For the best experience, open
https://m.samyuktakarnataka.in
on your mobile browser.

ಯುವನಿಧಿ ಯೋಜನೆಗೆ ದಿ. 12 ರಂದು ಚಾಲನೆ

02:21 PM Jan 06, 2024 IST | Samyukta Karnataka
ಯುವನಿಧಿ ಯೋಜನೆಗೆ ದಿ  12 ರಂದು ಚಾಲನೆ

ಕಲಬುರಗಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವ ನಿಧಿ ಯೋಜನೆ ಜನೇವರಿ 12 ರಂದು ಶಿವಮೊಗ್ಗಾ ನಗರದಲ್ಲಿ ಲೋಕರ್ಪಣೆಗೊಳ್ಳಲಿದ್ದು ನಿರುದ್ಯೋಗಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದ ರಾಜ್ಯದ 5 ಲಕ್ಷ ಅಭ್ಯರ್ಥಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಗೆ ವಾರ್ಷಿಕ ರೂ 250 ಕೋಟಿ ಖರ್ಚಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಈ ಜಿಲ್ಲೆಯಲ್ಲಿ 5 ವಿಶ್ವವಿದ್ಯಾಲಯಗಳು, 6 ಇಂಜಿನಿಯರಿಂಗ್ ಕಾಲೇಜು, 12 ಪಾಲಿಕೆಟ್ನಿಕ್ ಕಾಲೇಜು ಹಾಗೂ 80 ಕ್ಕೂ ಅಧಿಕ ಪದವಿ ಕಾಲೇಜುಗಳಿವೆ. 2022-23 ನೇ ಸಾಲಿನಲ್ಲಿ‌ 9000 ಕ್ಕೂ ಅಧಿಕ ಪದವಿ ಹಾಗೂ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿದ್ದು ಅವರಲ್ಲಿ ಇದುವರೆಗೆ 1575 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಪದವಿ ಹಾಗೂ ಡಿಪ್ಲೋಮಾ ಮುಗಿದು ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗವಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದವರು ಈ ಯೋಜನೆಗೆ ಅರ್ಹತರಿದ್ದು ನೋಂದಾವಣೆಗೆ ಯಾವುದೇ ಕಾಲಮಿತಿಯಿಲ್ಲ ಹಾಗಾಗಿ ಇನ್ನುಳಿದ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

ಖಾಲಿ ಹುದ್ದೆ ಭರ್ತಿ
ರಾಜ್ಯದಲ್ಲಿ ಗೃಹ,‌ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸೇರಿದಂತೆ ಸುಮಾರು 2.40 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಎಲ್ಲ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಈ ವಿಚಾರದಲ್ಲಿ ಸರ್ಕಾರ ತನ್ನ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸ್ಕಿಲ್ ಡೆವೆಲಪ್ ಮೆಂಟ್.

ರಾಜ್ಯ ಸರ್ಕಾರ ಕೇವಲ ನಿರುದ್ಯೋಗ ಭತ್ಯೆ ನೀಡುವುದಿಲ್ಲ ಅದರ ಜೊತೆಗೆ ಕೌಶಲ್ಯ ಅಭಿವೃದ್ದಿಗೆ ಒತ್ತು ನೀಡಲಿದ್ದು ಉತ್ಜೃಷ್ಟ ಮಟ್ಟದ ಮಾನವ ಸಂಪನ್ಮೂಲ ಉತ್ಪನ್ನ ಮಾಡುವ ನಿಟ್ಟಿನಲ್ಲಿ ಕೌಶಲ್ಯ ಸಲಹಾ ಸಮಿತಿ ರಚನೆ ಮಾಡಿದ್ದು ತಾವು ಅಲ್ಲದೇ ಸಚಿವ ಶರಣಪ್ರಕಾಶ ಪಾಟೀಲ್ ಅವರು ಆ ಸಮಿತಿಯಲ್ಲಿದ್ದು ಕರ್ನಾಟಕ ಕೌಶಲ್ಯ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸುವ ಅಭ್ಯರ್ಥಿಗಳಿಗೆ ಖಾಸಗಿ ಅಥವಾ ಸರ್ಕಾರದ ಸಹಯೋಗದೊಂದಿಗಿನ ಸಂಸ್ಥೆಗಳ ಮೂಲಕ ಸೂಕ್ತ ಕೌಶಲ್ಯ ತರಬೇತಿ ನೀಡಲಾಗುವುದು. ಆ ಮೂಲಕ ಅಂತಹ ಅಭ್ಯರ್ಥಿಗಳು ಕೆಲಸ ಪಡೆದುಕೊಳ್ಳುವಲ್ಲಿ ಅನುಕೂಲವಾಗುವಂತ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ಹೇಳಿದರು.

