For the best experience, open
https://m.samyuktakarnataka.in
on your mobile browser.

ರಾಜಕೀಯ ಕಮಟು ವಾಸನೆ

11:14 AM Jan 03, 2024 IST | Samyukta Karnataka
ರಾಜಕೀಯ ಕಮಟು ವಾಸನೆ

೧೯೯೨ರ ಸಾಲಿನಲ್ಲಿ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಜರುಗಿದ ಘಟನಾವಳಿಗಳ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ಸುಮಾರು ೩೨ ಪ್ರಕರಣಗಳಿಗೆ ಮರುಜೀವ ಕೊಡಲು ಹೊರಟಿರುವ ರಾಜ್ಯ ಸರ್ಕಾರದ ಈ ಕ್ರಮಕ್ಕೆ ಪ್ರೇರಣೆ ಇಲ್ಲವೇ ಕಾರಣ ಏನೆಂಬುದರ ಬಗ್ಗೆ ಸಂಬಂಧಪಟ್ಟವರು ಎಷ್ಟೇ ತಿಣುಕಾಡಿ ವಿವರಣೆ ನೀಡಿದರೂ ಜನರ ಮಟ್ಟಿಗೆ ಮನವರಿಕೆಯಾಗಿರುವ ಸಂಗತಿ ಎಂದರೆ ರಾಜಕೀಯ ಸೇಡಿನ ಕ್ರಮ ಎಂಬುದು ಮಾತ್ರ.

ರಾಜಕಾರಣದಲ್ಲಿ ಶಾಶ್ವತವಾಗಿ ಮಿತ್ರರು ಹೇಗಿರುವುದಿಲ್ಲವೋ ಹಾಗೆಯೇ ಶತ್ರುಗಳು ಕೂಡಾ ಇರುವುದಿಲ್ಲ ಎಂಬ ಮಾತು ಈಗಾಗಲೇ ಹಲವು ವಿದ್ಯಮಾನಗಳ ಮೂಲಕ ಖಚಿತಪಟ್ಟಿರುವ ಸಂಗತಿ. ಆದರೆ, ಸೇಡು ಮಾತ್ರ ಶಾಶ್ವತ. ಪ್ರತಿಸ್ಪರ್ಧಿಗಳಾಗಿದ್ದವರು ಅಧಿಕಾರದಲ್ಲಿದ್ದಾಗ ನಡೆದುಕೊಂಡು ರೀತಿಯಿಂದ ಕುಪಿತಗೊಂಡಿದ್ದವರು ಅಧಿಕಾರ ಪ್ರಾಪ್ತವಾಗುತ್ತಿದ್ದಂತೆಯೇ ಭೂತಕಾಲದಲ್ಲಿನ ತಪ್ಪು ಒಪ್ಪುಗಳನ್ನು ಬಗೆದು ಪ್ರತಿಸ್ಪರ್ಧಿಗಳ ವಿರುದ್ಧದ ಪ್ರಕರಣಗಳ ಜರಡಿ ಹಿಡಿದು ಅವುಗಳಿಗೆ ಮರುಜೀವ ಕೊಡುವುದು ಅದೇಕೋ ಏನೋ ಪ್ರಾರಬ್ಧದ ರೀತಿಯಲ್ಲಿ ಅಂಟಿಕೊಂಡು ಬಂದಿರುವ ಒಂದು ಕಾಯಿಲೆ. ಇದಕ್ಕೆ ಪಕ್ಷಬೇಧವಿಲ್ಲ-ಜಾತಿಭೇದವಿಲ್ಲ - ವರ್ಗಭೇದ ವಂತೂ ಇಲ್ಲವೇ ಇಲ್ಲ. ಇರುವ ಒಂದೇ ಒಂದು ಗುರಿ ಎಂದರೆ ಪ್ರತಿಸ್ಪರ್ಧಿಗಳಿಗೆ ಕಿರುಕುಳವಾಗುವಂತೆ ನೋಡಿಕೊಳ್ಳುವುದು. ವೈಚಾರಿಕವಾಗಿ ಇದನ್ನು