ರಸ್ತೆಯಲ್ಲಿ ಜವರಾಯನ ಮಿತಿಮೀರಿದ ಅಟ್ಟಹಾಸ
ಇಪ್ಪತ್ತ ನಾಲ್ಕು ಗಂಟೆಗಳ ಅವಧಿಯಲ್ಲಿ ೫೧ ಜನ ರಸ್ತೆ ಅಪಘಾತಗಳಲ್ಲಿ ದುರ್ಮರಣ ಹೊಂದಿರುವ ಬೆಳವಣಿಗೆ ನಿಜಕ್ಕೂ ರಸ್ತೆ ಸಂಚಾರದ ಸುರಕ್ಷತೆಯ ಸ್ಥಿತಿಯ ಬಗ್ಗೆ ಸರ್ಕಾರ ಕಣ್ತೆರೆದು ನೋಡಬೇಕಾದ ಅನಿವಾರ್ಯತೆ ಬಂದೊದಗಿದೆ. ಒಂದೇ ದಿನದ ಅವಧಿಯಲ್ಲಿ ಇಷ್ಟೊಂದು ಅಪಘಾತಗಳು ಸಂಭವಿಸಲು ಸಂಚಾರ ನಿಯಮಗಳ ಪರಿಪಾಲಿಸುವುದರಲ್ಲಿ ವಾಹನಗಳ ಸವಾರರು ನಿರ್ಲಕ್ಷö್ಯ ತೋರುವುದೇ ಕಾರಣ ಎಂಬ ಮಾತು ನಿಜವಿದ್ದರೂ ಕೂಡಾ ರಸ್ತೆಗಳು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಅರಿಯುವುದು ಕೂಡಾ ಮುಖ್ಯವೇ. ಏಕೆಂದರೆ, ಬೆಂಗಳೂರು ನಗರದ ರಸ್ತೆಗಳನ್ನೇ ಉದಾಹರಿಸಿ ಹೇಳುವುದಾದರೆ ಬಹುತೇಕ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆ ದುರಸ್ತಿ ಕಾರ್ಯಕ್ಕೆ ಮಳೆಯ ಕಾರಣ ಒಡ್ಡುವುದು ಒಂದು ರೀತಿಯಲ್ಲಿ ಮಾಮೂಲಿನ ಸಂಗತಿ. ಯಾವುದೇ ಕಾಲದಲ್ಲಿ ರಸ್ತೆಗಳ ಬಗ್ಗೆ ಪ್ರಸ್ತಾಪಿಸಿದರೂ ಕೂಡಾ ಮಹಾನಗರ ಪಾಲಿಕೆಯ ಕಡೆಯಿಂದ ಬರುವ ಉತ್ತರ ಮಳೆಯ ಕಾರಣವೇ. ಈ ಮಾತು ನಿಜವೇ ಆಗಿದ್ದರೆ ದೆಹಲಿ, ಮುಂಬೈ, ಹೈದರಾಬಾದ್ ಮೊದಲಾದ ದೊಡ್ಡ ಪಟ್ಟಣಗಳಲ್ಲಿ ಆಗದ ಮಳೆ ಬೆಂಗಳೂರಿನಲ್ಲಿ ಮಾತ್ರವೇ ಆಗುತ್ತಿದೆಯೇ ಎಂಬುದನ್ನೂ ಕೂಡಾ ಅರಿಯುವುದು ಮುಖ್ಯವೇ. ಅದೇನೇ ಇರಲಿ ರಸ್ತೆ ದುರಂತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಹೆಚ್ಚಿನ ನಿಗಾವಹಿಸಿ ಪರಿಸ್ಥಿತಿಯನ್ನು ಸುಧಾರಿಸುವುದು ಈಗಿನ ಅಗತ್ಯ.
ಬೆಂಗಳೂರು ಹಾಗೂ ಮೈಸೂರು ನಡುವಣ ಎಕ್ಸ್ಪ್ರೆಸ್ ಹೆದ್ದಾರಿ ಸಂಚಾರಕ್ಕೆ ಮುಕ್ತವಾದ ನಂತರ ಸಂಭವಿಸಿದ ಅಪಘಾತಗಳ ಸರಮಾಲೆ ಇಡೀ ರಾಜ್ಯವನ್ನೇ ದಿಗ್ಭ್ರಮೆಗೊಳಿಸಿತ್ತು. ಈ ಹೆದ್ದಾರಿ ಸಂರಚನೆ ವೈಜ್ಞಾನಿಕವಾಗಿ ಇಲ್ಲವೆಂಬ ಮಾತುಗಳೂ ಕೂಡಾ ಕೇಳಿಬಂದಿದ್ದವು. ಇದರ ಜೊತೆಗೆ ಮಳೆ ಬಂದಾಗ ಹೊಳೆಯಂತೆ ರಸ್ತೆಯ ಮೇಲೆ ನೀರು ಹರಿದು ವಾಹನ ಸಂಚಾರ ಕಷ್ಟವಾದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿದ್ದೂ ಉಂಟು. ಇದೇ ಹೊತ್ತಿನಲ್ಲಿ ಹೊಸ ರಸ್ತೆಯಲ್ಲಿ ವಾಹನ ಸವಾರರು ಉತ್ಸಾಹದಿಂದ ಮಿತಿ ಮೀರಿದ ವೇಗದಲ್ಲಿ ಸಂಚರಿಸಿದ ಪರಿಣಾಮ ಹಿಡಿತಕ್ಕೆ ಸಿಗದೇ ಹೋದ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸಿದ್ದನ್ನು ನಿರಾಕರಿಸುವಂತಿಲ್ಲ. ಇದನ್ನು ಗಮನಿಸಿದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಥಳ ಪರಿಶೀಲನೆ ಮಾಡಿ ಪರಿಸ್ಥಿತಿಯ ಸುಧಾರಣೆಗೆ ಕ್ರಮ ಕೈಗೊಂಡರು. ಆದರೆ, ಕರ್ನಾಟಕದ ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಮೇಲೆ ಶಿಸ್ತು ಕ್ರಮ ಜರುಗಿಸಲು ಆರಂಭಿಸಿದ ಮೇಲೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇದರ ಜೊತೆಗೆ ಹೆದ್ದಾರಿಯಲ್ಲಿ ವೇಗದ ಮೇಲೆ ನಿರ್ಬಂಧವನ್ನು ಹೇರಿದ್ದು ಪರಿಸ್ಥಿತಿ ಸುಧಾರಣೆಗೆ ಕಾರಣವಾಯಿತು. ಈಗಲೂ ಕೂಡಾ ಪೊಲೀಸರು ಹೆದ್ದಾರಿಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಕಟ್ಟೆಚ್ಚರದ ಕಣ್ಗಾವಲು ಹಾಕಿ ವಾಹನ ಸಂಚಾರದ ಮೇಲೆ ನಿಗಾ ವಹಿಸಬೇಕು.
