For the best experience, open
https://m.samyuktakarnataka.in
on your mobile browser.

`ರಂಜಾನ್ ಒಂದು ಆರಾಧನೆ'

12:02 AM Apr 11, 2024 IST | Samyukta Karnataka
 ರಂಜಾನ್ ಒಂದು ಆರಾಧನೆ

ಡಾ. ತಯಬಅಲಿ ಅ. ಹೊಂಬಳ, ಗದಗ
ಉಪವಾಸ ವ್ರತದ ಮೂಲ ಉದ್ದೇಶ ಆತ್ಮದ ಪರಿಶುದ್ಧತೆಯಾಗಿದೆ. ಆದ್ದರಿಂದಲೇ ಪವಿತ್ರ ಕುರ್‌ಆನ್ ಹೇಳುತ್ತದೆ. ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣ ವಿಶೇಷ ಉಂಟಾಗುವುದು ಎಂದು ಆಶಿಸಲಾಗಿದೆ (ಅಲ್ ಬಕರ: ೧೮೩). ಆತ್ಮ ನಿಯಂತ್ರಣ: ಎಲ್ಲಿಯವರೆಗೆ ವ್ಯಕ್ತಿಯು ಆತ್ಮ ನಿಯಂತ್ರಣವನ್ನು ಹೊಂದುವುದಿಲ್ಲವೋ ಅಲ್ಲಿಯವರೆಗೆ ಅವನಲ್ಲಿ ಧರ್ಮನಿಷ್ಠೆ ಬೆಳೆಯಲಾರದು. ಚಿತ್ತಾಕಾಂಕ್ಷೆಗಳ ಪ್ರವಾಹದಲ್ಲಿರುವ ವ್ಯಕ್ತಿಗೆ ಅಲ್ಲಾಹುನ ಮಹಾನತೆಯ ಪರಿವೆಯೂ ಇರುವುದಿಲ್ಲ. ಉಣ್ಣುವ, ಕುಡಿಯುವ ಹೊರತು ಇನ್ನೂ ಕೆಲವು ವಿಷಯ ನಮ್ಮ ಗಮನ ಬಯಸುತ್ತವೆ ಎಂಬುದನ್ನು ಉಪವಾಸ ವ್ರತವು ಪ್ರಾಯೋಗಿಕವಾಗಿ ತೋರಿಸಿ ಕೊಡುತ್ತದೆ. ಉಪವಾಸ ವ್ರತವು ದಾಸನನ್ನು ಅಲ್ಲಾಹುನೆಡೆಗೆ ಮತ್ತು ಜೀವನದ ಉನ್ನತ ವಾಸ್ತವಿಕತೆಗಳ ಕಡೆಗೆ ಗಮನಹರಿಸುವಂತೆ ಮಾಡುತ್ತದೆ. ಅಲ್ಲಿಂದ ಅವನು ತನ್ನ ಪ್ರಭುವಿಗೆ ತೀರಾ ನಿಕಟನಾಗುತ್ತಾನೆ. ಅಲ್ಲಿ ಅಂಧಕಾರವು ಕರಗಿ ಹೋಗುತ್ತದೆ. ರಂಜಾನ್ ತಿಂಗಳ ಉಪವಾಸ ವ್ರತವು ಮೇಲ್ನೋಟಕ್ಕೆ ಆಹಾರ, ಪಾನೀಯ ಸೇವನೆ ಮತ್ತು ಇತರೆ ಸೇವನೆಯಿಂದ ತಡೆದಿರಿಸಿಕೊಳ್ಳವುದಕ್ಕೆ ಹೆಸರಾಗಿದೆ. ಆದರೆ, ಆಂತರಿಕವಾಗಿ ಉಪವಾಸದಿಂದ ವ್ಯಕ್ತಿಗೆ ಅಕಾಂಕ್ಷೆಗಳ ನಿಯಂತ್ರಣ ಮತ್ತು ಧರ್ಮ ನಿಷ್ಠೆಯ ಜೀವನ ಲಭಿಸುತ್ತದೆ. ಈ ಅರ್ಥದಲ್ಲಿ ಉಪವಾಸ ವ್ರತಕ್ಕೂ ಐತಿಕಾಫ್ (ತಪಶ್ಚರ್ಯೆ)ಗೂ ಸಾಮ್ಯತೆ ಇದೆ. ಆದ್ದರಿಂದಲೇ ಐತಿಕಾಫ್‌ನೊಂದಿಗೆ ಉಪವಾಸ ಆಚರಿಸುವುದು ಅಗತ್ಯವೆಂದು ಹೇಳಲಾಗಿದೆ. ಸಹನೆಯ ತಿಂಗಳು: ಪ್ರವಾದಿಯೊರ್ವರು (ಸ) ಉಪವಾಸದ ತಿಂಗಳನ್ನುಸಹನೆಯ ತಿಂಗಳು' ಎಂದು ಹೇಳಿರುವುದು ಉಪವಾಸ ವ್ರತವು ಪರಿಶುದ್ಧ ಆರಾಧನೆಯಾಗಿದೆ. ಅಲ್ಲಾಹುನ ಮಹಾನತೆ ಮತ್ತು ಶ್ರೇಷ್ಠತೆಯ ಸನ್ಮಾರ್ಗ ದರ್ಶನ ಮತ್ತು ಕೃತಜ್ಞತಾರ್ಪಣೆಯ ದಾರಿಯಾಗಿದೆ. ರಂಜಾನ್‌ನಲ್ಲಿ ಎಲ್ಲರೂ ಒಟ್ಟಿಗೆ ಉಪವಾಸ ವ್ರತಾಚರಿಸುವುದರಿಂದ ಮನಸ್ಸಿನ ಶಾಂತಿ ಧರ್ಮಶೀಲತೆ ಆಧ್ಯಾತ್ಮಿಕತೆ ಬೆಳೆಯುತ್ತದೆ. ನೀವು ಪ್ರತ್ಯಕ್ಷ ಮತ್ತು ಪರೋಕ್ಷ ಪಾಪಕಾರ್ಯ, ತಪ್ಪುಗಳಿಂದ ದೂರವಿರಿ. ಪಾಪ ಗಳಿಸುವವರು ತಮ್ಮ ಗಳಿಕೆಯ ಪ್ರತಿಫಲ ಪಡೆದೇ ತೀರುವರು' (ಪವಿತ್ರ ಕುರ್‌ಆನ್-೬.೧೨೦). ಜೀವನದ ತಪ್ಪುಗಳಿಂದ ಮುಕ್ತಿಗೊಳಿಸಲು ರಂಜಾನ್ ಉಪವಾಸ ವ್ರತವು ಉತ್ತಮ ದಾರಿ. ಉದಾರಿ ಪ್ರಭು: ಪ್ರಭು ಮಹಾ ಉದಾರಿ. ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು. ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು. (ಪವಿತ್ರ ಕುರ್‌ಆನ್:೯೬:೧:೫). ಪವಿತ್ರ ರಂಜಾನ್ ತಿಂಗಳ ೧೮ನೇ ಶುಕ್ರವಾರ ರಾತ್ರಿ (ಕ್ರಿ.ಶ. ೬೧೦ ಆಗಸ್ಟ್ ೧೭ನೆಯ) ಎಂದುಅಲ್ ಅಲಕ್' ಎಂಬ ಅಧ್ಯಾಯದ ಮೊದಲ ಐದು ವಚನ ಪಠಿಸಿ ಮುಹಮ್ಮದ್(ಸ)ರು ನಮಾಜ್ ಮಾಡುತ್ತಾರೆ. ಇದುವೇ ರಂಜಾನ್ ತಿಂಗಳ ಪ್ರಪ್ರಥಮ ನಮಾಜ್. ಅಂದಿನಿಂದ ಪ್ರಭಾತ ಮತ್ತು ಅಪರಾಹ್ನೆ (ಫಜ್ರ್ ಮತ್ತು ಅಸರ್)ದ ಎರಡೆರಡು ರಕಾತ್‌ಗಳ ನಮಾಜ್ ಕ್ರಮ ಜಾರಿಗೆ ಬಂದಿತು. ರಂಜಾನ್ ತಿಂಗಳಿನಲ್ಲಿಯೇ ಅಂತಿಮ ಪ್ರವಾದಿ ಮೊಹಮ್ಮದ್(ಸ)ರಿಗೆ ಪ್ರಪ್ರಥಮ ಅಲ್ಲಾಹನ ದಿವ್ಯವಾರ್ತೆ ಮತ್ತು ದಿವ್ಯವಾಣಿ ಕೇಳಿಸಿತು.