For the best experience, open
https://m.samyuktakarnataka.in
on your mobile browser.

ರಣಹೇಡಿತನದ ಅಸಹ್ಯ ಪ್ರದರ್ಶನ

11:07 AM Dec 20, 2023 IST | Samyukta Karnataka
ರಣಹೇಡಿತನದ ಅಸಹ್ಯ ಪ್ರದರ್ಶನ

ರಸ್ತೆಯಲ್ಲಿ ಬಡಿದಾಟ, ಅಪಘಾತದಲ್ಲಿ ಸಿಕ್ಕಿದವರ ಆಕ್ರಂದನ, ನಡುಬೀದಿಯಲ್ಲಿಯೇ ಮಾನಭಂಗಕ್ಕೆ ಯತ್ನ ಮುಂತಾದ ಅಪರಾಧ ಕೃತ್ಯಗಳು ನಡೆಯುವಾಗ ಜನರು ತಮಗೂ ಈ ಘಟನಾವಳಿಗೂ ಸಂಬಂಧವಿಲ್ಲ ಎಂಬಂತೆ ತೆಪ್ಪಗೆ ನೋಡುವ ಧೋರಣೆಯನ್ನು ರೂಡಿಸಿಕೊಂಡಿರುವ ಹಿಂದೆ ಎದ್ದು ಕಾಣುವುದು ನಾಗರಿಕ ಸಮಾಜದ ಹೆಗ್ಗುರುತಾದ ಸಾತ್ವಿಕ ಆಕ್ರೋಶದ ಕಣ್ಮರೆ.

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಸಾರ್ವಜನಿಕರ ಮುಂದೆ ಜರುಗಿರುವ ಮಹಿಳೆಯೊಬ್ಬರ ವಸ್ತ್ರಾಪಹರಣ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಪ್ರಾಯಕ್ಕೆ ಬಂದ ತರುಣ ತರುಣಿಯರು ಪ್ರೀತಿಸಿ ಮದುವೆಯಾಗುವ ಸಲುವಾಗಿ ಓಡಿಹೋದ ರೀತಿಯಿಂದ ರೊಚ್ಚಿಗೆದ್ದ ಜನ ತರುಣನ ತಾಯಿಯ ಮೇಲೆ ಪೌರುಷ ಪ್ರದರ್ಶಿಸುವ ರೀತಿಯಲ್ಲಿ ವಸ್ತಾçಪಹರಣದ ನಂತರ ಮೆರವಣಿಗೆ ಮಾಡಿರುವ ಪ್ರಸಂಗವನ್ನು ರಾಜ್ಯದ ಹೈಕೋರ್ಟ್ ಛೀಮಾರಿ ಹಾಕಿರುವ ರೀತಿಯಲ್ಲಿ
ನಾಗರಿಕ ಸಮಾಜದ ವರ್ತನೆ ಸುಧಾರಣೆಯಾಗುವ ಅಗತ್ಯವಿದೆ. ಇಂತಹ ಘನಘೋರ ಪ್ರಕರಣ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿದ್ದ ಸ್ಥಿತಿಯನ್ನು ಹೇಡಿತನದ ಪರಮಾವಧಿ ಎಂದು ಹೈಕೋರ್ಟ್ ಗುರುತಿಸಿರುವುದು
ಸಾಮಾಜಿಕ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಮೂಕಪ್ರೇಕ್ಷಕ ಸ್ಥಿತಿ ಈಗಿನ ಸಾಮಾಜಿಕ ಸ್ಥಿತಿಯಲ್ಲಿ ಸರ್ವೇಸಾಮಾನ್ಯ ಆಗುತ್ತಿರುವುದು ನಿಜಕ್ಕೂ ಖೇದದ ಸಂಗತಿ. ರಸ್ತೆಯಲ್ಲಿ ಬಡಿದಾಟ, ಅಪಘಾತದಲ್ಲಿ ಸಿಕ್ಕಿದವರ ಆಕ್ರಂದನ, ನಡುಬೀದಿಯಲ್ಲಿಯೇ ಮಾನಭಂಗಕ್ಕೆ ಯತ್ನ ಮುಂತಾದ ಅಪರಾಧ ಕೃತ್ಯಗಳು ನಡೆಯುವಾಗ ಜನರು ತಮಗೂ ಈ ಘಟನಾವಳಿಗೂ ಸಂಬಂಧವಿಲ್ಲ ಎಂಬಂತೆ ತೆಪ್ಪಗೆ ನೋಡುವ ಧೋರಣೆಯನ್ನು ರೂಡಿಸಿಕೊಂಡಿರುವ ಹಿಂದೆ ಎದ್ದು ಕಾಣುವುದು ನಾಗರಿಕ ಸಮಾಜದ ಹೆಗ್ಗುರುತಾದ ಸಾತ್ವಿಕ ಆಕ್ರೋಶದ ಕಣ್ಮರೆ. ಇಂತಹ ಕಳಕಳಿಯ ಗುಣದ ಕಣ್ಮರೆಯಿಂದಾಗಿ ದುಷ್ಟ ಶಕ್ತಿಗಳ ಕೈ ಮೇಲಾಗಿ ಶಿಷ್ಟರು ಶರಣಾಗುವ ಸ್ಥಿತಿ ತಲೆದೋರಿದೆ.
