ರಾಜಕಾರಣಿಗಳ ಪತ್ನಿ, ಮಕ್ಕಳು ಚಿನ್ನಿದಾಂಡು ಆಗಬಾರದಲ್ಲವೇ…
ಗ್ರಾಮೀಣ ಭಾಗದ ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ವಜಾಗೊಳಿಸುವುದನ್ನು ಲಘುವಾಗಿ ಪರಿಗಣಿಸುವಂತಿಲ್ಲ… ಸರ್ವೋಚ್ಚ ನ್ಯಾಯಾಲಯ ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಜಲಗಾಂವ ಜಿಲ್ಲೆಯ ವಿಚ್ಕೇಡಾ ಗ್ರಾಮದ ಮಹಿಳಾ ಸರಪಂಚ್ ಪದಚ್ಯುತಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಐತಿಹಾಸಿಕ ಅಭಿಪ್ರಾಯವನ್ನು ನೀಡಿತು.
ದೇಶದ ಬಹುತೇಕ ಕಡೆ ಮಹಿಳಾ ಮುಖ್ಯಸ್ಥರೊಬ್ಬರು ತಮ್ಮ ಪರ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಅವರ ನಿರ್ದೇಶನವನ್ನು ತಾವು ಪಾಲಿಸಬೇಕು ಎಂಬುದು ಪುರುಷ ಪ್ರತಿನಿಧಿಗಳು ಇನ್ನೂ ಒಪ್ಪಿಕೊಳ್ಳಲಾಗದ ಮನಸ್ಥಿತಿ ಇದೆ.
ಮಹಿಳಾ ಮೀಸಲಾತಿ ಜಾರಿಯಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಸರಿಸುಮಾರು ಮೂವತ್ತು ವರ್ಷಗಳು ಆಯ್ತು. ಆದಾಗ್ಯೂ ಮಹಾನಗರ ಪಾಲಿಕೆ ಮಹಾಪೌರರದಿಂದ ಹಿಡಿದು ಗ್ರಾಮ ಪಂಚಾಯ್ತಿ ಅಧ್ಯಕ್ಷರವರೆಗಿನ ಸ್ಥಾನ ಮಹಿಳೆಯರಿಗೆ ಮೀಸಲು ಎಂಬ ಆದೇಶ ಬಂತೋ, ತಕ್ಷಣ ಮೂಗು ಮುರಿಯುವವರೇ ಹೆಚ್ಚು.
ಸಹಜವಾಗಿ ಪುರುಷ ಪ್ರತಿನಿಧಿಗಳು ಹಾಗೂ ಪ್ರಾಜ್ಞ ಜನತೆಯೇ ಇನ್ನೂ ಅವರಿಂದ ಏನಾಗುತ್ತೆ' ಎನ್ನುವ ತಾತ್ಸಾರ ಮತ್ತು ಅಸಡ್ಡೆಯ ಅಭಿಪ್ರಾಯವನ್ನು ತಕ್ಷಣ ವ್ಯಕ್ತಪಡಿಸುತ್ತಾರೆ. ಇನ್ನು ಹಲವೆಡೆ ಹೇಗೆ ಅವರನ್ನು ಪದಚ್ಯುತಗೊಳಿಸುವುದು ಎನ್ನುವ ಲೆಕ್ಕಾಚಾರ ಅಂದಿನಿಂದಲೇ ಆರಂಭವಾಗುತ್ತದೆ. ಮಹಾರಾಷ್ಟ್ರದ ಜಲಗಾಂವ ಜಿಲ್ಲೆ ವಿಚ್ಕೇಡಾ ಗ್ರಾಮದ ಮಹಿಳಾ ಸರಪಂಚ್ ಮನೀಷಾ ಘನಪಾಟೀಲ ಅವರನ್ನು ಕಳೆದ ವರ್ಷ ಪದಚ್ಯುತಗೊಳಿಸಲಾಯಿತು. ಭ್ರಷ್ಟಾಚಾರ, ಅಕ್ರಮ ವ್ಯವಹಾರ ಅಥವಾ ಗಂಡ, ಮಾವ, ಮೈದುನ ಹಸ್ತಕ್ಷೇಪ ಇತ್ಯಾದಿ ಯಾವುದೂ ಇದಕ್ಕೆ ಕಾರಣವಾಗಿರಲಿಲ್ಲ. ಮಹಿಳೆಯ ಆದೇಶವನ್ನು ಪುರುಷರಾಗಿ ನಾವ್ಹೇಗೆ ಪಾಲಿಸುವುದು ಎನ್ನುವ ಮನೋಭಾವ, ಹಾಗೆಯೇ ತಾವು ಹೇಳಿದಂತೆ ಸರಪಂಚರು ಆದೇಶಿಸುತ್ತಿಲ್ಲ ಎನ್ನುವುದು ಮೂಲ ಕಾರಣ. ಇದಕ್ಕೆ ಆ ಪಂಚಾಯತಿಯ ಪ್ರತಿನಿಧಿಗಳು ಮತ್ತು ಸ್ಥಳೀಯ ರಾಜಕೀಯ ಮುಖಂಡರು ಹುಡುಕಿದ ಕಾರಣವೇನೆಂದರೆ, ಈ ಸರಪಂಚರ ಅತ್ತೆ ಸರ್ಕಾರಿ ಜಾಗೆಯನ್ನು ಅತಿಕ್ರಮಣ ಮಾಡಿ ಗುಡಿಸಲು ಕಟ್ಟಿಕೊಂಡಿರುವುದು ಮತ್ತು ಅತ್ತೆಯ ಮನೆಯಲ್ಲಿಯೇ ಈ ಸರಪಂಚರು ವಾಸವಾಗಿರುವುದು. ಇದು ಅಕ್ರಮ, ಕಾನೂನು ಬಾಹಿರ ಎನ್ನುವುದು ಮನಿಷಾರ ಪದಚ್ಯುತಿಗೆ ನೀಡಿರುವ ಕಾರಣ. ಸ್ಥಳೀಯ ಜಿಲ್ಲಾಧಿಕಾರಿ, ಸ್ಥಳೀಯ ನ್ಯಾಯಾಲಯ ಈ ಪದಚ್ಯುತಿಯನ್ನು ಸಮರ್ಥಿಸಿವೆ. ಮುಂಬೈ ಹೈಕೋರ್ಟ್ ಕೂಡ ಆಗಸ್ಟ್ ೩, ೨೦೨೩ರಂದು ವಿಚ್ಕೇಡಾ ಪಂಚಾಯಿತಿಯ ಸರಪಂಚ್ ಹುದ್ದೆಯಿಂದ ಮನಿಷಾ ಘನಪಾಟೀಲ ಪದಚ್ಯುತಿಯನ್ನು ಸಮರ್ಥಿಸಿಕೊಂಡಿತು. ಈ ಮನಿಷಾಗೆ ಯಾರ ಬೆಂಬಲವಿದೆಯೋ ಗೊತ್ತಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯದವರೆಗೆ ಈ ಪ್ರಕರಣ ಹೋದಾಗ ದ್ವಿಸದಸ್ಯ ಪೀಠ ಆಘಾತ ವ್ಯಕ್ತಪಡಿಸಿತು. ಅಲ್ಲದೇ ಮುಂಬೈ ಹೈಕೋರ್ಟಿನ ಆದೇಶವನ್ನು ರದ್ದುಪಡಿಸಿ ವಿಚ್ಕೇಡಾ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿಯುವವರೆಗೂ ಮನಿಷಾರೇ ಸರಪಂಚ್ ಆಗಿರಬೇಕು ಎಂಬ ನಿರ್ದೇಶನ ನೀಡಿತು.
ಲಿಂಗ ಸಮಾನತೆ, ಮತ್ತು ಮಹಿಳಾ ಸಬಲೀಕರಣ ಸಾಧಿಸುತ್ತಿರುವ ನಮ್ಮ ಪ್ರಗತಿಯ ಮೇಲೆ ಅವರ ಅಧಿಕಾರ ಮೊಟಕುಗೊಳಿಸುವುದು, ಮಹಿಳಾ ಸದಸ್ಯರನ್ನು ಪದಚ್ಯುತಗೊಳಿಸುವುದು ಅತ್ಯಂತ ಕಳವಳಕಾರಿ ಮತ್ತು ಅಪಾಯಕಾರಿ ಪ್ರವೃತ್ತಿ' ಎಂಬ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದು ಬಹುಶಃ ದೇಶದ ಗ್ರಾಮ ಸಬಲೀಕರಣ ಮತ್ತು ಮಹಿಳಾ ಪ್ರಾತಿನಿಧ್ಯದ ಕೂಗಿಗೆ ದೊಡ್ಡ ಶಕ್ತಿಯನ್ನು ನೀಡಿದಂತಾಗಿದೆ.
