ಯೋಗೀಶಗೌಡ ಹತ್ಯೆ ಆರೋಪಿ ಮುತ್ತಗಿಗೆ ಸಿಬಿಐ ಭದ್ರತೆ
ಧಾರವಾಡ: ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಬಸವರಾಜ ಮುತ್ತಗಿಗೆ ಸದ್ಯ ಸಿಬಿಐ ಭದ್ರತೆ ಒದಗಿಸಿದ್ದು, ಗುರುವಾರ ಸಿಐಎಸ್‌ಎಫ್ ಅಥವಾ ಸಿಆರ್‌ಪಿಎಫ್ ಭದ್ರತೆ ನೀಡಲಾಗುತ್ತಿದೆ.
ಯೋಗೀಶಗೌಡರ ಹತ್ಯೆ ಪ್ರಕರಣದ ಎ೧ ಆರೋಪಿಯಾಗಿರುವ ಬಸವರಾಜ ಮುತ್ತಗಿ ೧೭ನೇ ಎಸಿಎಂಎಂ ಕೋರ್ಟ್‌ನಲ್ಲಿ ೧೬೪(೧) ಅಡಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಈ ತಪ್ಪೊಪ್ಪಿಗೆಯನ್ನು ಸಿಆರ್‌ಪಿಸಿ ೩೦೬ರಡಿ ಮುತ್ತಗಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸಿಬಿಐ ಸಮ್ಮತಿ ನೀಡಿದೆ. ಆದರೆ, ತಮಗೆ ಜೀವ ಬೆದರಿಕೆ ಇದ್ದು ಭದ್ರತೆ ನೀಡುವಂತೆ ಮುತ್ತಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಮುತ್ತಗಿ ಸಲ್ಲಿಸಿರುವ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಅವರಿಗೆ ಸಿಆರ್‌ಪಿಎಫ್ ಅಥವಾ ಸಿಐಎಸ್‌ಎಫ್ ಭದ್ರತೆ ನೀಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಕೆಲಗೇರಿಯಲ್ಲಿಯ ಬಸವರಾಜ ಮುತ್ತಗಿ ಮನೆಗೆ ಸಿಬಿಐ ಅಧಿಕಾರಿಗಳು ಭದ್ರತೆ ನೀಡಿದ್ದಾರೆ. ಗುರುವಾರ ಸಿಆರ್‌ಪಿಎಫ್ ಅಥವಾ ಸಿಐಎಸ್‌ಎಫ್ ಪೊಲೀಸರಿಂದಲೂ ಭದ್ರತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.