For the best experience, open
https://m.samyuktakarnataka.in
on your mobile browser.

ಯಾವುದೇ ಕಾರಣಕ್ಕೂ ರೈತರ ಒಕ್ಕಲೆಬ್ಬಿಸಲ್ಲ

11:47 AM Nov 04, 2024 IST | Samyukta Karnataka
ಯಾವುದೇ ಕಾರಣಕ್ಕೂ ರೈತರ ಒಕ್ಕಲೆಬ್ಬಿಸಲ್ಲ

ವಕ್ಫ್ ವಿಚಾರ ಇಟ್ಟುಕೊಂಡು ಬಿಜೆಪಿಯವರು ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತ. ವಿಷಯಾಧಾರಿತ ಹೋರಾಟವನ್ನು ಬಿಜೆಪಿಯವರೂ ಎಂದೂ ಮಾಡುವುದಿಲ್ಲ

ಹುಬ್ಬಳ್ಳಿ : ವಕ್ಫ್ ಆಸ್ತಿ ವಿಚಾರ ವಿವಾದಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರವು ರೈತರ ಪರ ಇದೆ. ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡೆಯಬೇಕು, ದಾಖಲಾತಿಯಲ್ಲಿ ತಿದ್ದುಪಡಿಯಾಗಿದ್ದರೆ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ ಪರ ಪ್ರಚಾರಕ್ಕೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತ‌‌ನಾಡಿದರು.

ರೈತರು ಮುಸ್ಲಿಮರೇ ಇರಲಿ, ಹಿಂದೂಗಳೇ ಇರಲಿ. ಕ್ರಿಶ್ಚಿಯನ್ನರೇ ಇರಲಿ. ಯಾವ ರೈತರನ್ನೂ ಒಕ್ಕಲೆಬ್ಬಿಸಬಾರದು ಎಂದು ಈಚೆಗೆ ಕಾನೂನು ಸಚಿವ ಎಚ್.ಕೆ ಪಾಟೀಲ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿ ಆದೇಶಿಸಿದ್ದೇನೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ವಕ್ಫ್ ವಿಚಾರ ಇಟ್ಟುಕೊಂಡು ಬಿಜೆಪಿಯವರು ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತ. ವಿಷಯಾಧಾರಿತ ಹೋರಾಟವನ್ನು ಬಿಜೆಪಿಯವರೂ ಎಂದೂ ಮಾಡುವುದಿಲ್ಲ. ಬರೀ ವಿವಾದಾಸ್ಪದ, ಗೊಂದಲ ಸೃಷ್ಟಿ ಮಾಡುವ ಹೋರಾಟ ಮಾಡುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಪಹಣಿಯಲ್ಲಿ ತಿದ್ದುಪಡಿಯಾಗಿದೆ. ರೈತರಿಗೆ ನೋಟೀಸ್ ಕೊಟ್ಟಿದ್ದರು. ಈಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ದೂರಿದರು.

ಶಿಗ್ಗಾವಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಮೂರು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಹೆಚ್ಚಿನ ಮತ ಪಡೆದಿದ್ದಾರೆ. ಹೀಗಾಗಿ, ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.

Tags :