For the best experience, open
https://m.samyuktakarnataka.in
on your mobile browser.

ರಥಸಪ್ತಮಿ - ಸೂರ್ಯ ದೇವನಿಗೆ ನಮಿಸೋಣ

01:30 AM Feb 16, 2024 IST | Samyukta Karnataka
ರಥಸಪ್ತಮಿ   ಸೂರ್ಯ ದೇವನಿಗೆ ನಮಿಸೋಣ

ಸೂರ್ಯ ದೇವನೇ ಈ ಆಚರಣೆಯ ಕೇಂದ್ರಬಿಂದು. ಸೂರ್ಯ ಸಕಲ ಜೀವಕೋಟಿಗೆ ಅಧಿಪತಿ. ಸೂರ್ಯನಿಲ್ಲದೆ ಬದುಕಿಲ್ಲ. ಸೂರ್ಯನೇ ಇಡೀ ಬ್ರಹ್ಮಾಂಡದ ಕೇಂದ್ರ. ಬೆಳಕನ್ನು ನೀಡುವ ಸೂರ್ಯದೇವ ಪ್ರತಿ ಜೀವಿಯ ಮನದೊಳಗಿನ ಅಂಧಕಾರವನ್ನು ದೂರ ಮಾಡಿ, ಜ್ಞಾನದ ಬೆಳಕನ್ನು ಬೆಳಗಿಸಿ ಸುಜ್ಞಾನದ ಹಾದಿಯನ್ನು ತುಳಿಯುವಂತೆ ಮಾಡುತ್ತಾನೆ ಎನ್ನುವುದು ಪ್ರತೀತಿ. ದೇಹ ಮತ್ತು ಮನಸ್ಸುಗಳ ಆರೋಗ್ಯವನ್ನು ವೃದ್ಧಿಸುವುದು ರಥಸಪ್ತಮಿಯ ಉದ್ದೇಶವಾಗಿದೆ.
ಸೂರ್ಯನನ್ನು ಉತ್ತಮ ಬದುಕಿಗಾಗಿ, ಆರೋಗ್ಯಕ್ಕಾಗಿ ಪ್ರಾರ್ಥಿಸುವ ಸಲುವಾಗಿ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಸಮುದ್ರ ಸ್ನಾನವನ್ನು ಮಾಡಲಾಗುತ್ತದೆ. ನವಗ್ರಹದಲ್ಲಿ ಸೂರ್ಯನೇ ಅಗ್ರಗಣ್ಯ, ಅವನೇ ಅಧಿಪತಿ. ನಮ್ಮ ಸೌರವ್ಯೂಹದಲ್ಲಿಯೂ ಸೂರ್ಯನ ಸುತ್ತ ಉಳಿದ ಗ್ರಹಗಳು, ಉಪಗ್ರಹಗಳು ಸುತ್ತುತ್ತದೆ. ಹಾಗಾಗಿ ಸೂರ್ಯನೇ ಈ ಭೂಮಂಡಲದ ಅಧಿಪತಿ. ರಥಸಪ್ತಮಿಯ ದಿನ ಸೂರ್ಯೋದಯದ ಸಮಯದಲ್ಲಿ ಸಮುದ್ರ ಸ್ನಾನ ಅತ್ಯಂತ ಪವಿತ್ರವಾದುದು. ಹಾಗಾಗಿ ನಮ್ಮ ಸಕಲ ಕಷ್ಟಗಳನ್ನು ಪರಿಹರಿಸಲು ಸಮುದ್ರ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ವಾಡಿಕೆ.

ಪವಿತ್ರ ಸ್ನಾನ
ಸೂರ್ಯನಿಗೆ ಎಕ್ಕದ ಎಲೆ ಅತ್ಯಂತ ಪ್ರಿಯವಾದುದು. ಹಾಗಾಗಿ ರಥಸಪ್ತಮಿಯ ದಿನ ಸಮುದ್ರ ಸ್ನಾನದ ಸಮಯದಲ್ಲಿ ತಲೆಯ ಮೇಲೆ, ತೋಳಿನ ಮೇಲೆ ಏಳು ಎಕ್ಕದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡುವುದು ರೂಢಿಯಿದೆ. ಸಂಖ್ಯೆ ಏಳು ಸೂರ್ಯ ತತ್ತ್ವ, ಸಪ್ತಾಶ್ವ, ಸಪ್ತ ಪ್ರಾಣಗಳ ಸಂಕೇತವೂ ಹೌದು. ಎಕ್ಕದ ಎಲೆ, ಎಲಚಿಯ ಎಲೆ, ಗರಿಕೆ ಹುಲ್ಲು, ಅಕ್ಷತೆಯನ್ನು ಬಳಸಿ ಪೂಜೆಯನ್ನು ಮಾಡಬೇಕು. ಸೂರ್ಯ ಗಾಯತ್ರಿ, ಅರುಣ ಮಂತ್ರ, ಮಹಾ ಸೌರ ಮಂತ್ರಗಳನ್ನು ಪಠಿಸಬೇಕು.