ಇಷ್ಟಕ್ಕೂ ಇದು ಕೇವಲ ವಿಚ್ಕೇಡಾ ಗ್ರಾಮ ಪಂಚಾಯ್ತಿ ಪ್ರಕರಣವಾಗಷ್ಟೇ ಉಳಿದಿಲ್ಲ. ದೇಶದ ಲಕ್ಷಾಂತರ ಪಂಚಾಯಿತಿಗಳ ಸ್ಥಿತಿ ಮತ್ತು ಚಿತ್ರಣ ಇದಕ್ಕಿಂತ ಭಿನ್ನವಾಗಿಲ್ಲ.
ಮೀಸಲಾತಿ ಕಾರಣಕ್ಕಾಗಿ ಅಂತೂ ಮಹಿಳೆಯರನ್ನು ಕಣಕ್ಕಿಳಿಸಿ ಗೆಲ್ಲಿಸುವ ಜನತೆ, ಎರಡು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಒಂದು, ಪಕ್ಷ ಮತ್ತು ಅವರನ್ನು ಬೆಂಬಲಿಸಿದ ಮುಖಂಡನನ್ನು ಸಪೋರ್ಟ್ ಮಾಡಿದ್ದೇವೆ ಎನ್ನುವುದು. ಎರಡು, ಏನೂ ಅರ್ಥ ಆಗುವುದಿಲ್ಲ, ನಾವು ಹೇಳಿದಂಗೆ ಅವರು ಕೆಲಸ ಮಾಡುತ್ತಾರೆ; ನಾವೇ ಕೆಲಸ ಮಾಡೋದು, ಅಥವಾ ನಾವು ಹೇಳಿದಂಗೆ ಅವರು ಕೆಲಸ ಮಾಡುತ್ತಾರೆ ಎಂಬುದು!
ನಿಜ. ಮಹಿಳೆಯರನ್ನು ಆಕೆಯ ಗಂಡ, ಅಥವಾ ಸಂಬಂಧಿಗಳು, ಆಪ್ತೇಷ್ಟರು ಬಳಕೆ ಮಾಡಿಕೊಳ್ಳುತ್ತಿರುವುದು, ಅವರ ಹೆಸರಿನಲ್ಲಿ ಇವರು ದರ್ಬಾರು ಮಾಡುತ್ತಿರುವುದು ಹಲವೆಡೆ ಘಟನಾವಳಿಗಳಿಂದ ಕಂಡು ಬಂದ ವಾಸ್ತವ. ಪಂಚಾಯ್ತಿ ಅಧ್ಯಕ್ಷೆಯ ಕುರ್ಚಿಯ ಮೇಲೆ ಆಕೆಯ ಗಂಡ ಅಥವಾ ಸಂಬಂಧಿಕರು ಕೂತು ನಿರ್ದೇಶನ ನೀಡುವುದು, ಸ್ಥಳೀಯ ಪಿಡಿಓ, ಪಂಚಾಯ್ತಿ ಕಾರ್ಯದರ್ಶಿ, ಸಿಬ್ಬಂದಿಗಳು ಅವರನ್ನೇ ಕೇಳುವುದು ಇದು ಶೇಕಡಾ ೮೦ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ.
ಹಲವು ಜಿಲ್ಲಾ ತಾಲ್ಲೂಕಾ ಸಭೆಗಳಿಗೆ ಅಧಿಕಾರಿಗಳೆದರು ಹೆಂಡತಿ, ಮಗಳು, ಸೋದರಿಯನ್ನು ಹೊರಗಿಟ್ಟು ಇವರೇ ಪಾಲ್ಗೊಂಡ ಸಾಕಷ್ಟು ಉದಾಹರಣೆಗಳೂ ಇವೆ. ಇದಕ್ಕಾಗಿ ಕಾನೂನು ಬದ್ಧವಾಗಿ ಅಧಿಕಾರಿಗಳು ಪ್ರಶ್ನಿಸಿದಾಗ ಮಂತ್ರಿ ಮಹೋದಯರಿಂದ ಸ್ಥಳೀಯ ಮಖಂಡರವರೆಗೂ ಅಧಿಕಾರಿಗಳನ್ನು ಉಗಿದ ಸಾಕಷ್ಟು ಪ್ರಸಂಗಗಳಿವೆ.
