ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದರೆ ಸ್ವಾಗತ
ಮಂಗಳೂರು: ಸಿ.ಪಿ. ಯೋಗೇಶ್ವರ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. ಪಕ್ಷದ ತತ್ವ-ಸಿದ್ಧಾಂತ ನಂಬಿ ಬರುವುದಾದರೆ ಸ್ವಾಗತ. ನಮಗೇನೂ ಅವರ ಅನಿವಾರ್ಯತೆ ಇಲ್ಲ. ಬರುತ್ತೇವೆ ಎಂದವರಿಗೆ ಬೇಡ ಎನ್ನಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಯಾವ ರೀತಿ ಬಿಜೆಪಿಗೆ ಮೋಸ ಮಾಡಿದ್ದರು, ಈಗ ಯಾರ ಜತೆ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ‘ಈಗ ಹಾವು ಬಿಡ್ತೇನೆ, ಆಗ ಬಿಡ್ತೇನೆ’ ಎನ್ನುತ್ತಾರೆ. ಜೈಲಿಗೆ ಕಳಿಸ್ತೇನೆ ಹೇಳ್ತಾರೆ, ಅವರನ್ನು ತಡೆದವರಾರು? ಯಾವ ಕ್ರಮ ಬೇಕಾದರೂ ಕೈಗೊಳ್ಳಿ. ಇಡಿ, ಐಟಿ ನಿಮ್ದೇ ಇದೆ ಎಂದು ಟೀಕಿಸಿದ ಅವರು, ಕುಮಾರಸ್ವಾಮಿ ಈಗ ಕೈಗಾರಿಕಾ ಸಚಿವರು ಬೇರೆ ಆಗಿದ್ದಾರೆ. ಅನೇಕ ಕೈಗಾರಿಕೆಗಳು ಈಗಾಗಲೇ ಖಾಸಗಿಕರಣ ಆಗಿವೆ. ಇನ್ನೂ ಕೆಲವು ಮುಚ್ಚಿವೆ. ಮೊದಲು ಆ ಬಗ್ಗೆ ಏನಾದರೂ ಮಾಡಿ, ಜನರಿಗೆ ಒಳಿತು ಮಾಡಿ. ಅದು ಬಿಟ್ಟು ಕೇವಲ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.
ಕರಾವಳಿಯಲ್ಲಿ ಬೃಹದಾಕಾರವಾಗಿರುವ ಡ್ರಗ್ಸ್ ಜಾಲವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾನೂನನ್ನು ಬಿಗಿಗೊಳಿಸಲು ಮುಂಬರುವ ಅಧಿವೇಶನದಲ್ಲಿ ಚರ್ಚೆ ಕೈಗೆತ್ತಿಕೊಳ್ಳುವುದಾಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಡ್ರಗ್ಸ್ ವ್ಯಸನದಿಂದ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ದ.ಕ.ಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂಜರಿವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಡ್ರಗ್ಸ್ ಜಾಲದ ಆರೋಪಿಗಳು ಸಿಕ್ಕಿಬಿದ್ದರೂ ಜಾಮೀನಿನಲ್ಲಿ ಹೊರಬಂದು ಮತ್ತೆ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕಾನೂನಿಗೆ ತಿದ್ದುಪಡಿ ತಂದು ಕಠಿಣ ನಿಯಮ ರೂಪಿಸಬೇಕಿದ್ದು, ಈ ಕುರಿತು ಪರಿಷತ್‌ನಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಗೆಲುವು..
ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲ ನಾಯಕರು, ಕಾರ್ಯಕರ್ತರು ಸಂಘಟಿತವಾಗಿ ದುಡಿದಿದ್ದಾರೆ. ಈ ಕ್ಷೇತ್ರದ ಶಾಸಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಗ್ರಾಪಂ ಮಟ್ಟದಿಂದ ಹಂತಹಂತವಾಗಿ ಬೆಳೆದವರು. ಇಂಥದ್ದೇ ಅಭ್ಯರ್ಥಿಯಾದ ರಾಜು ಪೂಜಾರಿ ಅವರನ್ನು ನಾವು ಕಣಕ್ಕಿಳಿಸಿದ್ದೇವೆ. ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ವಿಶ್ವಾಸ ಇರಿಸಿದ್ದು, ಗೆಲುವು ಖಚಿತ ಎಂದು ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೆರಾಡಿ, ಜಡ್ಕಲ್ ಪ್ರದೇಶದ ಜನರು ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದಾಗ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮನವೊಲಿಕೆ ಮಾಡಿದ್ದೇವೆ. ಕಸ್ತೂರಿ ರಂಗನ್ ವರದಿ ಶಿಫಾರಸು ಅನುಷ್ಠಾನ ಮಾಡಲ್ಲ ಎನ್ನುವುದು ಕಾಂಗ್ರೆಸ್ ಸರ್ಕಾರದ ನಿಲುವಾಗಿದೆ. ಈ ಪ್ರದೇಶಗಳಲ್ಲಿ ಕಾಂಗ್ರೆಸ್ ಬಲವಾಗಿದೆ. ಬಹಿಷ್ಕಾರದಿಂದ ಕೊಂಚ ಹಿನ್ನಡೆ ಆಗಿದೆ. ಆದರೆ ಗೆಲುವಿಗೆ ಅಡ್ಡಿಯಿಲ್ಲ ಎಂದು ಹೇಳಿದರು.
ಪರಿಷತ್‌ನ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಕಿಶನ್ ಹೆಗ್ಡೆ, ವಿಕಾಸ್ ಶೆಟ್ಟಿ, ಲಾರೆನ್ಸ್ ಡಿಸೋಜ ಉಪಸ್ಥಿತರಿದ್ದರು.