For the best experience, open
https://m.samyuktakarnataka.in
on your mobile browser.

ರಘುಪತಿ ಭಟ್ ನಿವೃತ್ತಿಗೆ 24 ಗಂಟೆ ಗಡುವು

11:57 AM May 23, 2024 IST | Samyukta Karnataka
ರಘುಪತಿ ಭಟ್ ನಿವೃತ್ತಿಗೆ 24 ಗಂಟೆ ಗಡುವು

ಉಡುಪಿ: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿಜೆಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರಿಗೆ ಸ್ಪರ್ಧೆಯಿಂದ ನಿವೃತ್ತಿ ಪಡೆಯಲು 24 ಗಂಟೆಗಳ ಗಡುವು ನೀಡಲಾಗಿದೆ. ತಪ್ಪಿದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ಶಾಸಕರಾಗಿರುವ ಭಟ್ ಅವರಿಗೆ ಪಕ್ಷ ಅವಕಾಶ ನೀಡಿಲ್ಲ ಎನ್ನುವುದು ಸರಿಯಲ್ಲ. ಅಭ್ಯರ್ಥಿ ನೀಡಿಲ್ಲ ಎಂಬ ಕಾರಣಕ್ಕೆ ಕರಾವಳಿಗೆ ಅನ್ಯಾಯವಾಗಿದೆ ಎನ್ನುವುದನ್ನು ಒಪ್ಪಲಾಗದು. ಪಕ್ಷ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಪಕ್ಷದ ಸೂಚನೆ ಅನುಸರಿಸಿ ಅಭ್ಯರ್ಥಿಗಳ ಗೆಲುವಿಗೆ ಯತ್ನಿಸಬೇಕು. ಅದು ಬಿಟ್ಟು ಬೇರೇನು ಮಾಡಿದರೂ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಸೂಕ್ತ ಕ್ರಮ‌ ಜರುಗಿಸುವುದು ಅನಿವಾರ್ಯವಾಗುತ್ತದೆ.
ಸಹಶಾಸಕ, ಸ್ನೇಹಿತ, ಪಕ್ಷದ ಹಿರಿಯ ಕಾರ್ಯಕರ್ತ ಎಂಬ ನೆಲೆಯಲ್ಲಿ ರಘುಪತಿ ಭಟ್ ಅವರಿಗೆ ಸಾಕಷ್ಟು ಹೇಳಿಯಾಗಿದೆ. ಪಕ್ಷ ವರಿಷ್ಠರೂ ಮಾತುಕತೆ ನಡೆಸುತ್ತಿದ್ದಾರೆ.
ಭಟ್ ಸ್ಪರ್ಧೆಯಿಂದ ಹಿಂದೆಸರಿಯುವ ವಿಶ್ವಾಸ ಇದೆ. ಬಿಜೆಪಿ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ ಹಾಗೂ ಭೋಜೇಗೌಡ ಅವರ ಗೆಲುವಿಗೆ ಪಕ್ಷ ನಾಯಕರು, ಕಾರ್ಯಕರ್ತರು ಶ್ರಮಿಸುತ್ತಿದ್ದೇವೆ ಎಂದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಅಮಾನತುಗೊಳಿಸುವಂತೆ ರಾಜ್ಯ ವರಿಷ್ಠರಿಗೆ ಶಿಫಾರಸು ಮಾಡಿರುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.