ಹಲವು ಪಂಚಾಯ್ತಿಗಳಲ್ಲಿ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಂಡು, ಅಥವಾ ಯೋಜನೆಗಳಿಗೆ ಮಂಜೂರಾತಿ ಪಡೆದು, ಆಡಿಟ್ ವರದಿ ಮತ್ತು ತಪಾಸಣೆಗಳಲ್ಲಿ ಸಿಲುಕಿ ಒದ್ದಾಡಿದ ಹಲವು ಪ್ರಸಂಗಗಳಿವೆ. ಪಾಪ. ಅಮಾಯಕ ಮಹಿಳಾ ಪ್ರತಿನಿಧಿಗಳು ಸಾಕಷ್ಟು ಸಮಸ್ಯೆಯನ್ನು ಅನುಭವಿಸಿ, ದಂಡ- ಶಿಕ್ಷೆಗೆ ಗುರಿಯಾಗಿರುವ ಉದಾಹರಣೆಗಳೂ ಅಲ್ಲಲ್ಲಿ ಇವೆ.
ಹಾಗಂತ, ಮಹಿಳೆಯರು ಅತ್ಯಂತ ಸಮರ್ಥವಾಗಿ ಮಾದರಿ ಆಡಳಿತ ನೀಡಿದ, ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ ಪ್ರಕರಣಗಳು ಹಲವಾರಿವೆ. ಅವಕಾಶ ಕೊಟ್ಟರಲ್ಲವೇ, ಚೆನ್ನಾಗಿ ಅವರ ಸಾಮರ್ಥ್ಯ ಬೆಳಕಿಗೆ ಬರುವುದು!?
ಈ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮಹಿಳೆಯರನ್ನು ತಮಗನುಕೂಲವಾಗುವ ರೀತಿಯಲ್ಲಿ ಸ್ಥಾನಮಾನ ನೀಡಿ ಕೈಬಿಟ್ಟಿರುವ ಸಾಕಷ್ಟು ಘಟನೆಗಳು ದೇಶದ ಎಲ್ಲ ರಾಜಕೀಯ ಪಕ್ಷಗಳಲ್ಲಿ, ಎಲ್ಲ ರಾಜ್ಯಗಳಲ್ಲೂ ಇವೆ.
ದೇಶದ ಪ್ರಮುಖ ರಾಜಕೀಯ ನಾಯಕರು ಹಾಗೂ ಪಕ್ಷಗಳು ಅವರ ಪತ್ನಿ, ಅಥವಾ ಮಕ್ಕಳನ್ನು ದಾಳವಾಗಿ ಬಳಸಿಕೊಂಡು ಆಡಳಿತದ ಚುಕ್ಕಾಣಿ ಹಿಡಿದ ಘಟನೆ ಸಾಕಷ್ಟು. ಲಾಲೂ ಪ್ರಸಾದ ಯಾದವ್, ಎಂಜಿಆರ್, ಎನ್‌ಟಿಆರ್ ಅವರಿಂದ ಹಿಡಿದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಂಡತಿ ಮಕ್ಕಳಿಗೆ ಟಿಕೆಟ್ ಪಡೆದು ಅವರ ಹೆಸರಿನಲ್ಲಿ ಮಂತ್ರಿಗಳು, ಶಾಸಕರು ಕಾದಾಡಿದ್ದು ಕಣ್ಣ ಮುಂದಿದೆ. ತಾವು ಹಗರಣದಲ್ಲಿ ಸಿಲುಕಿಕೊಂಡು ಜೈಲು ಸೇರಿದ ಅಥವಾ ಸೇರಬೇಕಾದ ಸಂದರ್ಭದಲ್ಲಿ ತಮ್ಮ ಪತ್ನಿಯನ್ನು ಮುಖ್ಯಮಂತ್ರಿಯಾಗಿಸಿದ್ದು ಮತ್ತು ತಮ್ಮ ಪಕ್ಷದ ಚುಕ್ಕಾಣಿಯನ್ನು ತಮ್ಮ ಮಕ್ಕಳು, ಪತ್ನಿಗೆ ವಹಿಸಿರುವುದು ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಸಂಪ್ರದಾಯ ಮತ್ತು ಒಪ್ಪಿತ ರಾಜಕಾರಣವಾಗಿಬಿಟ್ಟಿದೆ. ಗಂಡು ಮಕ್ಕಳನ್ನು ಉತ್ತರಾಧಿಕಾರಿಯಾಗಿಸುವುದಂತೂ ಹಕ್ಕು ಎಂದು ತಿಳಿದುಕೊಂಡಿದ್ದಾರೆ.
