ಯುವಕನ ಕೊಲೆ ಪ್ರಕರಣ: ಇಬ್ಬರ ಬಂಧನ
ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿ ಜಾಯ್ ಲ್ಯಾಂಡ್ ಶಾಲೆ ಬಳಿ ಬುಧವಾರ ರಾತ್ರಿ ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದನ್ನು ಪ್ರಶ್ನಿಸಿದ ಯುವಕನನ್ನೇ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಆರೋಪಿಗಳಾದ ರವಿರಾಜ್(40) ಹಾಗೂ ಸೂರಜ್(28) ರನ್ನು ಉಳ್ಳಾಲ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಜಾಯ್ ಲ್ಯಾಂಡ್ ಶಾಲಾ ಬಳಿ ನಿವಾಸಿ ವರುಣ್ ಗಟ್ಟಿ(28) ಎಂಬವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಯ ಸರಸ್ವತಿ ಕಾಲನಿ ನಿವಾಸಿ ರವಿರಾಜ್ ಮತ್ತು ಸೂರಜ್‌ನನ್ನು ಗುರುವಾರ ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿಗಳು ವರುಣ್ ಜೊತೆ ಹಳೇ ವೈಷಮ್ಯ ಇದ್ದು, ಇದೇ ದ್ವೇಷದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂರಜ್ ಚಾಲಕನಾಗಿ ದುಡಿಯುತ್ತಿದ್ದ, ರವಿರಾಜ್ ಗ್ಯಾಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ 10.45ರ ವೇಳೆಗೆ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯ ಕಟ್ಟೆಯೊಂದರಲ್ಲಿ ಕುಳಿತು ಆರೋಪಿ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದರು. ಈ ವೇಳೆ ತನ್ನ ಮನೆಯಲ್ಲಿದ್ದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದ.
ಈ ವೇಳೆ ಇತ್ತಂಡಗಳ ನಡುವೆ ವಾಗ್ವಾದ ನಡೆದ ಕಾರಣ ಆರೋಪಿಗಳು ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದರು. ಗಂಭೀರ ಗಾಯಗೊಂಡ ವರುಣ್ ನನ್ನು ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆ ವೇಳೆಗೆ ಆತ ಮೃತಪಟ್ಟಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.