ರಮ್ಯಾ-ರಾಹುಲ್ ಪ್ರಚಾರಕ್ಕೆ ರೆಡಿ
ಬೆಂಗಳೂರು: ದಿನಕಳೆದಂತೆ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮತಗಳಿಕೆಗೆ ಪ್ರಮಾಣ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಮಾಜಿ ಸಿಎಂ ಸ್ಪರ್ಧೆಯಿಂದ ರಾಜ್ಯದ ಪ್ರತಿಷ್ಠಿತ ಎಂದೇ ಪರಿಗಣಿಸಲ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರ ಜನಾಕರ್ಷಣೆ ಕ್ಷೇತ್ರವಾಗಿದೆ. ಕ್ಷೇತ್ರಕ್ಕೆ ಮತ್ತಷ್ಟು ಚುನಾವಣೆ ರಂಗೇರಿಸಲು ಕೈ ನೇತಾರ ರಾಹುಲ್‌ಗಾಂಧಿ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ಒಟ್ಟಿಗೆ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಸಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಹೊಸಮುಖ, ಉದ್ಯಮಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು)ಕಣಕ್ಕಿಳಿದಿದ್ದರೆ, ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆಯಲ್ಲಿದ್ದಾರೆ. ಮಾಜಿ ಸಿಎಂ ಮಣಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಮಂಡ್ಯಕ್ಕೆ ಮೋಹಕ ತಾರೆ ರಮ್ಯಾ ಹಾಗೂ ರಾಹುಲ್ ಗಾಂಧಿ ಅವರನ್ನು ಕರೆಸಿಕೊಳ್ಳುತ್ತಿದೆ. ಬಹುತೇಕ ಏ. ೧೬ ಅಥವಾ ೧೭ರಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎನ್ನಲಾಗಿದೆ.
ಚಿತ್ರನಟಿ ರಮ್ಯಾ ಮಂಡ್ಯದ ಕೈ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ. ಕೈ ಮುಖಂಡರು ಈಗಾಗಲೇ ನಟಿಯೊಂದಿಗೆ ಮಾತುಕತೆ ನಡೆಸಿದ್ದು ಒಪ್ಪಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಮಂಡ್ಯದಲ್ಲಿ ರಾಹುಲ್‌ಗಾಂಧಿ ಹಾಗೂ ರಮ್ಯಾ ಜೊತೆಯಾಗಿ ರೋಡ್ ಶೋ ನಡೆಸಿದರೆ ಯುವಕರು ಮಾತ್ರವಲ್ಲದೆ ಮಹಿಳೆಯರ ಮತಗಳನ್ನು ಸೆಳೆಯಬಹುದೆಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.
ಮೈತ್ರಿ ಅಭ್ಯರ್ಥಿ ಪರ ನಟಿ ಹಾಗೂ ಸಂಸದೆ ಸುಮಲತಾ ಪ್ರಚಾರಕ್ಕಿಳಿಯವು ಬಗ್ಗೆ ಇನ್ನೂ ಯಾವುದೇ ಖಾತರಿಯಾಗಿಲ್ಲ ಎಂದರು.