ವಂಟಿಮೂರಿಯಲ್ಲಿ ಜರುಗಿದ ಘಟನೆ ಅಪರೂಪದ್ದಲ್ಲ - ಆದರೆ, ವಿಪರೀತದ್ದು ಹಾಗೂ ಅತಿರೇಕದ್ದು. ಹಲವಾರು ಕಡೆ ಜರುಗಿರುವ ಪ್ರಕರಣಗಳಲ್ಲಿ ನ್ಯಾಯದ ಪರವಾಗಿರುವವರ ಮೇಲೆ ದಂಡೆತ್ತಿ ಹೋಗುವ ಬೆಳವಣಿಗೆಗಳು ಸಭ್ಯರನ್ನು ತಟಸ್ಥರಾಗಿ ಉಳಿಯುವ ಸ್ಥಿತಿಯನ್ನು ನಿರ್ಮಿಸಿದೆ. ಕೋಲಾರದ ಮಾಲೂರಿನಲ್ಲಿ ವಸತಿ ಶಾಲೆಯ ಮಕ್ಕಳ ಮೂಲಕ ಮಲದ ಗುಂಡಿ ಶುದ್ಧೀಕರಣದ ಘಟನಾವಳಿ ಖಂಡಿಸಲು ಮುಂದಾದ ಸಭ್ಯರಿಗೂ ಕೂಡಾ ಇಂತಹುದೇ ಪರಿಸ್ಥಿತಿ ಎದುರಾಗಿದೆ. ಸರ್ವೇಸಾಮಾನ್ಯವಾಗಿ ಅಕ್ರಮ ವೈವಾಹಿಕ ಸಂಬಂಧದ ಪ್ರಕರಣಗಳು ಬೀದಿಗೆ ಬಂದಾಗ ನಾಗರಿಕರು ಕೈಕಟ್ಟಿ ಕೂರುವಂತಹ ಸ್ಥಿತಿ ತಲೆದೋರಲು ಸಕಾರಣಗಳು ಇರಲೇಬೇಕು. ದೌರ್ಜನ್ಯಗಳ ವಿರುದ್ಧ ಸಿಡಿದೇಳುವುದು ನಾಗರಿಕ ಸಮಾಜದ ಕರ್ತವ್ಯ. ಆದರೆ, ಸಮಾಜದಲ್ಲಿಯೇ ಅಂತಹ ಗುಣಗಳು ಕಣ್ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಸಮಾಜ ರೋಗಗ್ರಸ್ತ ಸ್ಥಿತಿಗೆ ತಿರುಗುವುದು ಸ್ವಾಭಾವಿಕ. ಹೈಕೋರ್ಟ್ ನ್ಯಾಯಪೀಠ ವಿಶ್ಲೇಷಿಸಿರುವ ಹಾಗೆ ಮಹಾಭಾರತದ ವಸ್ತ್ರಾಪಹರಣ ಪ್ರಕರಣದಲ್ಲಿಯೂ ಕೂಡಾ ವಂಟಮೂರಿಯಂತಹ ಸ್ಥಿತಿ ಮಹಿಳೆಗೆ ಬಂದಿರಲಿಲ್ಲ. ಇಂತಹ ದುಸ್ಥಿತಿಯ ನಿವಾರಣೆಗೆ ಇರುವ ಉಪಾಯವೆಂದರೆ ಇಡೀ ಗ್ರಾಮಸ್ಥರಿಂದ ಪುಂಡುಗಂದಾದ ವಸೂಲಿ. ಜನತಂತ್ರ ಪದ್ಧತಿಯಲ್ಲಿ ಸಮಾಜವೊಂದು ಇಂತಹ ಪುಂಡುಗಂದಾಯದ ಕಾಲಘಟ್ಟಕ್ಕೆ ಹಿಂತಿರುಗುವುದು ಎಂದರೆ ಪ್ರಾಚೀನ ಶಿಲಾಯುಗಕ್ಕೆ ಹಿಂತಿರುಗುವುದು ಎಂದೇ ಅರ್ಥ. ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ವೈಸ್‌ರಾಯ್ ವಿಲಿಯಂ ಬೆಂಟಿಂಕ್ ಪುಂಡುಗಂದಾಯದ ಕ್ರಮವನ್ನು ಬಂಗಾಳ ಪ್ರಾಂತದಲ್ಲಿ ತಂದು ಪುಂಡುತನವನ್ನು ಹತ್ತಿಕ್ಕಿದ್ದ. ಅದು ಬ್ರಿಟಿಷ್ ಸರ್ಕಾರ. ಈಗಿರುವುದು ನಮ್ಮದೇ ಸರ್ಕಾರ.
ಜಾರಿಯಲ್ಲಿರುವ ಶಾಸನಗಳನ್ನು ನಿರ್ದಾಕ್ಷಿಣ್ಯವಾಗಿ ತಾರತಮ್ಯವಿಲ್ಲದೆ ಜಾರಿಗೊಳಿಸುವ ಬದ್ಧತೆ ಬಂದಾಗ ಸಮಾಜದಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ಬರಲಾರದು. ಜನರೂ ಕೂಡಾ ಅಕ್ರಮಗಳ ವಿರುದ್ಧ ಬೀದಿಗಿಳಿದು ದುಷ್ಕರ್ಮಿಗಳಿಗೆ ಪಾಠ ಕಲಿಸಲು ಮುಂದಾಗುವುದು ಸ್ವಾಭಾವಿಕ. ಆದರೆ, ಇತ್ತೀಚಿನ ವರ್ಷಗಳಲ್ಲಿ ಶಾಸನ ಜಾರಿ ಪ್ರಕ್ರಿಯೆ ಎಡವಟ್ಟಾಗುತ್ತಿರುವುದರಿಂದ ಸಾತ್ವಿಕ ಆಕ್ರೋಶದ ಗುಣ ಕಣ್ಮರೆಯಾಗುತ್ತಿದೆ. ಇಂತಹ ಮಾನವೀಯ ಗುಣ ಮತ್ತೆ ಅರಳುವಂತೆ ಮಾಡಲು ಸಾರ್ವಜನಿಕ ಕ್ಷೇತ್ರದ ಮುಖಂಡರು ಹಾಗೂ ರಾಜಕೀಯ ನೇತಾರರು ಒಮ್ಮತದಿಂದ ಸಾಮಾಜಿಕ ಆಂದೋಲನವೊಂದನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಕಾನೂನುಗಳ ಜಾರಿ ಪ್ರಕ್ರಿಯೆ ನೋಡಿಕೊಳ್ಳುವ ಪೊಲೀಸ್ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು `ನಾವಿರುವುದೇ ನಿಮಗಾಗಿ' ಎಂಬ ಭಾವನೆಯನ್ನು ಬಿತ್ತಲು ಮುಂದಾದರೆ ವಂಟಮೂರಿ ಪ್ರಕರಣಗಳಿಂದ ಪಾಠ ಕಲಿತಂತಾಗುತ್ತದೆ.