ವಿರೋಧಿಸುತ್ತಲೇ ವ್ಯಾವಹಾರಿಕವಾಗಿ ಕಾರ್ಯರೂಪಕ್ಕೆ ತರುವ ಅಧಿಕಾರಸ್ಥ ರಾಜಕಾರಣಿಗಳಿಗೆ ಮನವರಿಕೆಯಾಗಬೇಕಾದ ಸಂಗತಿ ಎಂದರೆ ಅಧಿಕಾರ ಶಾಶ್ವತವಲ್ಲ ಎಂಬುದು. ೧೯೯೨ರ ಸಾಲಿನಲ್ಲಿ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಜರುಗಿದ ಘಟನಾವಳಿಗಳ ಹಿನ್ನೆಲೆಯಲ್ಲಿ ದಾಖಲಾಗಿದ್ದ ಸುಮಾರು ೩೨ ಪ್ರಕರಣಗಳಿಗೆ ಮರುಜೀವ ಕೊಡಲು ಹೊರಟಿರುವ ರಾಜ್ಯ ಸರ್ಕಾರದ ಈ ಕ್ರಮಕ್ಕೆ ಪ್ರೇರಣೆ ಇಲ್ಲವೇ ಕಾರಣ ಏನೆಂಬುದರ ಬಗ್ಗೆ ಸಂಬಂಧಪಟ್ಟವರು ಎಷ್ಟೇ ತಿಣುಕಾಡಿ ವಿವರಣೆ ನೀಡಿದರೂ ಜನರ ಮಟ್ಟಿಗೆ ಮನವರಿಕೆಯಾಗಿರುವ ಸಂಗತಿ ಎಂದರೆ ರಾಜಕೀಯ ಸೇಡಿನ ಕ್ರಮ ಎಂಬುದು ಮಾತ್ರ.
ಹಿಂದಿನ ಪ್ರಕರಣಗಳನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂಬುದೇನೂ ನಿಯಮವಿಲ್ಲ. ಆದರೆ, ಇಷ್ಟು ಸುದೀರ್ಘ ಕಾಲ ಸುಮ್ಮನಿದ್ದು ಹಠಾತ್ತನೇ ಈಗ ಸಮಾಧಿಯನ್ನು ಬಗೆದು ಎಲುಬುಗಳನ್ನು ತಡಕಾಡುವ ರೀತಿಯಲ್ಲಿ ಪ್ರಕರಣಗಳನ್ನು ಜಾಲಾಡಲು ಕಾರಣವೇನು ಎಂಬುದನ್ನು ಜನರ ಮುಂದೆ ಇಡುವುದು ನಿಜವಾದ ಅರ್ಥದಲ್ಲಿ ರಾಜಧರ್ಮ. ಈ ವಿಚಾರದಲ್ಲಿ ಯಾವುದೇ ಪಕ್ಷವಿರಲಿ. ಎಲ್ಲ ಪಕ್ಷದವರು ನಿಷ್ಠೂರವಾಗಿ ನಡೆದುಕೊಳ್ಳಬೇಕಾದ ರೀತಿ ಎಂದರೆ ಕಾನೂನುಬದ್ಧ ಆಡಳಿತ ನಡೆಸುವುದಾಗಿ ಪ್ರಮಾಣಕ್ಕೆ ಬದ್ಧರಾಗಿರುವುದು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸರ್ಕಾರದ ಈ ಕ್ರಮದ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದರೂ ಕೇವಲ ಅದು ವಾಗ್ವಿಲಾಸವಾಗಿ ಉಳಿದುಬಿಡುತ್ತದೆ ಅಷ್ಟೆ. ಮೊದಲು ಗೃಹ ಸಚಿವರು ಮನದಟ್ಟು ಮಾಡಿಕೊಡಬೇಕಾದ ಸಂಗತಿ ಎಂದರೆ ಇಷ್ಟು ದಿನ ಯಾವ ಕಾರಣಕ್ಕಾಗಿ ಈ ಪ್ರಕರಣಗಳನ್ನು