ರಸ್ತೆ ಅಭಿವೃದ್ದಿ.

ರಾಜ್ಯದಲ್ಲಿರುವ ರಾಜ್ಯ ಹೆದ್ದಾರಿಗಳ ಅಭಿವೃದ್ದಿಗಾಗಿ ರೂ 9000 ಕೋಟಿ‌ ಅನುದಾನ ತೆಗೆದಿರಿಸುವ‌ ನಿರ್ಣಯವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಲೋಕೋಪಯೋಗಿ ಇಲಾಖೆ ಸಚಿವರು ಈ ಕುರಿತು ಕ್ರಮವಹಿಸಲಿದ್ದಾರೆ ಎಂದು ಹೇಳಿದ ಖರ್ಗೆ, ಜಿಲ್ಲೆಯಲ್ಲಿನ ಹಾಳಾದ ರಸ್ತೆಗಳ ಅಭಿವೃದ್ದಿಗೆ ಇದು ಸಹಕಾರಿಯಾಗಲಿದೆ ಎಂದರು.

ಉದ್ಯೋಗ ಮೇಳ.

ಜನೇವರಿ ಅಂತ್ಯ ಅಥವಾ ಫೆಬ್ರುಬರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದ್ದು, ನಂತರ ಪ್ರಾದೇಶಿಕ, ಜಿಲ್ಲಾ ಮಟ್ಟದಲ್ಲಿಯೂ ಕೂಡಾ ಉದ್ಯೋಗ ಮೇಳ ಆಯೋಜಿಸಲಾಗುವುದು. ಕರ್ನಾಟಕ ಕೌಶಲ್ಯ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿದ ಅಭ್ಯರ್ಥಿಗಳು ಕೂಡಾ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ಸಚಿವರು ಹೇಳಿದರು.

ಜನಸ್ಪಂದನ.

ಇದೇ ಜನೇವರಿ 9 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲಬುರಗಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಆಲಿಸಲು ಜನಸ್ಪಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿಂದೆ ಚಿಂಚೋಳಿಯಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ 612 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅವುಗಳಲ್ಲಿ 606 ಅರ್ಜಿಗಳ ವಿಲೇವಾರಿ ಮಾಡಲಾಗಿದ್ದು, 6 ಅರ್ಜಿಗಳು ಬಾಕಿ ಇವೆ ಎಂದರು.

ನಕಲಿ ಅಂಕಪಟ್ಟಿ.

ನಕಲಿ ಅಂಕಪಟ್ಟಿ ವಿಚಾರದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆ ನನಗೆ ಹೆಚ್ಚಿನ‌ಮಾಹಿತಿ ಇಲ್ಲ ಮಾಧ್ಯಮಗಳಲ್ಲಿ ಬಂದ ಸುದ್ದಿ ಓದಿದ್ದೇನೆ. ವಿಚಾರ ತಿಳಿದುಕೊಂಡು ಆ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಾತಿಗೊಬ್ಬ ಡಿಸಿಎಂ.

ಜಾತಿಗೊಬ್ಬ ಡಿಸಿಎಂ ನೇಮಿಸುವ ಕುರಿತಂತೆ ಕೂಗೆದ್ದಿದೆ ಎನ್ನುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳಲು ಪಕ್ಷದಲ್ಲಿ ಆಂತರಿಕ‌ ಸ್ವಾತಂತ್ರ್ಯ ವಿದೆ. ಆದರೆ,‌ಹೈಕಮಾಂಡ್ ಈ‌ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಎಚ್ ಡಿಡಿ ಮೊದಲು ಜೆಡಿಎಸ್ ಉಳಿಸಿಕೊಳ್ಳಲಿ.

ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡುವ ಮೊದಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮೊದಲು ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಈ ಹಿಂದೆ ಯಾರು ಹೇಗೆ ಸಿಎಂ ಹಾಗೂ ಪ್ರಧಾನಿ ಆಗಿದ್ದರು ಎಂದು ಅವರು ನೋಡಲಿ ಎಂದು ಪ್ರಿಯಾಂಕ್ ಟಾಂಗ್ ಕೊಟ್ಟರು.

ರಾಮಭಕ್ತರು ಯಾರು?

