For the best experience, open
https://m.samyuktakarnataka.in
on your mobile browser.

ರಾಜಕಾರಣದಲ್ಲಿ ವಯಸ್ಸಿನ ನಿರ್ಬಂಧದ ಜಿಜ್ಞಾಸೆ

02:00 AM May 15, 2024 IST | Samyukta Karnataka
ರಾಜಕಾರಣದಲ್ಲಿ ವಯಸ್ಸಿನ ನಿರ್ಬಂಧದ ಜಿಜ್ಞಾಸೆ

ರಾಜಕಾರಣದ ಪ್ರವೇಶ ಹಾಗೂ ನಿರ್ಗಮನಕ್ಕೆ ವಯಸ್ಸಿನ ನಿರ್ಬಂಧ ಇರಬೇಕೆ ಎಂಬ ಪ್ರಶ್ನೆ ಈಗಿನದಲ್ಲ. ಸ್ವಾತಂತ್ರ್ಯಾನಂತರ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಕಾಲದಿಂದಲೂ ಮಾರ್ದನಿಗೊಳ್ಳುತ್ತಿರುವ ಈ ಪ್ರಶ್ನೆಯ ಉತ್ತರ ಅಲ್ಪಾಯು. ಶಾಶ್ವತ ಉತ್ತರ ಇದಕ್ಕೆ ಇದುವರೆಗೆ ಸಿಕ್ಕಿಲ್ಲ. ಲೋಕಸಭಾ ಚುನಾವಣೆಯ ನಡುವೆ ಈ ಪ್ರಶ್ನೆ ಮತ್ತೆ ಭುಗಿಲೇಳಲು ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ೭೫ ವರ್ಷ ತುಂಬುತ್ತಿರುವ ಬೆಳವಣಿಗೆ. ಭಾರತೀಯ ಜನತಾ ಪಕ್ಷ ರೂಪಿಸಿಕೊಂಡಿರುವ ನಿಯಮದ ಪ್ರಕಾರ ೭೫ ವರ್ಷ ಪೂರೈಸಿದವರು ಪಕ್ಷದಲ್ಲಿ ಸಕ್ರಿಯ ಚಟುವಟಿಕೆಯಿಂದ ನಿವೃತ್ತರಾಗಬೇಕು. ಇದರ ಅಂಗವಾಗಿ ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಮಾಜಿ ಸಚಿವರಾದ ಡಾ. ಮುರುಳಿಮನೋಹರ ಜೋಶಿ, ಯಶವಂತ ಸಿನ್ಹಾ ಮೊದಲಾದವರು ಸಕ್ರಿಯ ರಾಜಕಾರಣದಿಂದ ದೂರ ಉಳಿದು ಮಾರ್ಗದರ್ಶಕ ಮಂಡಳಿಯ ಸದಸ್ಯರಾಗಿರುವರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ವಯೋಮಿತಿಯ ನಿರ್ಬಂಧದ ಹಿನ್ನೆಲೆಯಲ್ಲಿ ಸಕ್ರಿಯ ರಾಜಕಾರಣದಿಂದ ದೂರವಿದ್ದರೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವುದು ಪರಿಸ್ಥಿತಿಯ ಅನಿವಾರ್ಯತೆಯೋ ಇಲ್ಲವೇ ಯಡಿಯೂರಪ್ಪನವರಿಗಿರುವ ಗುರುತ್ವಾಕರ್ಷಣ ಶಕ್ತಿಯೋ ತಿಳಿಯುತ್ತಿಲ್ಲ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ. ನರೇಂದ್ರ ಮೋದಿ ಅವರು ನಾಯಕತ್ವದಲ್ಲಿ ಮುಂದುವರಿಯುವುದಿಲ್ಲ ಎಂಬ ಸಿಡಿಮದ್ದು ಮೊದಲ ಬಾರಿಗೆ ಸಿಡಿಸಿರುವುದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್. ಇದಕ್ಕೆ ಪ್ರತಿಕ್ರಿಯೆಯಾಗಿ ಹಲವಾರು ಮಂದಿ ಮುಖಂಡರ ನಿಲುವಿನ ಆಧಾರದ ಮೇರೆಗೆ ಮೋದಿ ಅವರು ರಾಜಕಾರಣದಲ್ಲಿ ಮುಂದುವರಿಯಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಯಾವುದೇ ರೀತಿಯ ಖಚಿತ ಅಭಿಪ್ರಾಯ ಹೊರಬಿದ್ದಿಲ್ಲ. ಒಂದು ರೀತಿಯಲ್ಲಿ ಅಡ್ಡಗೋಡೆ ಮೇಲೆ ದೀಪ ಇಡುವ ನಿಲುವಿನ ಪರಿಣಾಮವಾಗಿ ಈಗ ನಾಯಕತ್ವದ ವಿವಾದ ಜಿಜ್ಞಾಸೆಗೆ ತಿರುಗಿದೆ.
