ರಮೇಶ ಜಾರಕಿಹೊಳಿ ಮಾಲಿಕತ್ವದ ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ದಾಳಿ
ಬೆಳಗಾವಿ: ಮಾಜಿ ಸಚಿವ ಹಾಗೂ ಗೋಕಾಕ ಮತಕ್ಷೇತ್ರದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ಮಾಲಿಕತ್ವದ ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿದ್ದಾರೆ.
ಜಿಲ್ಲೆಯ ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಬಳಿಯಿರುವ ರಮೇಶ ಜಾರಕಿಹೊಳಿ ಮಾಲಿಕತ್ವದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಮೇಲೆ ಅಪರಾಧ ತನಿಖಾ ದಳ(ಸಿಐಡಿ) ಅಧಿಕಾರಿಗಳ ತಂಡದವರು ದಾಳಿ ಮಾಡಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.
ಕಾರ್ಖಾನೆಗಾಗಿ ಸುಮಾರು 439 ಕೋಟಿ ರೂ.ಗಳನ್ನು ಅಪೆಕ್ಸ್ ಬ್ಯಾಂಕ್‌ನಿಂದ ಸಾಲ ಪಡೆದಿದ್ದರೂ ಕೂಡ ಅದನ್ನು ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ರಾಜಣ್ಣ ಮುತ್ತಶೆಟ್ಟಿ ಎಂಬವರು ಕ್ರಿಮಿನಲ್ ದೂರು ದಾಖಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿನ ನಡೆದ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಹೀಗಾಗಿ, ಮಂಗಳವಾರ ಸಿಐಡಿ ಅಧಿಕಾರಿಗಳ ತಂಡದವರು ದಾಳಿ ಮಾಡಿ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.