ಇದಕ್ಕೆ ಸಮಾನಾಂತರವಾಗಿ ರಸ್ತೆಗಳು ಸಂಚಾರ ಯೋಗ್ಯಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಸರ್ಕಾರದ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿ. ಚುನಾವಣೆ ಇರಲಿ ಅಥವಾ ಅಧಿವೇಶನವೇ ಇರಲಿ ಯೋಗ್ಯ ರಸ್ತೆಗಳು ಯೋಗ್ಯವಾಗಿಯೇ ಇರುವಂತೆ ನೋಡಿಕೊಳ್ಳುವುದು ಲೋಕೋಪಯೋಗಿ ಇಲಾಖೆಯ ಮೊದಲ ಆದ್ಯತೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹಲವಾರು ಜಿಲ್ಲೆಗಳ ಮುಖ್ಯ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆಗಾಲ ಆರಂಭವಾಗಲಿರುವ ಸಂದರ್ಭದಲ್ಲಿ ತುರ್ತು ದುರಸ್ತಿ ಕೈಗೊಳ್ಳುವುದರಿಂದ ತಾತ್ಕಾಲಿಕವಾಗಿ ಪರಿಸ್ಥಿತಿ ಸುಧಾರಿಸಬಹುದೇ ವಿನಃ ಶಾಶ್ವತವಾಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯಕ್ಕೆ ಅನ್ವಯವಾಗುವ ರೀತಿಯಲ್ಲಿ ರಸ್ತೆ ಸುಧಾರಣೆಗೆ ಕಾರ್ಯಸೂಚಿಯೊಂದನ್ನು ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿ ಅದನ್ನು ಹಂತಹಂತವಾಗಿ ಜಾರಿಗೊಳಿಸುವ ಪ್ರಕ್ರಿಯೆ ಆರಂಭಿಸುವುದು ದೂರದೃಷ್ಟಿಯ ಕ್ರಮವಾಗುತ್ತದೆ.
ಮದ್ಯ ಸೇವಿಸಿ ವಾಹನ ಓಡಿಸುವವರ ವಿರುದ್ಧ ತೀವ್ರ ಸ್ವರೂಪದ ಶಿಸ್ತುಕ್ರಮ ಕೈಗೊಳ್ಳುವುದು ಅತ್ಯಗತ್ಯ. ಮೂರು ಬಾರಿ ಈ ಶಿಸ್ತನ್ನು ಉಲ್ಲಂಘಿಸಿದವರಿಗೆ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಲೂ ಕೂಡಾ ಸರ್ಕಾರ ಹಿಂಜರಿಯಬಾರದು. ರಸ್ತೆಗಳಲ್ಲಿ ಮದ್ಯ ವ್ಯಾಪಾರಕ್ಕೆ ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿತ್ತು. ಆದರೆ, ಕಾನೂನೆಂಬ ರಂಗೋಲಿಯ ಕೆಳಗೆ ನುಸುಳುವ ಕಲೆಯನ್ನು ಅರಿತಿರುವ ಪಟ್ಟಭದ್ರರು ಈಗ ರಸ್ತೆಯ ಸುತ್ತಮುತ್ತ ಮದ್ಯದಂಗಡಿಗಳನ್ನು ಆರಂಭಿಸಿರುವುದು ವಾಹನ ಸಂಚಾರದ ಸುರಕ್ಷತೆಗೆ ದೊಡ್ಡ ಎಚ್ಚರಿಕೆಯ ಗಂಟೆ. ರಸ್ತೆಗಳ ಗುಣಮಟ್ಟ ಆ ಪ್ರದೇಶದ ಜನರ ಬದುಕಿನ ಗುಣಮಟ್ಟದ ದಿಕ್ಸೂಚಿ ಎಂಬ ಮಾತಿದೆ. ರಾಜಕೀಯ ಮುಖಂಡರ ಗುಣಮಟ್ಟ ಪ್ರತಿನಿಧಿಸುವ ರೀತಿಯಲ್ಲಿ ಆ ಪ್ರದೇಶದ ರಸ್ತೆಗಳ ಗುಣಮಟ್ಟವೂ ಇರುತ್ತದೆ ಎಂಬ ಮಾತಿನಲ್ಲಿ ಟೀಕೆಯೂ ಇದೆ ಮೆಚ್ಚುಗೆಯೂ ಇದೆ.