ಬಿಡಿ. ಲಾಲೂ ಜೈಲಿಗೆ ಹೋದಾಗ ರಾಬ್ಡಿ ದೇವಿ ಮುಖ್ಯಮಂತ್ರಿಯಾಗಿಲ್ಲವೇ? ಮನೆಯಲ್ಲಿ ರಾಜಕೀಯ ಸೋಂಕೂ ಇಲ್ಲದ ರಾಬ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು! ಈಗ ಅದು ಕೇಜ್ರಿವಾಲ್‌ವರೆಗೂ ಬಂತು. ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಅವರ ಪತ್ನಿ ಪಕ್ಷದ ವೇದಿಕೆಗಳಲ್ಲಿ ಮತ್ತು ಛಾಯಾ ಮುಖ್ಯಮಂತ್ರಿಯಂತೆ ಕಾರ್ಯನಿರ್ವಹಿಸಿದರು. ಅನುಭವಸ್ಥೆ, ವಿದ್ಯಾವಂತೆ ಎಲ್ಲವೂ ನಿಜವೆನ್ನಿ. ಆದರೆ ಪ್ರಜಾಪ್ರಾತಿನಿಧಿಕ ಕಾಯ್ದೆ ಒಪ್ಪುವುದೇ… ಪ್ರಶ್ನೆ.
ಲಕ್ಷ್ಮೀಶಿವಪಾರ್ವತಿ, ಜಯಲಲಿತಾ, ಮೆಹಬೂಬಾ ಮುಫ್ತಿ ಇವರೆಲ್ಲ ಮುಖ್ಯಮಂತ್ರಿಯಾಗಿರುವುದು ಅವರ ಬಂಧು ಆಪ್ತೇಷ್ಟರಿಂದಾಗಿಯೇ. ತಮಿಳುನಾಡು, ಆಂಧ್ರ, ತೆಲಂಗಾಣ, ಜಾರ್ಖಂಡ, ಜಮ್ಮು-ಕಾಶ್ಮೀರ ಮುಂತಾದೆಡೆ ತಂದೆಯ ನಂತರ ಮಕ್ಕಳೇ ಉತ್ತರಾಧಿಕಾರಿಯಾಗಿದ್ದಾರೆ. ಶಾಸಕನೋ, ಸಂಸದನೋ ಆಕಸ್ಮಿಕ ನಿಧನರಾದಾಗ ಸಹಾನುಭೂತಿ ಗೆಲುವಿಗಾಗಿ ಅವರ ಪತ್ನಿಗೇ ಟಿಕೆಟ್ ಕೊಟ್ಟು ಗೆಲ್ಲಿಸಿದ ಸಂಪ್ರದಾಯ ಎಂದು ಆರಂಭವಾಯಿತೋ ಅಲ್ಲಿಂದಲೇ ಜನರ ಭಾವನೆಯೊಂದಿಗೆ ಆಟವಾಡುವುದು ಶುರುವಾಯ್ತು. ಕರ್ನಾಟಕದ ಬಹುತೇಕ ಮರುಚುನಾವಣೆಗಳಲ್ಲಿ, ಶಾಸಕರು, ಸಂಸದರು ಸತ್ತ ನಂತರ ಅವರ ಪತ್ನಿಯ ವೈಧವ್ಯವನ್ನೇ ಆಯಾ ಪಕ್ಷಗಳು ಭಾವನಾತ್ಮಕ ಬಂಡವಾಳವನ್ನಾಗಿಟ್ಟುಕೊಂಡು ಚುನಾವಣೆ ನಡೆಸಿವೆ. ಈ ವೈಧವ್ಯ ಭಾವನೆಯೇ ಬಹುತೇಕ ಕಡೆ ಕ್ಲಿಕ್ ಆಗಿದೆ. ನಂತರದ ಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಈ ಪತ್ನಿಯರು ಪುನರಾಯ್ಕೆಯಾದರೆ, ನಂತರ ಹಲವೆಡೆ ಈ ಸಿಂಪತಿ ಕೆಲಸ ಮಾಡಲಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂತ್ರಿಗಳೇ ತಮ್ಮ ಪತ್ನಿ ಮಕ್ಕಳಿಗೆ ಟಿಕೆಟ್ ಕೊಡಿಸಿ ಉತ್ತರಾಧಿಕಾರಿಯನ್ನಾಗಿಸಿದರು. ಇದಕ್ಕೆ ಪಕ್ಷ ಪಂಗಡದ ಬೇಧವೇನೂ ಇರಲಿಲ್ಲ. ಕಾಂಗ್ರೆಸ್‌ನ ಎಸ್.