For the best experience, open
https://m.samyuktakarnataka.in
on your mobile browser.

ಯುಗಾದಿಗೆ ಭರ್ಜರಿ ಮಳೆಯ ಮುನ್ಸೂಚನೆ

12:01 AM Mar 17, 2024 IST | Samyukta Karnataka
ಯುಗಾದಿಗೆ ಭರ್ಜರಿ ಮಳೆಯ ಮುನ್ಸೂಚನೆ

ಬೆಂಗಳೂರು: ಸುಡು ಬೇಸಿಗೆಯಿಂದ ಕಂಗಾಲಾಗಿರುವ ರಾಜ್ಯದಲ್ಲಿ ಯುಗಾದಿ ವೇಳೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆಯಲ್ಲದೆ, ಈ ಬಾರಿ ಮುಂಗಾರು ಆರಂಭದಲ್ಲೇ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಕಾರ್ಯಾಚರಣೆಯ ವಿಸ್ತೃತ ಶ್ರೇಣಿಯ ಮುನ್ಸೂಚನೆ ಪ್ರಕಾರ ಮಾರ್ಚ್ ಅಂತ್ಯದ ವೇಳೆಗೆ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.
ಏಪ್ರಿಲ್ ೯ರಂದು ರಾಜ್ಯದಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಂದರೆ ಏಪ್ರಿಲ್ ೨ನೇ ವಾರದಿಂದ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ವಾತಾವರಣವನ್ನು ತಂಪಾಗಿಸುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ಮೂರು ದಿನಗಳಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿರುವುದು ಸದ್ಯ ಮಳೆ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಹವಾಮಾನ ಇಲಾಖೆ ಪ್ರಕಾರ ರಾಜ್ಯಾದ್ಯಂತ ಜೂನ್ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್‌ನಿಂದ ಹಲವು ಕಡೆಗಳಲ್ಲಿ ಮಳೆ ಆರಂಭವಾದರೂ, ಜೂನ್ ವೇಳೆಗೆ ರಾಜ್ಯದ್ಯಂತ ಅತ್ಯುತ್ತಮ ಮಳೆಯಾಗುವ ಮುನ್ಸೂಚನೆ ಇದೆ.