ರಾಜಕಾರಣಕ್ಕೆ ಯುವಕರು ಬರಬೇಕು: ಮೋದಿ ಕರೆ
ನವದೆಹಲಿ: ದೇಶದ ಹೆಚ್ಚಾನು ಹೆಚ್ಚು ಯುವಕರು ರಾಜಕೀಯಕ್ಕೆ ಬರಬೇಕು. ನಿಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸಲು ರಾಜಕೀಯ ಅತ್ಯುತ್ತಮ ಮಾಧ್ಯಮವಾಗಬಲ್ಲದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ ಯುವ ನಾಯಕರ ಸಂವಾದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ, ೩೦ ಲಕ್ಷಕ್ಕೂ ಹೆಚ್ಚು ಭಾಗವಹಿಸುವವರ ಅರ್ಹತೆಯ ಆಧಾರದ ಮೇಲೆ ಬಹು-ಪದರದ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ೩೦೦ ಯುವ ನಾಯಕರೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಿದರು.
ಮಹಿಳಾ ಸಬಲೀಕರಣ, ಕ್ರೀಡೆ, ಸಂಸ್ಕೃತಿ, ಸ್ಟಾರ್ಟ್ಅಪ್‌ಗಳು, ಮೂಲಸೌಕರ್ಯ ಮುಂತಾದ ವಿಷಯಗಳ ಕುರಿತ ಕೆಲ ಸ್ಫೂರ್ತಿದಾಯಕ ವಿಚಾರಗಳನ್ನು ಅಲ್ಲಿನ ಯುವ ನಾಯಕರಿಂದ ಕೇಳಿದ ಪ್ರಧಾನಿ ಮೋದಿ, ಕೇವಲ ಮಾತಿನಿಂದ ಅಭಿವೃದ್ಧಿ ಹೊಂದುವುದು ಸಾಧ್ಯವಾಗದು. ನಮ್ಮ ಮುಂದೆ ೨೫ ವರ್ಷಗಳ ಸುವರ್ಣ ಸಮಯವಿದೆ. ಆತ್ಮವಿಶ್ವಾಸವುಳ್ಳ ಯುವಕರು ಮಾತ್ರ ಅಭಿವೃದ್ಧ ಭಾರತದ ಕನಸನ್ನು ಸಾಕಾರಗೊಳಿಸುತ್ತಾರೆ ಎಂದು ಹೇಳಿದರು.ಸ್ವಾಮಿ ವಿವೇಕಾನಂದರನ್ನು ಸ್ಮರಿಸಿ, ಈ ದೇಶದ ಯುವಕರ ಮೇಲೆ ಸ್ವಾಮೀಜಿಗೆ ಅಪಾರದ ನಂಬಿಕೆ ಇತ್ತು. ನನಗೆ ಯುವ ಜನಾಂಗದ ಮೇಲೆ ವಿಶ್ವಾಸ ಇದೆ. ನನ್ನ ಕಾರ್ಯಕರ್ತರು ಯುವ ಪೀಳಿಗೆಯ ಮಧ್ಯದಿಂದ ಬರುತ್ತಾರೆ ಹಾಗೂ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಸ್ವಾಮೀಜಿ ಹೇಳುತ್ತಿದ್ದರು ಎಂದು ನರೆದಿದ್ದ ಯುವಜನರಿಗೆ ಮೋದಿ ಹೇಳಿದರು.
ಆರ್ಥಿಕವಾಗಿ, ಕಾರ್ಯತಂತ್ರವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತ ಬಲಿಷ್ಠವಾದರೆ ಅದೇ ಅಭಿವೃದ್ಧಿ ಹೊಂದಿದೆ ದೇಶ. ಈ ಅಭಿವೃದ್ಧಿ ಹೊಂದಿದ ದೇಶದಲ್ಲಿ ಗಳಿಸಲು ಮತ್ತು ಕಲಿಯಲು ಸಾಕಷ್ಟು ಅವಕಾಶಗಳಿರುತ್ತವೆ ಎಂದು ಹೇಳಿದರು.