ನೆಹರೂ ಅವರು ಮೂರನೆಯ ಬಾರಿಗೆ ಪ್ರಧಾನಿಯಾದಾಗ ಕರ್ನಾಟಕದ ಸುಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರು `ಇಲ್ಲ - ನೆಹರೂ ನಿವೃತ್ತರಾಗುವುದಿಲ್ಲ' ಎಂಬ ಕವನದಲ್ಲಿ ರಾಜಕಾರಣದಲ್ಲಿ ವಯಸ್ಸು ಮುಖ್ಯವಲ್ಲ. ಅಧಿಕಾರಕ್ಕೆ ಬಂದ ನಂತರ ವಯಸ್ಸಾಗುವುದು ನಿಂತೇ ಹೋಗುತ್ತದೆ ಎನ್ನುವ ಅರ್ಥದಲ್ಲಿ ಲೇವಡಿ ಮಾಡಿ ಬರೆದದ್ದು ಆಗಿನ ಕಾಲದ ಸಾರ್ವಜನಿಕ ಚರ್ಚೆಗೆ ಕಾರಣವಾಗಿತ್ತು. ಈಗಲೂ ಕೂಡಾ ನರೇಂದ್ರ ಮೋದಿ ಅವರು ಮೂರನೆಯ ಬಾರಿಗೆ ಪ್ರಧಾನಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇದೇ ರೀತಿಯ ವಿವಾದ ಸಾರ್ವಜನಿಕ ವಲಯದಲ್ಲಿ ಮತ್ತೆ ತಲೆ ಎತ್ತಿದೆ. ಬಿಜೆಪಿ ಮುಖಂಡರು ಹೇಳುವ ಪ್ರಕಾರ, ೭೫ ವರ್ಷಕ್ಕೆ ಬಿಜೆಪಿಯಲ್ಲಿ ಮುಖಂಡರು ನಿವೃತ್ತರಾಗಬೇಕು ಎಂಬ ನಿಯಮ ಒಂದು ಮಾರ್ಗದರ್ಶಿ ಸೂತ್ರವಷ್ಟೆ. ಅದೇನೂ ಕಡ್ಡಾಯ ಕಾರ್ಯಸೂಚಿಯಲ್ಲ ಎಂಬುದು. ಅಂದರೆ ಈ ನಿಯಮ ಜಾರಿಯಾಗುವುದು ಮುಖ ನೋಡಿ ಮಣೆ ಹಾಕುವ ಸೂತ್ರದ ಮೇರೆಗೆ. ಮೋದಿ ಅವರು ನಿವೃತ್ತರಾದರೆ ಪಕ್ಷದ ಮತ್ತು ದೇಶದ ಗತಿ ಏನು ಎಂದು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುವವರು ಇದ್ದಾರೆ. ಅಷ್ಟೇ ಗಟ್ಟಿ ಧ್ವನಿಯಲ್ಲಿ ಸುಮಾರು ೧೫೦ ಕೋಟಿ ಭಾರತೀಯರ ಪೈಕಿ ನಾಯಕತ್ವ ವಹಿಸುವ ಅರ್ಹತೆ ಮತ್ತು ಸಾಮರ್ಥ್ಯ ಇರುವವರು ಸಾಕಷ್ಟು ಮಂದಿ ಇದ್ದಾರೆ. ಅದರ ಬಗ್ಗೆ ಕಳವಳ ಬೇಡ ಎಂಬ ಮಾತುಗಳು ಕೂಡಾ ಇನ್ನೊಂದು ಮೂಲೆಯಿಂದ ಕೇಳಿಬರುತ್ತಿದೆ. ಅದೇನೇ ಇರಲಿ. ರಾಜಕಾರಣದಲ್ಲಿ ಚಲಾವಣೆಯಲ್ಲಿರುವ ನಾಣ್ಯಗಳಿಗಷ್ಟೇ ಬೆಲೆ. ಸವಕಲಾದರೆ ಅಥವಾ ಸವಕಳಿಯಾಗುತ್ತಿರುವವರಿಗೆ ಯಾವತ್ತಿಗೂ ಮಾನ್ಯತೆ ಇಲ್ಲ. ಸವಕಳಿಯಾಗುತ್ತಿರುವ ನಾಯಕರನ್ನು ಆರಾಧಿಸುವುದು ಬೇರೆ. ನಾಯಕತ್ವದ ಪಟ್ಟ ಕಟ್ಟಿ ಪಕ್ಷದ ಸಾರಥ್ಯ ಕೊಡುವುದು ಬೇರೆ ಎಂಬ ಮಾತಿನಲ್ಲಿ ವಾಸ್ತವತೆಯ ಅರ್ಥವಿದೆ.
