For the best experience, open
https://m.samyuktakarnataka.in
on your mobile browser.

ರಕ್ತ ಪರಿಚಲನೆಯ ಶತ್ರು ವೆರಿಕೋಸ್ ವೇನ್

04:00 AM Oct 01, 2024 IST | Samyukta Karnataka
ರಕ್ತ ಪರಿಚಲನೆಯ ಶತ್ರು ವೆರಿಕೋಸ್ ವೇನ್

ಮನುಷ್ಯನ ದೇಹದ ರಚನೆಯೇ ತುಂಬಾ ಅಚ್ಚರಿ ಮೂಡಿಸುವಂತಹದ್ದು, ತಲೆ ಮೆದುಳಿನಿಂದ ಅಂಗಾಲುವರೆಗೆ ದೇಹ ನರವ್ಯೂಹ ವ್ಯವಸ್ಥೆಯಿಂದ ಕೂಡಿರುವ ಅದ್ಭುತ ಸೃಷ್ಟಿ. ಅಂತಹ ದೇಹಕ್ಕೆ ಆಧುನಿಕ ಯುಗದಲ್ಲಿ ರೋಗಗಳು ಅನೇಕ, ಅದಕ್ಕೆ ಪರಿಹಾರವು ಸುಲಭವಲ್ಲದಿದ್ದರೂ ತಾಳ್ಮೆಯಿಂದ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ನಾವು ಸಂಚರಿಸುವ ಎಲ್ಲೆಡೆ ರಸ್ತೆಗಳನ್ನು ನೋಡುತ್ತೇವೆ. ಅದರಲ್ಲಿ ಕಿರಿದಾದ ರಸ್ತೆ, ಹೈವೇ ರಸ್ತೆ, ಮಣ್ಣು ರಸ್ತೆ, ಸಿಮೆಂಟು ರಸ್ತೆ ಹೀಗೆ ಹಲವಾರು ದಾರಿಗಳನ್ನು ಕಾಣುತ್ತೇವೆ. ನಾವುಗಳು ಹೇಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಾಗವಾಗಿ ಹೋಗಲು ಉತ್ತಮವಾದ ರಸ್ತೆಗಳಿದ್ದಲ್ಲಿ ಅಷ್ಟು ಬೇಗ ಸುರಕ್ಷಿತವಾಗಿ ನಾವುಗಳು ಗಮ್ಯವನ್ನು ತಲುಪುತ್ತೇವೆ. ಅದೇ ರೀತಿ ನಮ್ಮ ದೇಹದ ರಕ್ತಪರಿಚಲನೆಯ ಸಂಚಾರ ಸರಾಗವಿದ್ದಲ್ಲಿ ದೇಹಕ್ಕೆ ಉತ್ತಮ ಅರೋಗ್ಯ ಸಿಗುವುದರಲ್ಲಿ ಅನುಮಾನವೇ ಇಲ್ಲ. ಆದರೆ ರಕ್ತ ಸಂಚಾರದಲ್ಲಿ ತೊಂದರೆಯಾದಲ್ಲಿ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ವೆರಿಕೋಸ್ ವೇನ್ ಸಹ ಒಂದು.
