ಯುವ, ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ
ನವದೆಹಲಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಿದ್ದರೂ ಇನ್ನೂ ಮೋಕ್ಷ ಸಿಕ್ಕಿಲ್ಲ. ಬುಧವಾರ ಯಾವುದೇ ಕ್ಷಣದಲ್ಲಾದರೂ ಪ್ರಕಟವಾಗಬಹುದೆಂಬ ನಿರೀಕ್ಷೆ ಹುಸಿಯಾಯಿತು. ತಡರಾತ್ರಿವರೆಗೂ ಅದರ ಸುಳಿವು ಸಿಗಲಿಲ್ಲ. ೧೫ ಹೊಸಮುಖಗಳೂ ಸೇರಿದಂತೆ ಇದೇ ಮೊದಲ ಬಾರಿಗೆ ಆರು ಮಹಿಳೆಯರಿಗೆ ಟಿಕೆಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು
ಮತ್ತೊಂದು ಸುತ್ತಿನ ಚರ್ಚೆ ನಡೆದ ಬಳಿಕ ಪಟ್ಟಿ ಅಂತಿಮಗೊಳಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ದಾವಣಗರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶೇಷ ಸಮಾಲೋಚನೆ ನಡೆದಿದೆ. ವರಿಷ್ಠರು ಸ್ಪರ್ಧೆಗೆ ಸೂಚಿಸಿದ್ದರೂ ಯಾವೊಬ್ಬ ಮಂತ್ರಿಗಳಿಗೂ ಚುನಾವಣೆ ಅಖಾಡಕ್ಕಿಳಿಯುವ
ಅವಕಾಶ ಸಿಕ್ಕಿಲ್ಲ, ಬದಲಿಗೆ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಟಾಸ್ಕ್ ಕೊಡಲಾಗಿದೆ.
ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಲೇ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಕೆಲವು ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ನಿಮ್ಮ ಹೆಸರು ಅಂತಿಮಗೊಂಡಿದೆ. ತಕ್ಷಣದಿಂದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿ ಶುಭವಾಗಲಿ ಎನ್ನುವ ಸಂದೇಶ ರವಾನಿಸಿರುವುದು ವಿಶೇಷವಾಗಿದೆ. ಬಾಗಲಕೋಟೆಯಿಂದ ಪ್ರಬಲ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಪ್ರತಿರೋಧದ ನಡುವೆಯೂ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್‌ಗೆ ಚಾನ್ಸ್ ಸಿಕ್ಕಿದೆ. ವೀಣಾ ಕಣ್ಣಿರಿಟ್ಟಿದ್ದರೆ, ಕ್ಷೇತ್ರದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಮುಖಂಡರ ವಿರೋಧದ ಉಡುಪಿ-ಚಿಕ್ಕಮಗಳೂರಿನಿಂದ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಲಾಗಿದೆ. ಸುಧೀರ್‌ಕುಮಾರ್ ಮೊರೊಳ್ಳಿ ಪ್ರಬಲ ಆಕಾಂಕ್ಷಿಯಾಗಿದ್ದರು. ಕುಟುಂಬ ರಾಜಕಾರಣ ವಿರೋಧಿಸುತ್ತಲೇ ಕಾಂಗ್ರೆಸ್ ೨೮ ಕ್ಷೇತ್ರಗಳ ಪೈಕಿ ೧೬ರಲ್ಲಿ ಕುಟುಂಬ ಸದಸ್ಯರಿಗೆ ಮಣೆ ಹಾಕುವ ಮೂಲಕ ಗೆಲುವೊಂದೇ ಮಾನದಂಡ ಎನ್ನುವ ಸಮರ್ಥನೆಗೆ ಮುಂದಾಗಿದೆ. ರಾಜ್ಯ ರಾಜಕೀಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಲೋಕಸಭೆಗೆ ಆರು ಮಹಿಳೆಯರನ್ನು ಕಣಕ್ಕಿಳಿಸಿದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