ಯೋಜನೆಗೆ ನೀತಿ ನಿಯಮ
ಭಾರತ ಸರ್ಕಾರದ ನೀತಿ ಆಯೋಗದ ಸಂರಚನೆಯ ಮುಖ್ಯ ಆಶಯ ದೇಶಕ್ಕೆ ಭವಿಷ್ಯದಲ್ಲಿ ಅಗತ್ಯವಿರುವ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಚನೆಗಳ ಮೂಲಕ ಯೋಜನೆ ರೂಪಿಸಲು ಬೇಕಾದ ಜ್ಞಾನದ ವಿನಿಮಯ. ಇಂತಹ ಯೋಜನೆಗಳು ತತ್‌ಕ್ಷಣದ ಪರಿಣಾಮಕ್ಕೆ ಅಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ಈ ಯೋಜನೆಗಳೇ ದೇಶದ ಕಲ್ಯಾಣದ ಆಧಾರಸ್ತಂಭ. ಯೋಜನಾ ಆಯೋಗ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಪಂಚವಾರ್ಷಿಕ ಯೋಜನೆಗಳು ರೂಪುಗೊಳ್ಳುತ್ತಿದ್ದ ಮಾದರಿಯಲ್ಲಿಯೇ ಈಗ ಇನ್ನಷ್ಟು ವಿಶಾಲಾರ್ಥದಲ್ಲಿ ಜಾಗತಿಕ ಪರಿಸರವನ್ನು ಆಧರಿಸಿ ರೂಪಿಸುವ ಯೋಜನೆಗಳಲ್ಲಿ ಎಲ್ಲಾ ರಾಜ್ಯಗಳ ಗೊತ್ತುಗುರಿಗಳ ಮಾಹಿತಿ ಇರಲೇ ಬೇಕಾದದ್ದು ಅನಿವಾರ್ಯ. ಹಾಗಿಲ್ಲವಾದರೆ ಇದೊಂದು ವ್ಯರ್ಥ ಕಸರತ್ತಿಗೆ ಸಮ. ಇದರಿಂದಾಗಿಯೇ ನೀತಿ ಆಯೋಗದ ಸಭೆಗಳಲ್ಲಿ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ತುಂಬಾ ಮಹತ್ವದ ಸಂಗತಿ. ಕಳೆದ ಶನಿವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿಗಳು ಬಹಿಷ್ಕಾರ ಹಾಕಿದ್ದರಿಂದ ರಾಜಕೀಯ ಮೇಲುಗೈ ಸಾಧಿಸಲು ಅವಕಾಶವಾದರೂ, ಸದರಿ ಮುಖ್ಯಮಂತ್ರಿಗಳು ಪ್ರತಿನಿಧಿಸುವ ರಾಜ್ಯಗಳ ಮಟ್ಟಿಗೆ ಇದೊಂದು ಅನ್ಯಾಯ. ಏಕೆಂದರೆ ಯಾವ ವೇದಿಕೆಯಲ್ಲಿ ರಾಜ್ಯದ ವಿಚಾರಧಾರೆಗಳು ಪ್ರಸ್ತಾಪವಾಗಬೇಕಾಗಿತ್ತೋ ಆ ಸಭೆಯಿಂದ ದೂರ ಉಳಿದರೆ ರಾಜ್ಯಕ್ಕೆ ಅನ್ಯಾಯವೇ ವಿನಃ ಕೇಂದ್ರ ಸರ್ಕಾರಕ್ಕಲ್ಲ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಈ ಸಭೆಗೆ ಗೈರುಹಾಜರಾಗಿದ್ದರಿಂದ ರಾಜ್ಯದ ಜನರಿಗೆ ಇದೊಂದು ಮಹತ್ವದ ಸಂಗತಿ.