ಮುಖ್ಯವಾಗಿ ಹೃದಯದಿಂದ ರಕ್ತವನ್ನು ದೇಹದ ವಿವಿಧ ಭಾಗಗಳಿಗೆ ಪೂರೈಕೆ ಮಾಡುವಲ್ಲಿ ರಕ್ತನಾಳವು ಮಹತ್ವದ ಪಾತ್ರ ವಹಿಸುವುದು. ಅದೇ ರೀತಿಯಾಗಿ ರಕ್ತದ ಜತೆಗೆ ಇದು ಆಮ್ಲಜನಕವನ್ನು ಕೂಡ ಕೊಂಡೊಯ್ಯುವುದು. ಹೃದಯದಿಂದ ದೇಹದ ಭಾಗಗಳಿಗೆ ಶುದ್ಧ ರಕ್ತ ಹರಿಯುವುದು ಧಮನಿಯಾದರೆ, ದೇಹದ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತರುವ ನಾಳಗಳು ಅಪಧಮನಿ. ಅಶುದ್ಧ ರಕ್ತವನ್ನು ಹೃದಯಕ್ಕೆ ಒಯ್ಯುವ ಅಪಧಮನಿಗಳು ಗುರುತ್ವಾಕಾಂಕ್ಷೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ. ಹೃದಯ ಬಡಿತದ ನಡುವಿನ ಅರೆಗಳಿಗೆಯಲ್ಲಿ ಈ ಏಕಮುಖ ಕವಾಟಗಳು ರಕ್ತ ಹಿಮ್ಮುಖವಾಗಿ ಹರಿಯುವುದನ್ನು ತಡೆಯುವುದು. ಈ ಕಾರ್ಯ ನಿರ್ವಹಿಸಲು ಕವಾಟಗಳು ವಿಫಲವಾದಾಗ, ರಕ್ತ ಕಾಲು, ತೊಡೆ ಭಾಗಕ್ಕೆ ಹರಿದು ನಿಲ್ಲುವುದು. ಹೀಗಾದಾಗ ಕಾಲುಗಳಲ್ಲಿನ ಅಪಧಮನಿಗಳು ವಕ್ರವಾಗಿ ಊದಿಕೊಳ್ಳುತ್ತವೆ. ಕಾಲಿನ ಮೀನಖಂಡ ರಕ್ತನಾಳಗಳ ಮೂಲಕ ಹೃದಯಕ್ಕೆ ಹೋಗುವ ರಕ್ತನಾಳಗಳು ವೀಕ್ ಆಗಿದ್ದಲ್ಲಿ ರಕ್ತ ಹೃದಯಕ್ಕೆ ಹೋಗದೆ ವಾಪಸ್ ಕಾಲು ಕಡೆ ಬರುತ್ತದೆ. ಆ ರಕ್ತ ನೀಲಿಯಾಗಿ ರಕ್ತನಾಳಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನೇ ವೆರಿಕೋಸ್ ವೇನ್ ಎಂದು ಕರೆಯುತ್ತಾರೆ.
ವಯಸ್ಕರಲ್ಲಿ ಈ ಸಮಸ್ಯೆ ಸಾಮಾನ್ಯ. ಇದರ ಪರಿಣಾಮವಾಗಿ ಪ್ರಾರಂಭದಲ್ಲಿ ಕಾಲುಗಳಲ್ಲಿ ಸೆಳೆತ, ಊತ ಕಾಣಿಸಿಕೊಂಡು ಬರುಬರುತ್ತ ಚರ್ಮದಲ್ಲಿ ರಕ್ತನಾಳಗಳು ಉಬ್ಬಿಕೊಂಡು ದಪ್ಪವಾಗಿ ಕಾಲಿನಲ್ಲಿ ಹುಣ್ಣಾಗುತ್ತವೆ, ರಕ್ತ ಹೆಪ್ಪುಗಟ್ಟುತ್ತದೆ, ಕಾಲುಗಳು ಕಲ್ಲು ತರಹ ಗಟ್ಟಿಯಾಗಿ ಮುಟ್ಟಿದರೆ ನೋವು, ತುರಿಕೆ, ನವೆ, ಉರಿಯಾಗಿ ಮೀನಖಂಡ ಕೆಳಗೆ ಕಾಲು ಕಪ್ಪುವರ್ಣಕ್ಕೆ ತಿರುಗುತ್ತವೆ, ಕೆಲವೊಮ್ಮೆ ಕೆನ್ನೇರಳೆ ಎಂದು ಕರೆಯಲ್ಪಡುವ ರಕ್ತನಾಳಗಳು ಸೀಳಲ್ಪಟ್ಟು ಚರ್ಮದ ಹೊರಪದರದಿಂದ ರಕ್ತ ಹೊರಚಿಮ್ಮುತ್ತದೆ.
