For the best experience, open
https://m.samyuktakarnataka.in
on your mobile browser.

ಯಾವ ಬೆಂಬಲದಿಂದ ಅಧಿಕಾರಿಗಳ ಈ ಕಳ್ಳಾಟ ನಡೆಯುತ್ತಿದೆ?

01:03 PM Mar 22, 2024 IST | Samyukta Karnataka
ಯಾವ ಬೆಂಬಲದಿಂದ ಅಧಿಕಾರಿಗಳ ಈ ಕಳ್ಳಾಟ ನಡೆಯುತ್ತಿದೆ

ಬೆಂಗಳೂರು: ಅಧಿಕಾರಿಗೆ ಯಾರ ಕುಮ್ಮಕ್ಕಿದೆ, ಯಾವ ಬೆಂಬಲದಿಂದ ಅಧಿಕಾರಿಗಳ ಈ ಕಳ್ಳಾಟ ನಡೆಯುತ್ತಿದೆ? ಎಂದು ಬಿಜೆಪಿಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಪ್ರಶ್ನಿಸಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತೆ ಸಾರ್ವಜನಿಕರ ಜೀವ ರಕ್ಷಣೆ ಮಾಡಬೇಕಾದ ಆರೋಗ್ಯ ಇಲಾಖೆಯೇ ಭ್ರೂಣ ಪತ್ತೆ-ಹತ್ಯೆ ಜಾಲದಲ್ಲಿ ಶಾಮೀಲಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.

ಆರೋಗ್ಯ ಸಚಿವ ದಿನೇಶ್‌ಗುಂಡುರಾವ ಅವರೇ, ಭ್ರೂಣ ಹತ್ಯೆ ಪ್ರಕರಣದ ವರದಿ ಸಲಿಸಬಾರದು ಎಂದು ಇಷ್ಟೊಂದು ಒತ್ತಡ ಹೇರುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಯಾರ ಕುಮ್ಮಕ್ಕಿದೆ, ಯಾವ ಬೆಂಬಲದಿಂದ ಅಧಿಕಾರಿಗಳ ಈ ಕಳ್ಳಾಟ ನಡೆಯುತ್ತಿದೆ?

ಇದನ್ನೆಲ್ಲಾ ನೋಡುತ್ತಿದ್ದರೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅಮಾನುಷ ಭ್ರೂಣ ಪತ್ತೆ-ಹತ್ಯೆ ಜಾಲವನ್ನು ಬೇಧಿಸಲು ಹಿಂದೇಟು ಹಾಕುತ್ತಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಕಾಣದ 'ಕೈ'ಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ.

ಈ ಪ್ರಕರಣದ ಆಳ-ಅಗಲ, ಗಂಭೀರತೆ, ಮತ್ತು ಇದರ ಹಿಂದಿರುವ ಪ್ರಭಾವಿ ಶಕ್ತಿಗಳನ್ನು ಅಂದಾಜಿಸಿಯೇ ನಾನು ಈ ಪ್ರಕರಣದ ತನಿಖೆಗೆ ಎಸ್‌ ಐ ಟಿ ರಚಿಸಬೇಕು, ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಒತ್ತಾಯಿಸಿದ್ದು.

ಮಹಿಳೆಯರ ವೋಟಿಗಾಗಿ ಅವರ ಮೂಗಿಗೆ ತುಪ್ಪ ಸವರುವ ಶಕ್ತಿ, ಗೃಹಲಕ್ಷ್ಮಿ ಗ್ಯಾರೆಂಟಿಗಳನ್ನು ನೀಡಿದರೆ ಮಹಿಳೆಯರ ಸಬಲೀಕರಣ ಆಗುವುದಿಲ್ಲ ಸಿಎಂ ಸಿದ್ದರಾಮಯ್ಯನವರೇ, ಹುಟ್ಟುವ ಮೊದಲೇ ಹೆಣ್ಣು ಮಕ್ಕಳ ಪ್ರಾಣ ಕಸಿದುಕೊಳ್ಳುವ ಈ ಅಮಾನುಷ ಜಾಲವನ್ನು ಭೇದಿಸುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ತಮ್ಮ ನಿಜವಾದ ಬದ್ಧತೆ ತೋರಿಸಿ ಎಂದಿದ್ದಾರೆ.