For the best experience, open
https://m.samyuktakarnataka.in
on your mobile browser.

ರಂಗ ಸೇವೆ, ಸಮಾಜ ಸೇವೆಯಲ್ಲಿಯೇ ಪ್ರತಿಭೆ ಬೆಳಗಿದ ಢಗಳಚಂದ‌

10:00 PM Oct 30, 2024 IST | Samyukta Karnataka
ರಂಗ ಸೇವೆ  ಸಮಾಜ ಸೇವೆಯಲ್ಲಿಯೇ ಪ್ರತಿಭೆ ಬೆಳಗಿದ ಢಗಳಚಂದ‌

ಬಾಗಲಕೋಟೆ(ಇಳಕಲ್): ಸುಮಾರು ನಾಲ್ಕು ದಶಕಗಳ ದೀರ್ಘ ಅವಧಿಯಲ್ಲಿ ರಂಗಭೂಮಿಯ ಮತ್ತು ಸಮಾಜ ಸೇವೆಯಲ್ಲಿಯೇ ತಮ್ಮ ಪ್ರತಿಭೆ ಬೆಳಗಿದ ಹನುಮಾನದಾಸ ವಲ್ಲಭದಾಸ ಪವಾರ ಉಫ್೯ ಢಗಳಚಂದ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಾರವಾಡಿ ಸಮಾಜದಲ್ಲಿಯೇ ಬೆಳೆದು ಅಲ್ಲಿ ತನ್ನ ತಂದೆ ಅಜ್ಜನ ಆಶ್ರಯದಲ್ಲಿ ಬೆಳೆದು ಇಳಕಲ್ ಅರ್ಬನ್ ಬ್ಯಾಂಕಿನ ಲಕ್ಷ್ಮೀ ಪಿಗ್ಮಿ ಸೇವೆಯಲ್ಲಿ ಸಾರ್ಥಕತೆ ಕಂಡ ಢಗಳಚಂದ ಹವ್ಯಾಸಿ ರಂಗಸಂಸ್ಥೆ ಸ್ನೇಹರಂಗದ ಸಂಸ್ಥಾಪಕ ಸದಸ್ಯರಾಗಿ ಅಲ್ಲಿ ಆಡುತ್ತಿದ್ದ ನಾಟಕಗಳಲ್ಲಿ ಒಂದೊಲ್ಲೊಂದು ಪಾತ್ರಗಳಲ್ಲಿ ಮಿಂಚಿದವರು.
ಸ್ನೇಹರಂಗದ ವತಿಯಿಂದ ನಾಟಕ ಪ್ರದರ್ಶನ ಬೀದಿಯಲ್ಲಿಯೇ ನಡೆಯಲಿ ಇಲ್ಲವೇ ಕಾಶ್ಮೀರದಲ್ಲಿಯೇ ನಡೆಯಲಿ‌ ಅಲ್ಲಿ ಹೋಗಿ ತನ್ನ ಛಾಪನ್ನು ಮೂಡಿಸಿ ಬರುತ್ತಿದ್ದ ಢಗಳಚಂದಗೆ ಹಲವಾರು ಚಲನಚಿತ್ರಗಳೂ ಪಾತ್ರಗಳನ್ನು ನೀಡಿದವು. ಫಸ್ಟ್ ರ್ಯಾಂಕ್ ರಾಜು, ವಿರಾಗಿ ಹಿಡಿದು ಹಲವಾರು ಚಲನಚಿತ್ರಗಳಲ್ಲಿ ಅಭಿನಯ ಮಾಡಿದರೂ ಚಿತ್ರರಂಗ ಕೈ ಹಿಡಿಯಲಿಲ್ಲ.
ಸ್ನೇಹರಂಗದ ವತಿಯಿಂದ ಪ್ರದರ್ಶನಗೊಂಡ ಒಂದು ವಾಡೆಯ ಕತೆ, ಕಡ್ಲಿಮಟ್ಟಿ ಕಾಶಿಬಾಯಿ, ತಲೆದಂಡ, ಹಗರಣ, ಜೋಕುಮಾರಸ್ವಾಮಿ, ಸಿರಿಸಂಪಿಗೆ, ಕುರ್ಚಿ ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಪಿಗ್ಮಿ ಹಣದ ಸಂಗ್ರಹಣೆಯಲ್ಲಿ ತೊಂದರೆ ಆದಾಗ ತನ್ನ ಮಕ್ಕಳಿಗೆ ಅದರಲ್ಲಿ ತರಬೇತಿಯನ್ನು ನೀಡಿ ಅವರನ್ನು ಸಹ ಕೆಲಸಕ್ಕೆ ಕಳಿಸಿ ರಂಗಭೂಮಿಯಲ್ಲಿ ಸಲ್ಲಿಸಿದ ಸೇವೆ‌ ಕೊನೆಗೂ ರಾಜ್ಯೋತ್ಸವ ಪ್ರಶಸ್ತಿ ಸಿಗುವವರೆಗೆ ಕೈ ಹಿಡಿದಿದೆ.
ಜೊತೆಗೆ ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ವಾಗಿ ಮೆತ್ತಗಾಗಿದ್ದರೂ ಅಲ್ಲೂ ಇಲ್ಲೂ ದಣಿವರಿಯದೇ ದುಡಿದ ಹನುಮಾನದಾಸ ಪವಾರ ಅವರನ್ನು ಆ ಹೆಸರಿನಿಂದ ಕರೆದರೇ ಯಾರಿಗೂ ಗೊತ್ತಾಗುವದಿಲ್ಲ ಢಗಳಚಂದ ಎಂದು ಕರೆದಾಗ ಮಾತ್ರ ಅವರು ಓ ಎನ್ನುವ ಹಾಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತೆ ಆಗಿದೆ.