For the best experience, open
https://m.samyuktakarnataka.in
on your mobile browser.

ಯುವಕರಿಗೆ ಬಿಜೆಪಿ ಏನು ಮಾಡಿದೆ?

10:53 PM Feb 25, 2024 IST | Samyukta Karnataka
ಯುವಕರಿಗೆ ಬಿಜೆಪಿ ಏನು ಮಾಡಿದೆ

ಲಖನೌ: ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿ೨೦ಯಂಥ ಅಂತಾರಾಷ್ಟ್ರೀಯ ಸಮಾವೇಶಗಳನ್ನು ನಡೆಸಿ ದೇಶದ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಅದನ್ನು ನಾವೂ ಒಪ್ಪುತ್ತೇವೆ. ಆದರೆ ಅವರು ಆಡಳಿತಕ್ಕೆ ಬಂದ ಹತ್ತು ವರ್ಷಗಳ ಅವಧಿಯಲ್ಲಿ ಯುವಕರು, ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿಗೆ ಏನು ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಅವರು ಭಾನುವಾರ ಅಲೀಗಢದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಯುವಕರಿಗೆ ಉದ್ಯೋಗ ಇಲ್ಲ, ರೈತರ ಸಮಸ್ಯೆಗಳು ಬಗೆಹರಿಯದೆ ಅವರಿನ್ನೂ ರಸ್ತೆ ಮೇಲೆ ಕುಳಿತಿದ್ದಾರೆ, ಹಣದುಬ್ಬರ ಜನರಿಗೆ ಹೊರೆಯಾಗಿ ಕಾಡುತ್ತಿದೆ ಎಂದು ದೇಶದ ಪರಿಸ್ಥಿತಿಯನ್ನು ಬಿಚ್ಚಿಟ್ಟರು.
ಯುಪಿಎ ಆಡಳಿತದಲ್ಲಿ ಯುವಕರಿಗೆ ಸೇನೆಯಲ್ಲಿ ಅವಕಾಶಗಳಿದ್ದವು. ಮೋದಿ ಸರ್ಕಾರ ಅಗ್ನಿವೀರ್ ವ್ಯವಸ್ಥೆಯನ್ನು ಜಾರಿಗೆ ತಂದು ಅದನ್ನೂ ಕಸಿದುಕೊಂಡಿದೆ.
ಸಾರ್ವಜನಿಕ ವಲಯದ ಕಂಪನಿಗಳನ್ನು ಅದಾನಿಯಂಥವರಿಗೆ ಮಾರಿದೆ. ಇದರಿಂದ ತಮಗೇನೂ ಲಾಭ ಇಲ್ಲ ಎನ್ನುವುದನ್ನು ಜನಸಾಮಾನ್ಯರು ಅರಿತುಕೊಳ್ಳಬೇಕಾಗಿದೆ ಎಂದರು.
ರಾಹುಲ್ ಗಾಂಧಿ ಮಾತನಾಡಿ, ಅಲ್ಪಸಂಖ್ಯಾತರಿಗೆ, ಒಬಿಸಿಗಳಿಗೆ, ಆದಿವಾಸಿಗಳಿಗೆ ಮತ್ತು ದಲಿತರಿಗೆ ಕೇಂದ್ರ ಬಜೆಟ್‌ನಲ್ಲಿ ಏನೂ ಇಲ್ಲ. ಶೇಕಡಾ ೭೦ರಷ್ಟು ಜನಸಂಖ್ಯೆಗೆ ಕೇವಲ ಶೇಕಡಾ ೭ರಷ್ಟು ಅನುದಾನ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ಶೇಕಡಾ ೫೫ರಷ್ಟಿರುವ ಜನಸಂಖ್ಯೆಗೆ ಕೇವಲ ಶೇಕಡಾ ೪ರಷ್ಟು ನೀಡಲಾಗಿದೆ ಎಂದು ದೂರಿದರು.