ವಿಚಾರಣೆ ನಡೆಸದೆ ಹಾಗೆಯೇ ನನೆಗುದಿಗೆ ಇಡಲಾಗಿತ್ತು ಎಂಬುದರ ಬಗ್ಗೆ. ಇದೊಂದು ಪರಿಸ್ಥಿತಿಯ ಪಿತೂರಿ ಎಂದು ಬಿಡುಬೀಸಾಗಿ ತಳ್ಳಿಹಾಕುವ ಪ್ರಕರಣ ಇದಲ್ಲ. ಅಯೋಧ್ಯೆಯಲ್ಲಿ ರಾಮದೇವರ ವಿಗ್ರಹ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿಯಾಗಿ ಪ್ರಕ್ರಿಯೆಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಆಗಿನ ಕರಸೇವಕರನ್ನು ದಸ್ತಗಿರಿ ಮಾಡುವ ಉದ್ದೇಶದಿಂದಲೇ ಈ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸುವುದು ಕಷ್ಟವೇ. ಏಕೆಂದರೆ, ಬಹುತೇಕ ಕರಸೇವಕರು ಭಾರತೀಯ ಜನತಾ ಪಕ್ಷದ ಪರವಾಗಿ ಸಹಾನುಭೂತಿ ಉಳ್ಳವರು. ವಾದದ ಮಟ್ಟಿಗೆ ಹೇಳುವುದಾದರೆ ಇದೇ ಕರಸೇವಕರು ಕಾಂಗ್ರೆಸ್ ಪಕ್ಷದ ಸಹಾನುಭೂತಿ ಉಳ್ಳವರಾಗಿದ್ದರೆ ಸರ್ಕಾರ ಇದೇ ನಿಲುವನ್ನು ಕೈಗೊಳ್ಳುತ್ತಿತ್ತೆ ಎಂಬ ಪ್ರಶ್ನೆಗೆ ಅವರವರ ಭಾವ ಭಕುತಿಗೆ ಬಿಟ್ಟಂತಹ ಉತ್ತರ ಸಿಗಬಹುದು.
ಇಂತಹ ಸೂಕ್ಷ್ಮ ವಿಚಾರಗಳಿಂದ ಧಾರ್ಮಿಕ ಜಿಜ್ಞಾಸೆಗಳ ಹೆಸರಿನಲ್ಲಿ ಸಂಘರ್ಷಗಳು ಭುಗಿಲೆದ್ದು ಬೀದಿ ಹೋರಾಟಗಳು ಆರಂಭವಾಗುವ ಅಪಾಯಗಳನ್ನು ತಳ್ಳಿಹಾಕುವಂತಿಲ್ಲ. ಸರ್ಕಾರ ಆದ್ಯತೆಯ ಮೇಲೆ ಈಗ ಮಾಡಬೇಕಾದ ಕೆಲಸವೆಂದರೆ ಮರುಜೀವ ಕೊಡುವ ಪ್ರಕ್ರಿಯೆಯನ್ನು ಕೈಬಿಟ್ಟು ಸರ್ಕಾರದ ಉದ್ದೇಶಗಳನ್ನು ಮೊದಲು ಜನರಿಗೆ ಮನವರಿಕೆ ಮಾಡಿಕೊಡುವುದು. ಇದಾದ ನಂತರ ಜನಾಭಿಪ್ರಾಯದ ಆಧಾರದ ಮೇರೆಗೆ ಕಾನೂನು ತಜ್ಞರ ಅಭಿಮತವನ್ನು ಪರಿಗಣಿಸಿ ಸೂಕ್ತ ನಿರ್ಧಾರವನ್ನು ಕೈಗೊಂಡರೆ ಆಗ ಯಾರ ಆಕ್ಷೇಪವೂ ನಿಲ್ಲಲಾರದು. ಹೀಗಾಗಿ ಸರ್ಕಾರದ ಕ್ರಮದ ವಿರುದ್ಧ ಭುಗಿಲೇಳುತ್ತಿರುವ ಆಕ್ರೋಶಗಳಿಗೆ ರಾಜಕೀಯ ಬಣ್ಣ ಮೆತ್ತುವುದು ಸಾಧುವಾದ ಕ್ರಮವಾಗಲಾರದು.