ಆಹಾರ ಪದ್ಧತಿಯಿಂದ ಉಪಯೋಗ: ಆಹಾರ ಪದ್ಧತಿಯಲ್ಲಿ ನೈಸರ್ಗಿಕವಾಗಿ ಸಿಗುವ ಉತ್ರಾಣಿ ಸೊಪ್ಪುಗಳ ಬಳಕೆಯಿಂದ ರಕ್ತನಾಳಗಳು ಬಾವು ಬರುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚು ನೀರು ಮತ್ತು ಜ್ಯೂಸ್‌ಗಳನ್ನು ಕುಡಿಯಬೇಕು. ಫೈಬರ್‌ಭರಿತ ಆಹಾರವನ್ನು ಸೇವಿಸಿ ಜೊತೆಗೆ ನಿಮ್ಮ ಆಹಾರದಲ್ಲಿ ಈರುಳ್ಳಿ, ಸೇಬು, ಹಣ್ಣುಗಳಂತಹ ಫ್ಲೇವನಾಯ್ಡ್ಗಳನ್ನು ಸೇರಿಸಿ. ಕಿತ್ತಳೆ, ನಿಂಬೆ, ಹಣ್ಣುಗಳು, ಕೋಸುಗಡ್ಡೆ, ಟೊಮೆಟೊಗಳು ಮತ್ತು ಆಲೂಗಡ್ಡೆಗಳಲ್ಲಿ ವಿಟಮಿನ್ ಸಿ ಹಾಗೂ ಇ ಇರುವುದರಿಂದ ಉರಿಯೂತವನ್ನು ಕಡಿಮೆ ಮಾಡಿ ಸರಾಗ ರಕ್ತ ಪರಿಚಲನೆಗೆ ಅವಕಾಶ ಮಾಡಿಕೊಡುತ್ತದೆ. ಲೆವೆಂಡರ್, ಸಿಟ್ರಸ್ ಎಣ್ಣೆಗಳನ್ನು ಕೊಬ್ಬರಿ ಎಣ್ಣೆಯೊಂದಿಗೆ ಅಥವಾ ಬೆಳ್ಳುಳ್ಳಿ ಮಿಶ್ರಿತ ಕೊಬ್ಬರಿ ಎಣ್ಣೆಯನ್ನು ಕಾಲುಗಳಿಗೆ ಹಚ್ಚಿಕೊಂಡು ಮಸಾಜ್ ಮಾಡುವುದರಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಹೀಗೆ ಮಾಡಿದಲ್ಲಿ ಉತ್ತಮ
ದಿನನಿತ್ಯ ವಾಕಿಂಗ್, ಸೈಕಲಿಂಗ್, ಈಜು, ಕಾಲುಗಳಿಗೆ ವ್ಯಾಯಾಮ ಮಾಡುವುದರಿಂದ ಹಾಗೂ ತಾಡಸನ, ಉತ್ಕಾಟಾಸನ, ಪವನ ಮುಕ್ತಾಸನಗಳಂತಹ ಆಸನಗಳ ಯೋಗಾಭ್ಯಾಸ ಮಾಡುವುದು. ಗೋಡೆಯ ನೆರವಿನಿಂದ ಮಾಡುವ ವ್ಯಾಯಾಮಗಳಿಂದ ಕಾಲುಗಳಲ್ಲಿ ರಕ್ತ ಪರಿಚಲನೆಯನ್ನು ಸುಗಮಪಡಿಸಿಕೊಳ್ಳಬಹುದು. ದೇಹದ ತೂಕವನ್ನು ಆದಷ್ಟು ಇಳಿಸಿಕೊಳ್ಳುವುದು, ಮಲಗಿದಾಗ ಕಾಲನ್ನು ದೇಹಕ್ಕಿಂತ ಮೇಲೆ ಇಟ್ಟುಕೊಳ್ಳುವುದರಿಂದ, ತುದಿಗಾಲಲ್ಲಿ ೩೦ ಸೆಕೆಂಡ್ ನಿಂತು ವ್ಯಾಯಾಮ ಮಾಡುವುದು, ಹೆಚ್ಚಾಗಿ ಕುಳಿತು ಕೆಲಸ ಮಾಡುವ ಸಮಯದಲ್ಲಿ ಆಗಾಗ್ಗೆ ನಡೆದಾಡುವ ರೂಢಿ ಮತ್ತು ಹೆಚ್ಚಾಗಿ ನಿಂತು ಕೆಲಸ ಮಾಡುವ ಸಂದರ್ಭದಲ್ಲಿ ಆಗಾಗ್ಗೆ ವಿಶ್ರಾಂತಿ ಪಡೆದುಕೊಳ್ಳುವುದನ್ನು ರೂಢಿ ಮಾಡಿಕೊಂಡಲ್ಲಿ ಉತ್ತಮ.