ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರತನ್ ನಿಜವಾದ ರತ್ನ

02:30 AM Oct 11, 2024 IST | Samyukta Karnataka

ರತನ್ ಟಾಟಾ ದೇಶದ ನಿಜವಾದ ರತ್ನ. ದೇಶಕಂಡ ಆದರ್ಶ ಉದ್ಯಮಿ, ಉದಾರಿ ಮತ್ತು ಮಾನವತಾವಾದಿ. ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧವಿದ್ದ ಧೀಮಂತ ವ್ಯಕ್ತಿ. ನನ್ನ ದೇಶ ಕಷ್ಟಕ್ಕೆ ಸಿಲುಕಿದರೆ ನನ್ನ ಇಡೀ ಆಸ್ತಿಯನ್ನು ಮುಡುಪಾಗಿಟ್ಟು ದೇಶವನ್ನು ಕಟ್ಟುತ್ತೇನೆ ಎಂಬ ಅವರ ಮಾತುಗಳು ಎಂದೆಂದಿಗೂ ಉಳಿಯುವಂತಹದು. ಅತ್ಯಂತ ಶ್ರೀಮಂತ ಅತ್ಯಂತ ಸರಳ ಜೀವನ ನಡೆಸುತ್ತಾನೆ. ಪರಿತ್ಯಾಗಿ ಆಗಿರುತ್ತಾನೆ ಎಂಬುದಕ್ಕೆ ರತನ್ ಟಾಟಾ ಸಾಕ್ಷಿಯಾಗಿದ್ದರು. ಈಗ ದಂತಕಥೆಯಾಗಿದ್ದಾರೆ. ನಮ್ಮ ಮಕ್ಕಳ ಪಠ್ಯಪುಸ್ತಕದಲ್ಲಿ ಸೇರಬೇಕಾದ ವ್ಯಕ್ತಿ. ಪಾರ್ಸಿ ಜನಾಂಗವೇ ಉದ್ಯಮದಲ್ಲಿದ್ದರೂ ಜೋರಾಸ್ಟಿಯನ್ ಧರ್ಮ ನಂಬಿದವರು. ಜಾತ್ಯತೀತ ಮನೋಭಾವ ಇವರ ಗುಣ. ಆ ಧರ್ಮದ ಮೂಲ ಆಶಯವೇ ಉತ್ತಮ ಆಲೋಚನೆ, ಉತ್ತಮ ಮಾತುಗಳು, ಉತ್ತಮ ಕೆಲಸಗಳು ಮಾತ್ರ ಉಳಿಯುತ್ತವೆ’. ಇದಕ್ಕೆ ತಕ್ಕಂತೆ ರತನ್ ಟಾಟಾ ನಡೆದುಕೊಂಡರು. ರತನ್ ಶ್ರೀಮಂತ ಕುಲದಲ್ಲಿ ಹುಟ್ಟಿದರೂ ಬಾಲ್ಯದಲ್ಲಿ ಹೆಚ್ಚು ಸುಖವನ್ನು ಕಂಡವರಲ್ಲ. ಅವರಿಗೆ ೧೦ ವರ್ಷ ಆಗಿದ್ದಾಗ ತಂದೆತಾಯಿ ಬೇರೆಬೇರೆ ಆದರು. ಅಜ್ಜಿಯ ಆಸರೆಯಲ್ಲಿ ಬೆಳೆದರು. ಅಮೆರಿಕದಲ್ಲಿ ಪದವಿ ಪಡೆದರೂ ಭಾರತದಲ್ಲಿ ಮೊದಲು ಉಕ್ಕಿನ ಕಾರ್ಖಾನೆಯಲ್ಲಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡಿದವರು. ಮೊದಲಿನಿಂದಲೂ ಮಿತಭಾಷಿ, ಸಂಕೋಚ ಸ್ವಭಾವ. ಅವರೇ ಹೇಳಿಕೊಂಡಂತೆ ಮೊದಲು ಕೆಲಸ ಮಾಡುವುದು. ಅಮೇಲೆ ಅದರ ಬಗ್ಗೆ ಚಿಂತಿಸಿ ಅದು ಸರಿಯಾಗಿರುವಂತೆ ನೋಡಿಕೊಳ್ಳುವುದು’. ಈ ಗುಣವೇ ಅವರನ್ನು ದೊಡ್ಡ ಉದ್ಯಮಿಯನ್ನಾಗಿ ಮಾಡಿತು. ಸಣ್ಣ ಪಿನ್‌ನಿಂದ ಹಿಡಿದು ವಿಮಾನ ತಯಾರಿಕೆವರೆಗೆ ಎಲ್ಲವನ್ನೂ ತಯಾರಿಸುವುದರಲ್ಲಿ ತಂತ್ರಜ್ಞಾನ ಪಡೆಯುವುದು ರತನ್ ಗುರಿಯಾಗಿತ್ತು,. ಇದರಿಂದ ೧೦೦ ಕಂಪನಿಗಳನ್ನು ಸ್ಥಾಪಿಸಿ ೬.೬೦ ಲಕ್ಷ ಜನರಿಗೆ ಉದ್ಯೋಗ ಕೊಡಲು ಸಾಧ್ಯವಾಯಿತು. ಒಟ್ಟು ೩೯೦೦ ಕೋಟಿ ರೂ. ಆಸ್ತಿಯ ಒಡೆಯ. ಆದರೂ ಎಂದೂ ಸರಳ ಜೀವನ ತ್ಯಜಿಸಿದವರಲ್ಲ. ಹೊರಗಡೆ ಹೋಗುವಾಗ ಎಂದೂ ಭದ್ರತಾ ಸಿಬ್ಬಂದಿ ಇಟ್ಟುಕೊಂಡವರಲ್ಲ.