ರಾಮಮಂದಿರ ಉದ್ಘಾಟನೆ ನಡೆಯುತ್ತಿರುವ ಸಂದರ್ಭದಲ್ಲಿ ರಾಮ ಭಕ್ತರ ಮೇಲೆ ರಾಜ್ಯ ಸರ್ಕಾರ ಜೈಲಿಗೆ ಹಾಕುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು 16 ಕೇಸು ಇರುವವರು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಜೂಜು ಆಡಿಸುವವರು, ಅಕ್ರಮ ಸಾರಾಯಿ ಮಾರಾಟ ಮಾಡುವವರು ರಾಮಭಕ್ತರಾ? ಎಂದು ಮರು ಪ್ರಶ್ನೆ ಹಾಕಿದರು. ನಮ್ಮ ಜಿಲ್ಲೆಯಲ್ಲಿಯೇ ಹಲವಾರು ಕೇಸು ಹಾಕಿಸಿಕೊಂಡಿರುವವರು, ಅಪಘಾತವನ್ನು ಹಲ್ಲೆ ಯತ್ನ ಎಂದು ಬಿಂಬಿಸಿದವರು ರಾಮಭಕ್ತರೇ? ಈ ವಿಚಾರದಲ್ಲಿ ಆರ್. ಅಶೋಕ್ ಅವರು ನನ್ನ ರಾಜೀನಾಮೆ ಕೇಳಿದ್ದರು. ಈಗ ಅರೆಸ್ಟ್ ಮಾಡಿ ಎಂದು ಅಭಿಯಾನ ಮಾಡುತ್ತಿದ್ದಾರೆ. ಅಶೋಕಣ್ಣ ನೀವು ಯಾರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದೀರಾ ? ಎಂದು ಯೋಚಿಸಿ ಎಂದು ಕುಟುಕಿದರು.

ಕೇಸು ದಾಖಲಿಸಿದ್ದು ಅಣ್ಣಾಮಲೈ.

ಬಾಬಾಬುಡನಗಿರಿ ವಿಚಾರದಲ್ಲಿ ಭಕ್ತರ ಮೇಲೆ‌ ಕೇಸು ದಾಖಲಿಸಿದ್ದು ಈಗಿನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ. ರಾಮಭಕ್ತರ ಮೇಲೆ ಕರಸೇವಕರ ಮೇಲೆ ಬಿಜೆಪಿ ಸರ್ಕಾರ ಯಾವ ಕೇಸು ದಾಖಲಿಸಿಲ್ಲ. ಆದರೆ, ಬಹಳ ದಿನ ಬಾಕಿ ಇರುವ ವಾರಂಟ್ ಕೇಸ್ ಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿದ್ದರಿಂದ ರಾಜ್ಯ ಸರ್ಕಾರ ಕ್ರಮವಹಿಸುತ್ತಿದೆ. ಈ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ ಅವರೇಕೆ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಲಿಲ್ಲ‌ ಎಂದು ಪ್ರಶ್ನಿಸಿದರು.

ಕೇಸರಿ ಶಾಲು ಹಾಕಿದ ತಕ್ಷಣ ಬಿಡಬೇಕೆ?

ಕೇಸರಿ ಶಾಲು ಹಾಕಿಕೊಂಡು ಅಕ್ರಮ ಚಟುವಟಿಕೆ‌ ನಡೆಸಿದರೆ ಸುಮ್ಮನಿರಬೇಕೆ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಎಂಪಿ ಚುನಾವಣೆಗೆ ಸಚಿವರು ರೆಡಿ.

ಹೈಕಮಾಂಡ್ ಸೂಚಿಸಿದರೆ ಸಚಿವರು‌ಗಳು ಮುಂಬರುವ ಎಂ ಪಿ ಚುನಾವಣೆಗೆ ನಿಲ್ಲಲು ರೆಡಿಯಾಗಿರುವುದಾಗಿ ಹೇಳಿದ ಸಚಿವರು, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ.

ರಾಮಭಕ್ತರೇ?

ನೀವು ರಾಮಭಕ್ತರೇ? ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಿದರೆ ಹೋಗುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ನಾನು ಸಂವಿಧಾನ ಭಕ್ತ. ನನಗೆ ಆಹ್ವಾನ ನೀಡಲು ಬಿಜೆಪಿಯರು ಯಾರು? ಬಿಜೆಪಿಯವರ ಸೂಚನೆಯಂತೆ ಟ್ರಸ್ಟ್ ಆಹ್ವಾನ ನೀಡುತ್ತಿದೆ. ಅಲ್ಲಿ ನಡೆಯುತ್ತಿರುವುದು ಒನ್ ಮ್ಯಾನ್ ಶೋ ಎಂದರು.