ರಾಜಕಾರಣವೆಂಬುದು ಹಾಗೆ ನೋಡಿದರೆ ವೃತ್ತಿಯಲ್ಲ. ಆದರೆ, ಭಾರತದ ಸಂದರ್ಭದಲ್ಲಿ ವೃತ್ತಿಯಾಗಿ ರೂಪಾಂತರಗೊಂಡಿದೆ ಅಷ್ಟೆ. ವಿದೇಶಗಳಲ್ಲಿ ಈಗಲೂ ಕೂಡಾ ಇದೊಂದು ಪ್ರವೃತ್ತಿ. ಬ್ರಿಟನ್, ಅಮೆರಿಕ, ಫ್ರಾನ್ಸ್, ಜರ್ಮನಿ ಮೊದಲಾದ ದೇಶಗಳಲ್ಲಿ ಅಧ್ಯಕ್ಷ ಹಾಗೂ ಪ್ರಧಾನಿ ಸ್ಥಾನದ ಅವಧಿ ಮುಗಿದ ಮೇಲೆ ತಮ್ಮ ತಮ್ಮ ವೃತ್ತಿಯಲ್ಲಿ ನಿರತರಾಗಿರುವವರ ಸಂಖ್ಯೆ ಸಾಕಷ್ಟು ಮಂದಿ. ಎಷ್ಟಾದರೂ ರಾಜಕಾರಣಕ್ಕೆ ಬೇಕಾದದ್ದು ಸೇವಾ ಮನೋಧರ್ಮ. ಲೋಕ ನಿಷ್ಠೆಯೊಂದಿಗೆ ಲೋಕಾನುಭವದ ಮೂಲಕ ಲೋಕದೃಷ್ಟಿ ಪಡೆದುಕೊಂಡವರು ರಾಜಕಾರಣದಲ್ಲಿ ಯಾವತ್ತಿಗೂ ಸಂಗತರಾಗುತ್ತಾರೆ. ಈ ಅರ್ಹತೆ ಇಲ್ಲದವರು ನಿವೃತ್ತಿಯಾಗಲಿ ಅಥವಾ ಸಕ್ರಿಯರಾಗಲೀ ಅಸಂಗತ ಸ್ಥಿತಿಯಲ್ಲಿಯೇ ಕಾಲ ಹಾಕುತ್ತಾರೆ. ಇದು ಕಾಲಧರ್ಮ. ನರೇಂದ್ರ ಮೋದಿ ಅವರ ನಾಯಕತ್ವದ ಸ್ಥಿತಿ ಕೂಡಾ ಅಷ್ಟೆ. ಈಗಿನ ಸಾರ್ವಜನಿಕ ಬದುಕಿನಲ್ಲಿ ನರೇಂದ್ರ ಮೋದಿ ಅವರು ಇಡೀ ಭಾರತದಲ್ಲಿ ಚಲಾವಣೆಯಲ್ಲಿರುವ ನಾಣ್ಯ. ಹೀಗಾಗಿ ನಿವೃತ್ತಿ ವಯಸ್ಸಿನ ನಿರ್ಬಂಧ ಅವರಿಗೆ ಅನ್ವಯವಾಗದು. ಹಾಗೇನಾದರೂ ಮೋದಿ ಅವರು ನಿವೃತ್ತಿ ಕಡೆ ಮನಸ್ಸು ಮಾಡಿದರೆ ಅದು ಬಿಜೆಪಿಗೆ ಆತ್ಮಘಾತುಕವಾಗುವುದಷ್ಟೆ ಅಲ್ಲ - ವರ್ತಮಾನ ರಾಜಕಾರಣದ ಭೂಪಟವನ್ನೇ ಬದಲಾಯಿಸುವ ಎಲ್ಲಾ ಸಾಮರ್ಥ್ಯವೂ ಈ ಬೆಳವಣಿಗೆಗೆ ಇದೆ.