ಟಾಟಾ ದೊಡ್ಡ ಉದ್ಯಮಿಯಾಗಿ ಬೆಳೆಯಲು ಅವರ ಬಳಿ ಇದ್ದ ಶ್ರೀಮಂತಿಕೆ ಕಾರಣವಲ್ಲ. ಅವರಿಗಿಂತ ಶ್ರೀಮಂತರು ಬೇಕಾದಷ್ಟು ಜನ ಇದ್ದರು. ಅವರು ಮೊದಲಿನಿಂದಲೂ ರೂಢಿಸಿಕೊಂಡಿದ್ದು ಉದ್ಯಮಶೀಲತೆ. ತಮ್ಮ ವೈಫಲ್ಯಕ್ಕೆ ಬೇರೆಯವರನ್ನು ದೂಷಿಸಿದವರಲ್ಲ. ಅವರಲ್ಲಿದ್ದ ಜಾಣ್ಮೆ, ಹೊಸ ಹೊಸ ಸಂಶೋಧನೆಗೆ ತೆರೆದುಕೊಳ್ಳುವ ಮುಕ್ತ ಮನಸ್ಸು ಮತ್ತು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುವುದು ಅವರನ್ನು ಬೇರೆಯವರಿಂದ ಭಿನ್ನವಾಗಿರುವಂತೆ ಮಾಡಿತು. ಎಲ್ಲರೂ ವಿದೇಶದಿಂದ ಯಾವ ವಸ್ತು ತಂದು ಇಲ್ಲಿ ವ್ಯಾಪಾರ ಮಾಡಬಹುದು ಎಂದು ಆಲೋಚಿಸಿದರೆ ವಿದೇಶಿ ಕಂಪನಿಗಳನ್ನೇ ಖರೀದಿ ಮಾಡಿ ಭಾರತಕ್ಕೆ ತರುವ ಕೆಲಸಕೈಗೊಂಡರು. ಅವರು ಅಭಿವೃದ್ಧಿಪಡಿಸಿದ ಟಾಟಾ ಇಂಡಿಕಾ, ಟಾಟಾ ನ್ಯಾನೋ ಕಾರುಗಳೇ ಇದಕ್ಕೆ ಸಾಕ್ಷಿ. ೧೯೯೧ರಲ್ಲಿ ಮೋಟಾರು ವಾಹನ ತಯಾರಿಕೆಗೆ ಬಂದ ಅವರು ಎಂದೂ ತಿರುಗಿ ನೋಡಲಿಲ್ಲ. ಉದ್ಯಮದಲ್ಲಿ ಬಂದ ಲಾಭವನ್ನು ಹೇಗೆ ಸಮಾಜದ ಒಳಿತಿಗೆ ಬಳಸಬೇಕೆಂಬುದನ್ನು ಸಮಾಜಕ್ಕೆ ತೋರಿಸಿ ಹೋಗಿದ್ದಾರೆ.
ಟಾಟಾ ಕುಟುಂಬ ಎಂದೂ ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿರಲಿಲ್ಲ. ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಮಿಸ್ತ್ರಿ ಅವರನ್ನು ವಜಾಗೊಳಿಸಿದಾಗ ಸಾರ್ವಜನಿಕ ಟೀಕೆಗೆ ಒಳಗಾಗಿದ್ದು ನಿಜ. ಆದರೆ ಸುಪ್ರೀಂ ಕೋರ್ಟ್ ಎಲ್ಲ ವಿವಾದಗಳಿಗೂ ಮಂಗಳ ಹಾಡಿತು. ಅದಾದ ಮೇಲೆ ಟಾಟಾ ಕುಟುಂಬದ ಹೆಸರು ದೇಣಿಗೆ ಕೊಡುವುದರಲ್ಲಿ ಮಾತ್ರ ಕೇಳಿ ಬಂದಿದೆ. ಇಡೀ ಜಗತ್ತಿಗೆ ಆದರ್ಶ ಸಂಸ್ಥೆಯಾಗಿ ನಿಂತಿದೆ. ರತನ್ ಟಾಟಾ ಮೊದಲಿನಿಂದ ಅಧಿಕಾರ ಮತ್ತು ಹಣಕ್ಕೆ ಬೆಲೆ ಕೊಟ್ಟವರಲ್ಲ. ದುಡಿಮೆಗೆ ಮಹತ್ವ ಕೊಟ್ಟಿದ್ದರಿಂದ ಅತ್ಯಂತ ಕಿರಿಯ ಯುವಕ-ಯುವತಿಯರು ರತನ್ ಟಾಟಾ ಜತೆ ಇರಲು ಸದಾ ಬಯಸುತ್ತಿದ್ದರು.
ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಗೆ ಎಂದರೇನು ಎಂದು ಯಾರಾದರೂ ಕೇಳಿದರೆ ಟಾಟಾ ಕಂಪನಿಯನ್ನು ಧಾರಾಳವಾಗಿ ತೋರಿಸಬಹುದು. ಇದರಿಂದಲೇ ವಿದೇಶದಲ್ಲೂ ಟಾಟಾ ಕಂಪನಿಗೆ ಗೌರವ ಲಭಿಸಿದೆ. ಸಾಮಾನ್ಯವಾಗಿ ಉದ್ಯಮಿಗಳು ಎಂದರೆ ರಾಜಕಾರಣಿಗಳನ್ನು ಓಲೈಸುತ್ತಾರೆ ಎಂಬ ಭಾವನೆ ಇದ್ದೇ ಇರುತ್ತದೆ. ರತನ್ ಟಾಟಾ ಇದಕ್ಕೆ ಅಪವಾದ. ಮದುವೆ ಆಗಿರಲಿಲ್ಲ ಅದರಿಂದ ಅವರಿಗೆ ಅದರ ಚಿಂತನೆ ಇರಲಿಲ್ಲ. ೪ ಬಾರಿ ಮದುವೆಯಾಗಲು ಬಯಸಿ ಕೊನೆಗೆ ಆಲೋಚನೆಯನ್ನೂ ಕೈಬಿಟ್ಟವರು. ಹೀಗಾಗಿ ಕೊನೆಯವರೆಗೂ ಉದ್ಯಮ ಬಗ್ಗೆ ಚಿಂತಿಸಲು ಸಾಧ್ಯವಾಯಿತು.
ಉದ್ಯಮ ಮತ್ತು ದೇಶಪ್ರೇಮದಲ್ಲಿ ಯಾವುದು ನಿಮ್ಮ ಆಯ್ಕೆ ಎಂದಿದ್ದರೆ ರತನ್ ಟಾಟಾ ದೇಶಪ್ರೇಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಒಂದು ರೀತಿಯಲ್ಲಿ ಇವರು `ಶಕಪುರುಷ’. ನಮ್ಮ ದೇಶ ಇಂಥ ವ್ಯಕ್ತಿಯನ್ನು ಮತ್ತೆ ಕಾಣುವುದು ಕಷ್ಟ. ಇಂಥವರು ಭುವನದ ಭಾಗ್ಯದಿಂದ ಮಾತ್ರ ಬರುತ್ತಾರೆ. ಮುಂದಿನ ಜನಾಂಗಕ್ಕೆ ರತನ್ ಟಾಟಾ ಎಂಬ ಮಹಾನುಭಾವ ಇದ್ದ ಎಂದು ಹೇಳಿದರೆ ಜನ ನಂಬುವುದು ಕಷ್ಟ. ಮುಂಬೈನಲ್ಲಿ ಹುಟ್ಟಿ ಬೆಳೆದ ಅವರು ಇಡೀ ಜಗತ್ತು ತನ್ನ ಕಡೆ ತಿರುಗಿ ನೋಡುವಂತೆ ಮಾಡಿದರು. ಉದ್ಯಮದಿಂದ ನಾನು ಎಷ್ಟು ಸಂಪಾದಿಸಿದೆ ಎಂಬುದನ್ನು ಲೆಕ್ಕ ಹಾಕಬೇಡ. ಸಮಾಜಕ್ಕೆ ಎಷ್ಟು ಕೊಟ್ಟೆ ಎಂಬುದನ್ನು ಹೇಳು ಎಂದು ಅವರು ಹೇಳುತ್ತಿದ್ದರೆ ಅದರಲ್ಲಿ ಸತ್ಯಾಂಶ ಇರುತ್ತಿತ್ತು. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರು ಇಡೀ ಜನಮಾನಸದಲ್ಲಿ ಇದ್ದೇ ಇರುತ್ತಾರೆ ಎಂದು ಹೇಳುವ ಅಗತ್ಯವಿಲ್ಲ. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವ ಸಂಶೋಧನೆ ನಡೆಯಲು ಅವರ ಕೊಡುಗೆ ಮಹತ್ವ ಪೂರ್ಣ. ತುಂಬಿನ ಕೊಡ ತುಳುಕುವುದಿಲ್ಲ. ಅದೇರೀತಿ ರತನ್ ಟಾಟಾ ತುಂಬು ಜೀವನ ನಡೆಸಿ ಸಂತೃಪ್ತಿಯಿಂದ ಇಹಲೋಕ ತ್ಯಜಿಸಿದರು ಎಂಬುದು ಸಮಾಧಾನದ ಸಂಗತಿ.

Next Article