ಎಸ್.ಮಲ್ಲಿಕಾರ್ಜುನ ತಮ್ಮ ಪತ್ನಿ ಪ್ರಭಾರನ್ನು, ಸತೀಶ ಜಾರಕಿಹೊಳಿ ತಮ್ಮ ಪುತ್ರಿ ಪ್ರಿಯಾಂಕಾರನ್ನು, ಈಶ್ವರ ಖಂಡ್ರೆ ತಮ್ಮ ಪುತ್ರ ಸಾಗರ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಬಿಜೆಪಿಯಲ್ಲೂ ಅಷ್ಟೇ. ಜಿ.ಎಂ.ಸಿದ್ದೇಶ್ವರ ತಮ್ಮ ಪತ್ನಿ ಗಾಯತ್ರಿಯನ್ನು ಕಣಕ್ಕಳಿಸಿದ್ದರು. ಅವರು ಸೋತರು ನಿಜ.
ಆದರೆ ಸಿದ್ದೇಶ್ವರ ಬದಲಾಗಿ ಅವರ ಪತ್ನಿಗೆ ಕೊಟ್ಟಿದ್ದಕ್ಕೆ ಏನು ತರ್ಕ? ಇನ್ನೂ ಸ್ಪಷ್ಟವಿಲ್ಲ. ಬಿಜೆಪಿಯಲ್ಲಿ ಇದು ಹೊಸದೇನಲ್ಲ. ಹಿಂದೆ ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ನಿರಾಕರಿಸಿ ಬೇಕಿದ್ದರೆ ನಿಮ್ಮ ಪತ್ನಿಗೆ ಕೊಡುತ್ತೇವೆ ಎಂದರು. ಅವರು ಪಕ್ಷವನ್ನೇ ತೊರೆದು ಹೋದರು. ಅರವಿಂದ ಲಿಂಬಾವಳಿ ಬದಲು ಅವರ ಪತ್ನಿಗೆ ಟಿಕೆಟ್ ನೀಡಲಾಯಿತು. ಹೀಗೆ ಹಲವು ಉದಾಹರಣೆಗಳು ಎರಡೂ ಪಕ್ಷಗಳಲ್ಲಿವೆ. ಪತ್ನಿ, ಮಕ್ಕಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಕೆಲವರು ಸಫಲರಾದರೆ, ಕೆಲವು ವಿಫಲರಾದರು.
ವಂಶಪಾರಂಪರ‍್ಯ ರಾಜಕಾರಣವನ್ನು ಟೀಕಿಸುವ ತಾಕತ್ತು ಮತ್ತು ನೈತಿಕತೆ ಯಾವ ಪಕ್ಷದಲ್ಲೂ ಉಳಿದಿಲ್ಲ. ಜೆಡಿಎಸ್ ಅಂತೂ ಬಿಡಿ, ಅಪ್ಪ ಮಕ್ಕಳ ಪಕ್ಷ. ಇನ್ನು ಡಿಎಂಕೆ, ತೆಲಗುದೇಶಂ, ವೈಎಸ್‌ಆರ್, ಜೆಎಂಎಂ ಎಲ್ಲವೂ ಅಷ್ಟೇ. ಕುಟುಂಬದ ಪಕ್ಷಗಳೇ. ಮೊನ್ನೆ ನಡೆದ ಹರಿಯಾಣಾ ಚುನಾವಣೆಯಲ್ಲಿ ಚೌಟಾಲಾರ ಕುಟುಂಬ ಪಕ್ಷವನ್ನು ಜನ ಗುಡಿಸಿ ಹೊತ್ತು ಹಾಕಿದರು.