ನಿಜ, ನೀತಿ ಆಯೋಗದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿಗಳು ಹಾಗೂ ಮತ್ತಿತರ ಆಹ್ವಾನಿತರಿಗೆ ತಮ್ಮ ವಿಚಾರಧಾರೆಗಳನ್ನು ಮಂಡಿಸಲು ಮುಕ್ತ ಸಮಯಾವಕಾಶ ದೊರಕುವುದು ಕಡಿಮೆ. ಯಾಕೆಂದರೆ, ಎಲ್ಲಾ ಪ್ರತಿನಿಧಿಗಳಿಗೂ ಸಮಾನ ಅವಕಾಶ ಕೊಡಬೇಕೆಂಬ ನಿಯಮ ಇದಕ್ಕೆ ಕಾರಣ. ಇಂಡಿಯಾ ಒಕ್ಕೂಟದ ಒಳಗೂ-ಹೊರಗೂ ಇದ್ದಂತೆ ಕಾಣುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯಲ್ಲಿ ಪಾಲ್ಗೊಂಡು ಕೆಲ ಸಮಯ ಮಾತನಾಡಿ ಸಮಯಾವಕಾಶ ಸಾಲದು ಎಂಬ ಕಾರಣದಿಂದ ಸಭಾತ್ಯಾಗ ಮಾಡಿ ಕಲಾಪ ನೀತಿ ನಿಯಮಗಳ ಆಧಾರದ ಮೇಲೆ ನಡೆಯುತ್ತಿಲ್ಲ. ಕೇವಲ ಬೇಕಾದವರಿಗೆ ಮಾತ್ರ ಮಾತನಾಡಲು ಅವಕಾಶ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಈಗ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿರುವ ವಿಚಾರ. ಇನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೆಲವರು ಹೇಳುವಂತೆ ಸುಮಾರು ಹದಿನೇಳು ನಿಮಿಷ ಮಾತನಾಡಿ ತಮ್ಮ ರಾಜ್ಯದ ಗತಿಸ್ಥಿತಿಗಳ ವಿವರಣೆಯನ್ನು ಮಂಡಿಸಿದರೆಂದು ಗೊತ್ತಾಗಿದೆ. ಚಂದ್ರಬಾಬು ನಾಯ್ಡು ಒಬ್ಬ ನುರಿತ ರಾಜಕೀಯ ಪಟು. ಕೆಲಸ ಸಾಧಿಸಿಕೊಳ್ಳುವ ಕಲೆ ಅವರಿಗೆ ಚೆನ್ನಾಗಿ ಗೊತ್ತಿದೆ. ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಯಾಗಿ ಅವಿಭಾಜ್ಯ ಆಂಧ್ರಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕಡೆಯಿಂದ ಪಡೆದ ಅಪಾರ ಪ್ರಮಾಣದ ನೆರವನ್ನು ಜನ ಈಗಲೂ ಮರೆತಿಲ್ಲ. ಇನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರುಹಾಜರಾಗಿದ್ದರಲ್ಲಿ ವಿಶೇಷವೇನೂ ಇಲ್ಲ ಎಂಬುದು ಬಲ್ಲವರ ವಿಶ್ಲೇಷಣೆ. ಬಿಹಾರ ಸರ್ಕಾರದ ವರ್ತನೆ ಹಾಗೂ ಮೀನಿನ ಹೆಜ್ಜೆ ಗುರುತಿಸಲು ಸಾಧ್ಯವಾಗುವುದಿಲ್ಲ ಎಂಬ ಮಾತು ದೆಹಲಿಯ ಮೊಗಸಾಲೆಯಲ್ಲಿ ಚಾಲ್ತಿಯಲ್ಲಿದೆ. ಬಿಹಾರದ ರಾಜಕಾರಣಿಗಳು ಹೇಗೆ ನಡೆದುಕೊಳ್ಳುತ್ತಾರೋ ಅದೇ ರೀತಿ ಅಧಿಕಾರಿಗಳು ಕೂಡಾ ನಡೆದುಕೊಳ್ಳುವ ಪ್ರವೃತ್ತಿಯನ್ನು ಈಗ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಮಹತ್ವದ ಸಭೆಗಳಿಗೆ ಮಂತ್ರಿಗಳಾಗಲೀ ಇಲ್ಲವೇ ಅಧಿಕಾರಿಗಳಾಗಲೀ ಪಾಲ್ಗೊಳ್ಳುವುದು ಅಪರೂಪದಲ್ಲಿ ಅಪರೂಪ. ಏನಾದರೂ ತೊಂದರೆ ಎದುರಾದರೆ ಮಾತ್ರ `ಜೀಯಾ ಹಸಾದ' ಎಂಬಂತೆ ದೆಹಲಿಯಲ್ಲಿ ಅಧಿಕಾರಸ್ಥರ ಸುತ್ತ ಪ್ರದಕ್ಷಿಣೆ ಹಾಕುವುದು ಅವರ ವರ್ತನೆ. ನಿತೀಶ್ ಗೈರುಹಾಜರಿಯಿಂದ ಬಿಹಾರಕ್ಕೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಏಕೆಂದರೆ ಬರಬೇಕಾದ ಲಾಭ ಮುಂಗಡಪತ್ರದಲ್ಲಿಯೇ ಬಂದು ಹೋಗಿದೆ. ಮುಂದಿನ ಸ್ಥಿತಿಗತಿಗಳ ಬಗ್ಗೆ ಬಿಹಾರದವರಿಗೆ ಆಸಕ್ತಿ ಕಡಿಮೆಯಂತೆ. ಇನ್ನು ಒಳಗೆ ನಡೆದ ಸಭೆಯಲ್ಲಿ ದೇಶದ ಮುಂದಿರುವ ಗಂಡಾಂತರದ ಸಮಸ್ಯೆಗಳ ಶಾಶ್ವತ ನಿವಾರಣೆಗೆ ಅನುಸರಿಸಬೇಕಾದ ಕ್ರಮಗಳ ಚರ್ಚೆಗೆ ಸಂಬಂಧಿಸಿದಂತೆ ಮೌಖಿಕ ಪ್ರಸ್ತಾಪಗಳಾದರೂ ಲಿಖಿತ ರೂಪದಲ್ಲಿ ಮುಖ್ಯಮಂತ್ರಿಗಳಿಂದ ಬಂದಿರುವ ಭಾಷಣದ ಪ್ರತಿಗಳ ಸಾರಾಂಶವೇ ಸಮಗ್ರ ಯೋಜನೆ ರೂಪಿಸಲು ಆಧಾರ. ಇದರಿಂದಾಗಿ ಸಭೆಗೆ ಬಹಿಷ್ಕಾರ ಹಾಕಿದ್ದ ರಾಜ್ಯಗಳ ಮುಖ್ಯಮಂತ್ರಿಗಳ ಲಿಖಿತ ಭಾಷಣ ನೀತಿ ಆಯೋಗದ ಕಡತಗಳಲ್ಲಿ ಇಲ್ಲ. ಅರ್ಥಾತ್ ಕರ್ನಾಟಕದ ಪ್ರಸ್ತಾಪಗಳು ಈಗ ನೀತಿ ಆಯೋಗದ ಪರಿಶೀಲನೆಯ ವಸ್ತುವಾಗಿಲ್ಲ ಎಂಬುದು ಒಂದು ಲೋಪದ ಸಂಗತಿಯೇ.
ಈ ಹಿಂದೆ ಯೋಜನಾ ಆಯೋಗ ಹಾಗೂ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಗಳಿಗೆ ಪ್ರತಿಪಕ್ಷಗಳ ಮುಖ್ಯಮಂತ್ರಿಗಳು ಬಹಿಷ್ಕಾರ ಹಾಕುತ್ತಿದ್ದ ಸ್ವರೂಪವೇ ಬೇರೆ. ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ನಡೆಯುತ್ತಿದ್ದ ಈ ಸಭೆಗಳಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಪಾಲ್ಗೊಂಡು ಸಂಕ್ಷಿಪ್ತವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ನಂತರ ಕಲಾಪಕ್ಕೆ ಬಹಿಷ್ಕಾರ ಹಾಕುತ್ತಿದ್ದರು. ಕರ್ನಾಟಕದ ಪರವಾಗಿ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿ ಅವರು ಈ ಮಾದರಿಯ ಕ್ರಮವನ್ನು ಅನುಸರಿಸಿದ್ದರು. ಇದರಿಂದ ರಾಜಕೀಯವಾಗಿ ತಮ್ಮ ನಿಲುವನ್ನು ಸಾದರ ಪಡಿಸುವ ಜೊತೆಗೆ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯದ ನಿಲುವುಗಳನ್ನು ಲಿಖಿತ ರೂಪದಲ್ಲಿ ಮಂಡಿಸಿ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರವನ್ನು ಅನುಸರಿಸುತ್ತಿದ್ದ ಮಾದರಿ ಎಲ್ಲಾ ಕಾಲಕ್ಕೂ ಅನ್ವಯವಾಗುವಂಥದ್ದು. ಬಹುಶಃ ಈಗ ಬಹಿಷ್ಕಾರ ಹಾಕಿದ ಮುಖ್ಯಮಂತ್ರಿಗಳೂ ಕೂಡಾ ಇದೇ ದಾರಿಯನ್ನು ತುಳಿದಿದ್ದರೆ ಆಯಾ ರಾಜ್ಯಗಳ ನಿಲುವು ಮುಂಬರುವ ಯೋಜನೆಗಳಿಗೆ ಆಧಾರವಾಗಿಯೂ ಜೊತೆಗೆ ತಮ್ಮ ರಾಜಕೀಯ ನಿಲುವನ್ನು ವ್ಯಕ್ತಪಡಿಸಲು ಕೂಡಾ ಬಳಸಿಕೊಳ್ಳುವ ಅವಕಾಶವಿತ್ತು.