲು ಯಾಕೆ ನಗ್ಬೇಕು ಅಂತ ನನಗೆ ಅನುಮಾನ ಬಂತು. “ಏನು ನಿಮ್ಮ ನಗೆಯ ಗುಟ್ಟು ಏನು?” ಎಂದೆ. “ಅಡುಗೆ ಮನೆಗೆ ಬಂದ್ರೆ ಸತ್ಯದರ್ಶನವಾಗುತ್ತೆ” ಎಂದಳು. ಅಡುಗೆ ಮನೆಗೆ ನಾನು ಮತ್ತು ವಿಶ್ವ ಕೈ ತೊಳೆದುಕೊಂಡು ಹೋದೆವು. ಅಲ್ಲಿ ಅಡಿಗೆ ಮಾಡಿದ ಪಾತ್ರೆಗಳು ಇದ್ದವು. ಪಾತ್ರೆಗಳಲ್ಲಿ ಸ್ವಲ್ಪ ಆಹಾರ ಇನ್ನೂ ಉಳಿದಿತ್ತು. ಪಾರ್ಸೆಲ್ ಕಟ್ಟಲು ತಂದಿದ್ದ ಸಿಲ್ವರ್ ಫಾಯಿಲ್ ಮತ್ತು ದಾರ ಹಾಗೇ ಇತ್ತು. “ಅಂದ್ರೆ, ಇದನ್ನೆಲ್ಲ ಮಾಡಿದ್ದು ಮನೇಲಾ?” ಎಂದು ಆಶ್ಚರ್ಯದಿಂದ ಕೇಳಿದೆ. “ಹೌದು, ಇವರು ಹೋಟೆಲ್ ಊಟ ಇಷ್ಟ ಅಂತ ಹೇಳ್ತಾ ಇದ್ರಲ್ಲ, ಅದಕ್ಕೆ ಹೋಟೆಲ್‌ನಿಂದ ತಂದಂತೆ ಪಾರ್ಸೆಲ್ ಮಾಡಿ ಬಡಿಸಿದೆ. ಬಾಲ ಆಡಿಸ್ತಾ ತಿಂದ್ರು. ಯದ್ವಾತದ್ವಾ ಹೊಗಳಿದ್ರು” “ಈ ಐಡಿಯಾ ನಿಮಗೆ ಹೇಗೆ ಬಂತು ವಿಶಾಲೂ?” ಎಂದು ಕೇಳಿದೆ. “ನನ್ನ ಗಂಡನ ಸ್ವಭಾವ ನೋಡಿ ಗಾದೆ ಮಾಡಿದ್ದಾರಲ್ಲ?” ಎಂದಳು. “ಏನಂತ ಗಾದೆ?” “ಪಕ್ಕದ ಮನೆ ರಾಮಣ್ಣನ ಹೆಂಡ್ತಿ ಸುಂದರಿ ಅಂತ!” ವಿಶ್ವ ತಲೆ ತಗ್ಗಿಸಿನಾಳೆಯಿಂದ ಮನೇಲೇ ಸದಾ ಊಟ ಮಾಡ್ತೀನಿ’ ಎಂದ.