ರಣಜಿ ತಂಡಕ್ಕೆ ಹುಬ್ಬಳ್ಳಿಯ ರೋಹಿತ್ ಆಯ್ಕೆ
ವಸಂತ ಮುರ್ಡೇಶ್ವರ
"ರಣಜಿ ತಂಡದಲ್ಲಿ ಸ್ಥಾನ ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ಮನೀಷ್, ಮಯಾಂಕ್‌ರಂತಹ ಹಿರಿಯ ಆಟಗಾರರೊಡನೆ ಆಡುವ ಅವಕಾಶ ದೊರೆತಿದ್ದು ನನ್ನ ಅದೃಷ್ಟ".
ಹೀಗೆಂದು 'ಸಂಯುಕ್ತ ಕರ್ನಾಟಕ'ದ ಜೊತೆ ಸಂತಸ ಹಂಚಿಕೊಂಡವರು ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಹುಡುಗ, ಪ್ರತಿಭಾನ್ವಿತ ಎಡಗೈ ಸ್ಪಿನ್ನರ್ ರೋಹಿತ್‌ಕುಮಾರ ಎ.ಸಿ.
ಹುಬ್ಬಳ್ಳಿಯಲ್ಲಿಯೇ ಜನವರಿ ೫ರಿಂದ ನಡೆಯಲಿರುವ ಹೊಸ ರಣಜಿ ಋತುವಿನ ಮೊದಲ ಪಂದ್ಯಕ್ಕಾಗಿ ಕರ್ನಾಟಕ ರಾಜ್ಯ ತಂಡ ಪ್ರಕಟಿಸಲ್ಟಡುತ್ತಿದ್ದಂತೆಯೇ ಅವಳಿನಗರಗಳ ಕ್ರಿಕೆಟ್ ವಲಯದಲ್ಲಿ ಸಂತಸ ಗರಿಗೆದರಿದೆ. ೨೦೧೬ರಲ್ಲಿ ಧಾರವಾಡದ ಪವನ ದೇಶಪಾಂಡೆ ರಣಜಿ ಆಡಿದ್ದರ ಏಳು ವರ್ಷಗಳ ನಂತರ ರೋಹಿತ್ ರಾಜ್ಯ ತಂಡದಲ್ಲಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮೂಲತಃ ರಾಣೆಬೆನ್ನೂರಿನವರಾದ ರೋಹಿತ್ ತಮ್ಮ ೧೧ನೇ ವಯಸ್ಸಿನಲ್ಲಿಯೇ ತಂದೆ ಡಾ. ಅಶೋಕಕುಮಾರರನ್ನು ಕಳೆದುಕೊಂಡರಾದರೂ, ತಾಯಿ ಡಾ. ಸರಸ್ವತಿ ಅವರ ಪೋಷಣೆ ಹಾಗೂ ಬೆಂಬಲದೊಂದಿಗೆ ಹದಿನೈದನೇ ವಯಸ್ಸಿಗೆ ಕ್ರಿಕೆಟ್ ಮೈದಾನಕ್ಕಿಳಿದರು. ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಸೇರಿ ಸಾಧನೆಯ ಮೆಟ್ಟಲುಗಳನ್ನೇರುತ್ತ ರಣಜಿ ತಂಡಕ್ಕೂ ಪದಾರ್ಪಣೆ ಮಾಡಿರುವ ರೋಹಿತ್‌ಗೊಬ್ಬ ತಮ್ಮನಿದ್ದಾನೆ. ಹುಬ್ಬಳ್ಳಿಯಲ್ಲಿ ಪಿಯುಸಿ ಓದುತ್ತಿರುವ ನಿಶ್ಚಿತ್ ಒಲವು ಕ್ರಿಕೆಟ್ ಕಡೆಗಿಲ್ಲ.
ತಮ್ಮ ಯಶಸ್ಸಿಗೆ ಕಾರಣರಾದ ತಾಯಿ ಡಾ. ಸರಸ್ವತಿ, ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷರೂ ಆಗಿರುವ, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವೀರಣ್ಣ ಸವಡಿ ಹಾಗೂ ಕೋಚ್ ನಿಜಾಮುದ್ದೀನ ಲೋಂಡೆವಾಲೆ ಅವರಿಗೆ ರೋಹಿತ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.