ಯುವನ್ಯಾಯ ಗ್ಯಾರಂಟಿ ಬಿಡುಗಡೆ
ಬೆಂಗಳೂರು: ರಾಜ್ಯ ಯುವಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ಮಂಜುನಾಥ್‌ಗೌಡ ಅವರು ಬುಧವಾರ ಕೆಪಿಸಿಸಿ ಕಚೇರಿಯ ಭಾರತ್‌ಜೋಡೋ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷದ ಧ್ವಜ ನೀಡುವ ಮೂಲಕ ಕಾರ್ಯಾಧ್ಯಕ್ಷ ಸ್ಥಾನದ ಪದಗ್ರಹಣ ನೇರವೇರಿಸಿದರು.
ಈ ವೇಳೆ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ದೊಡ್ಡ ಇತಿಹಾಸವುಳ್ಳ ಪಕ್ಷ. ದೇಶದಲ್ಲಿ ೧೮ ವರ್ಷದವರಿಗೆ ಮತದಾನದ ಹಕ್ಕು ನೀಡುವ ಮೂಲಕ ದಿ. ರಾಜೀವ್‌ಗಾಂಧಿ ಅವರು ಪ್ರಜಾತಂತ್ರದಲ್ಲಿ ಯುವಕರಿಗೆ ಶಕ್ತಿ ತುಂಬಿದರು ಎಂದು ಶ್ಲಾಘಿಸಿದರು. ಈ ಬಾರಿಯ ಚುನಾವಣೆಯಲ್ಲಿ ೨೮ ಕ್ಷೇತ್ರಗಳ ಪೈಕಿ ೧೪ ಕ್ಷೇತ್ರಗಳಲ್ಲಿ ಯುವಕರಿಗೆ ನಮ್ಮ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಬೇರೆ ಯಾವುದೇ ಪಕ್ಷದಲ್ಲಿ ಇಂತಹ ತೀರ್ಮಾನ ಮಾಡಿಲ್ಲ. ವಿಧಾನಸಭೆಯಲ್ಲೂ ೫೩ ಮಂದಿ ಯುವಕರಿಗೆ ಪಕ್ಷ ಟಿಕೆಟ್ ನೀಡಿತ್ತು ಎಂದರು.
೩೦ ಲಕ್ಷ ಹುದ್ದೆಗಳ ಭರ್ತಿ ಗ್ಯಾರಂಟಿ
ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಯುವಕರ ಸಹಿತ ಎಲ್ಲರೂ ಶ್ರಮಿಸಬೇಕು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡ ಒಂದು ಕಾಲದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅವರ ಬದುಕು, ಹೆಜ್ಜೆ ನಮಗೆ ಆದರ್ಶವಾಗಿರಬೇಕು. ನಾಯಕರಾದ ರಾಹುಲ್ ಗಾಂಧಿ ಅವರಿಗೆ ಯುವಕರ ಮೇಲೆ ಅಪಾರವಾದ ನಂಬಿಕೆ ಇದೆ. ಹಾಗಾಗಿ ಯುವ ನ್ಯಾಯದ ಮೂಲಕ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ ೩೦ ಲಕ್ಷ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಪ್ರತ್ಯೇಕ ಕಾನೂನು ಜಾರಿ, ಗಿಗ್ ಆರ್ಥಿಕತೆಯಲ್ಲಿ ಸಾಮಾಜಿಕ ಭದ್ರತೆ, ಯುವ ಬೆಳಕು ಕಾರ್ಯಕ್ರಮದ ಮೂಲಕ ಯುವ ಉದ್ಯಮಿಗಳಿಗೆ ಉತ್ತೇಜನ ನೀಡಲು ಪ್ರತಿ ಜಿಲ್ಲೆಗೆ ೫ ಸಾವಿರ ಕೋಟಿ ಅನುದಾನ ನೀಡಲು ತೀರ್ಮಾನಿಸಿದ್ದೇವೆ ಎಂದು ಡಿಸಿಎಂ ವಿವರಿಸಿದರು.
ನಾಯಕರಾಗಬೇಕಾದರೆ ನೀವು ಪ್ರತಿ ಬೂತ್‌ನಲ್ಲಿ ಐದು ಯುವಕರಿಗೆ ಜವಾಬ್ದಾರಿ ನೀಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಪ್ರಚಾರ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಮುನ್ನಡೆ ತಂದುಕೊಡಬೇಕು. ವ್ಯಕ್ತಿಪೂಜೆ ಬಿಟ್ಟು ಪಕ್ಷಪೂಜೆ ಮಾಡಿ.ನಮ್ಮ ಸರ್ಕಾರದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷರಿಗೆ ಸಂಪುಟ ಸ್ಥಾನಮಾನ ನೀಡಲಾಗಿದೆ. ಆ ಮೂಲಕ ನಾವು ಯುವಕರಿಗೆ ಆದ್ಯತೆ ನೀಡಿದ್ದೇವೆ ಎಂದರು
ವ್ಯಕ್ತಿಗಿಂತ ಪಕ್ಷ ದೊಡ್ಡದು
ಈ ವೇಳೆ ಮಾತನಾಡಿದ ಮಂಜುನಾಥ ಗೌಡ ಅವರು, ಯಾರು ಇರಲಿ, ಇಲ್ಲದಿರಲಿ ಪಕ್ಷ ಮುನ್ನಡೆಯುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಕೆಪಿಸಿಸಿ ಅಧ್ಯಕ್ಷರು ಯಾವಾಗಲೂ ಹೇಳುತ್ತಾರೆ. ಅವರ ಮಾತು ನಿಜ. ನಾವೆಲ್ಲರೂ ಅವರ ಕೈ ಬಲಪಡಿಸೋಣ. ಪಕ್ಷವನ್ನು ಸಂಘಟಿಸೋಣ. ನಾನು ಈ ಮಟ್ಟಕ್ಕೆ ಬೆಳೆಯಲು ಶಿವಕುಮಾರ್ ಅವರ ಆಶೀರ್ವಾದ ಕಾರಣ ಎಂದು ಧನ್ಯತೆಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಬಂಟಿ ಶೆಲ್ಕೆ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಗೌತಮ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.