ಹೊಸ ಉಡುಪು
ಯಾವುದೇ ಹಬ್ಬ ಬಂತೆಂದರೂ ಹೆಂಗಳೆಯರಿಗೆ ಎಲ್ಲಿಲ್ಲದ ಖುಷಿ. ಮನೆಯ ಎದುರೊಂದು ದೊಡ್ಡ ಚುಕ್ಕೆ ರಂಗೋಲಿ ಹಾಕಿ ಸಿಹಿ ತಿನಿಸು ಮಾಡಿ ಸಂಭ್ರಮಿಸುವುದು ಎಲ್ಲೆಲ್ಲೂ ಪ್ರತೀತಿ. ರಥಸಪ್ತಮಿಯಂದು ಹೊಸ ಬಟ್ಟೆ ಹಾಕಿದರೆ ಒಂದು ವರ್ಷದೊಳಗೆ ಅಂದರೆ ಮುಂದಿನ ರಥಸಪ್ತಮಿಯ ಒಳಗೆ ಒಟ್ಟು ಏಳು ಜೊತೆ ಹೊಸ ಬಟ್ಟೆ ಬಂದೇ ಬರುತ್ತದೆ ಎನ್ನುವುದು ಮಹಿಳೆಯರ ನಂಬಿಕೆ. ಶುಭ ಸೂಚಕವಾಗಿ ಕೆಲವೊಂದು ಕಡೆಯಲ್ಲಿ ರಥಸಪ್ತಮಿಯ ದಿನ ಹಾಲನ್ನು ಉಕ್ಕಿಸುವ ಪರಿಪಾಠವೂ ಇದೆ.

ವೈಜ್ಞಾನಿಕ ಕಾರಣ
ಸೂರ್ಯನ ಎಳೆ ಬಿಸಿಲನ್ನು ಮೈಗೆ ತಾಗಿಸಿ ಕೊಂಡರೆ ದೇಹಕ್ಕೆ ಬೇಕಾದ ಶಕ್ತಿ, ಆರೋಗ್ಯದ ಜೊತೆ ಜೊತೆ ಚೈತನ್ಯವೂ ಹೆಚ್ಚುತ್ತದೆ. ಮನುಷ್ಯನ ದೇಹಕ್ಕೆ `ವಿಟಮಿನ್ ಡಿ' ಯ ಅಗತ್ಯತೆಯನ್ನು ಅರಿತ ಜನ ರಥಸಪ್ತಮಿಯ ಹೆಸರಿನಲ್ಲಾದರೂ ಸೂರ್ಯನ ಬೆಳಕಿಗೆ ಮೈಯೊಡ್ಡಲಿ ಎನ್ನುವುದು ನಿಜವಾದ ವೈಜ್ಞಾನಿಕ ಕಾರಣವಾಗಿದೆ.

ಸೂರ್ಯ ನಮಸ್ಕಾರ
ಯೋಗ ಮತ್ತು ಯೋಗದಿಂದಾಗುವ ಲಾಭವನ್ನು ಅರಿತ ಜ್ಞಾನಿಗಳು ಸೂರ್ಯ ನಮಸ್ಕಾರವನ್ನು ರಥಸಪ್ತಮಿಯ ದಿನ ಮಾಡುವುದು ಆರೋಗ್ಯಕರ ಎಂದಿದ್ದಾರೆ. ಸೂರ್ಯ ನಮಸ್ಕಾರದ ಮಂತ್ರ ಹಾಗೂ ಆಸನದ ಭಂಗಿಗಳು ದೇಹದಲ್ಲಿ ಅಡಗಿರುವ ಗುಪ್ತ ಸಮಸ್ಯೆಯನ್ನು ಹೊರದಬ್ಬುತ್ತದೆ ಹಾಗೂ ದೇಹಕ್ಕೆ ನವ ಚೈತನ್ಯವನ್ನು ಒದಗಿಸುತ್ತದೆ.
೧೦೮ ಸೂರ್ಯ ನಮಸ್ಕಾರವನ್ನು ಶಾಲಾ, ಕಾಲೇಜು, ಸಂಸ್ಥೆಗಳಲ್ಲಿ ಆಯೋಜಿಸುವ ಮೂಲಕ ಸೂರ್ಯದೇವರಿಗೆ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ. ಸೂರ್ಯ ನಮಸ್ಕಾರ, ಯೋಗ ಪ್ರದರ್ಶನ ಜೊತೆಗೆ ಸತ್ಸಂಗ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.