ಹಿಂದೆಲ್ಲ ತಾವು ಅಧಿಕಾರದಲ್ಲಿ ಇರುವವರೆಗೆ ತಮ್ಮ ಮಕ್ಕಳು, ಪತ್ನಿ, ಬಂಧುಗಳು ರಾಜಕಾರಣಕ್ಕೆ ಪ್ರವೇಶಿದಂತೆ ತಡೆಯಲಾಗುತ್ತಿತ್ತು. ಲಾಲ್ ಬಹದ್ದೂರ ಶಾಸ್ತ್ರಿ, ಎಲ್.ಕೆ.ಅಡ್ವಾಣಿಯಿಂದ ಹಿಡಿದು ಇತ್ತೀಚಿನ ಜೆ.ಎಚ್.ಪಟೇಲ್‌ವರೆಗೆ ತಾವು ಅಧಿಕಾರದಲ್ಲಿ ಇರುವವರೆಗೆ ಮಕ್ಕಳನ್ನು ಸನಿಹ ಬಿಟ್ಟುಕೊಂಡಿರಲಿಲ್ಲ.
ವಿಧಾನಸೌಧಕ್ಕೆ ಸುಳಿಯಬೇಡಿ ಎಂದು ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ತಮ್ಮ ಬಂಧುಗಳಿಗೆ, ಮಕ್ಕಳಿಗೆ ಬಹಿರಂಗ ನಿರ್ದೇಶನ ನೀಡಿದ್ದು ಗೊತ್ತೇ ಇದೆ. ಅವರ ಕಾಲಾನಂತರವೂ ಕೂಡ ಮಕ್ಕಳು ರಾಜಕೀಯ ಪ್ರವೇಶಿಸಲು ಯತ್ನಿಸಿ ವಿಫಲರಾದರು. ಹಾಗೆ ರಾಜಕೀಯ ಉಸಾಬರಿಯೇ ಬೇಡ ಎಂದು ತೆಪ್ಪಗಿದ್ದರೂ ಕೂಡ ವಿವಾದ ಬಿಡಲಿಲ್ಲ.
ಭಾರತದ ರಿಸರ್ವ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ. ರಘುರಾಮ್ ರಾಜನ್ ಅವರನ್ನು ಆಪ್ ಪಕ್ಷ ದೆಹಲಿ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಇಂಗಿತ ವ್ಯಕ್ತಪಡಿಸಿದಾಗ `ರಾಜಕೀಯ ಪ್ರವೇಶಿಸುವುದಕ್ಕೆ ನನ್ನ ಪತ್ನಿ ಸ್ಪಷ್ಟವಾಗಿ ವಿರೋಧಿಸಿದ್ದು, ಹೀಗಾಗಿ ನಾನು ರಾಜಕೀಯ ಪ್ರವೇಶಿಸುತ್ತಿಲ್ಲ..' ಎಂದು ಪತ್ನಿಯ ಮಾತಿಗೆ ಈ ಆರ್ಥಿಕ ತಜ್ಞ ಗೌರವ ನೀಡಿದ್ದರು.
ಹೊಸಿಲು ದಾಟದವರು, ರಾಜಕೀಯದ ಬಗ್ಗೆ ನಿರಾಸಕ್ತಿ ಮತ್ತು ಸಂಕೋಚ ಇದ್ದವರೂ ಕೂಡ ವಿವಾದಕ್ಕೆ ಸಿಲುಕಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರ ಸ್ಥಿತಿಯೂ ಅದೇ. ಗಂಡ, ಮಕ್ಕಳ ಏಳ್ಗೆಯನ್ನು ಮನೆಯಲ್ಲೇ ಕೂತು ಕಣ್ತುಂಬಿಕೊಂಡ ಪಾರ್ವತಿಯವರು, ಸಾರ್ವಜನಿಕ ಕಾರ್ಯಕ್ರಮ, ಒಡನಾಟ, ಮುಖ್ಯಮಂತ್ರಿ ಪತ್ನಿಯಾಗಿ ಅವರೊಟ್ಟಿಗೆ ಕಾಣಿಸಿಕೊಂಡಿದ್ದೇ ಇಲ್ಲ. ಸಿದ್ದರಾಮಯ್ಯ ಪ್ರಮಾಣವಚನಕ್ಕೂ ಬಂದಿಲ್ಲ. ಸ್ವತಃ ಸಿದ್ದರಾಮಯ್ಯ ಹೇಳಿದರು. ತಮ್ಮ ಪಾಡಿಗೆ ತಾವಿದ್ದು ಘನತೆ ಮೆರೆದವರು. ಈ ಕಾರಣದಿಂದ ಸಿಎಂ ಒಬ್ಬರ ಮಾದರಿ ಪತ್ನಿ. ಆದರೆ ಅವರನ್ನೂ ವಿವಾದ ಬಿಡಲಿಲ್ಲ. ಮೂಡಾ ವಿವಾದ ಅವರ ತವರಿನ ಅರಿಸಿಣ ಕುಂಕುಮದ ಉಡುಗೊರೆಗೆ ಸುತ್ತಿಕೊಂಡಿತು!
ತನ್ನ ಪತಿಯ ಕಳಂಕರಹಿತ ರಾಜಕಾರಣಕ್ಕೆ ಕಪ್ಪು ಚುಕ್ಕೆಯಾಗಬಾರದೆಂದು ತಾವು ಮೂಡಾದ ಸೈಟ್‌ಗಳನ್ನು ಮರಳಿಸುತ್ತಿರುವುದಾಗಿ ಘೋಷಿಸಿದರು. ಬಹುಶಃ ಮೂಡಾ ಸೈಟ್ ಪಡೆದಿರುವುದು, ಒಟ್ಟಾರೆ ವಿವಾದ ಸುತ್ತಿಕೊಳ್ಳುವವರೆಗೆ ಪಾರ್ವತಿಯವರಿಗೆ ಈ ಸೈಟ್ ವಿಚಾರ ಗೊತ್ತಿರಲಿಲ್ಲವೇನೋ? ಅಷ್ಟು ಮುಗ್ಧರು. ಸಿದ್ದರಾಮಯ್ಯ ಕೂಡ ಕುಟುಂಬವನ್ನು ರಾಜಕಾರಣದಿಂದ ದೂರ ಇಟ್ಟು ಅಂತರ ಕಾಪಾಡಿಕೊಂಡವರು.
ಸರ್ವೋಚ್ಚ ನ್ಯಾಯಾಲಯದ ಮಹಿಳಾ ಪ್ರಾತಿನಿಧ್ಯದ ನ್ಯಾಯ, ರಾಜಕೀಯ ಕಲಸುಮೇಲೋಗರದ ನಡುವೆ ಒಂದು ಬೆಳ್ಳಿ ಚುಕ್ಕೆ. ಸುಪ್ರೀಂ ಆದೇಶವನ್ನು ನಿಜರೂಪದಲ್ಲಿ ಮನಃಪೂರ್ವಕವಾಗಿ ಅನುಷ್ಠಾನಕ್ಕೆ ತರಲು ಇನ್ನಾದರೂ ಪುರುಷ ಪ್ರಧಾನ ಸಮಾಜ ಮುಂದಾಗಲಿ; ರಾಜಕಾರಣಿಗಳ ಪತ್ನಿಯರು ಮತ್ತು ಮಕ್ಕಳು ಆಟದ ಗೊಂಬೆಗಳಂತೆಯೋ ಅಥವಾ ರಾಜಕೀಯ ಚಿನ್ನಿದಾಂಡಿನಂತೆಯೋ ಬಳಕೆಯಾಗದಿರಲಿ ಎಂಬುದಷ್ಟೇ ಈಗ ಪ್ರಜ್ಞಾವಂತರೆಲ್ಲರ ಕಳಕಳಿ.