ರಾಜಕೀಯ ಕಾಲಚಕ್ರದ ಉರುಳು
ಶೆಟ್ಟರ್ ಬಿಜೆಪಿಯಿಂದ ನಿರ್ಗಮಿಸುವಾಗ ಯಾರಿಗೂ ಅದರ ಸುಳಿವು ಹೇಗೆ ಇರಲಿಲ್ಲವೋ ಹಾಗೆಯೇ ಪುನರಾಗಮನದ ಸಂದರ್ಭದಲ್ಲಿಯೂ ಕೆಲವರನ್ನು ಬಿಟ್ಟರೆ ಬಹುತೇಕ ಮಂದಿಗೆ ಅದರ ಸುಳಿವೇ ಇರಲಿಲ್ಲ.
ರಾಜಕೀಯ ಕ್ಷೇತ್ರ ಆದ್ಯತೆಗಳಿಗಿಂತ ಸಾಧ್ಯತೆಗಳ ಸಾಗರ. ಈ ಕ್ಷೇತ್ರದಲ್ಲಿ ಶಾಶ್ವತವಾಗಿ ಬಾಗಿಲು ಮುಚ್ಚುವುದಾಗಲೀ ಇಲ್ಲವೇ ತೆರೆದಿಡುವ ಪರಿಸ್ಥಿತಿ ಇರುವ ಸಾಧ್ಯತೆಗಳು ತೀರಾ ಕಡಿಮೆ. ವೈಚಾರಿಕತೆ ಹಾಗೂ ಲೋಕನಿಷ್ಠೆ ಎಂಬುದು ಕೇವಲ ವಾಗ್ವಿಲಾಸದ ಸರಕಷ್ಟೆ. ಇದು ಕೇವಲ ಒಂದು ಪಕ್ಷದ ಅಥವಾ ಒಬ್ಬ ನಾಯಕನಿಗೆ ಸಂಬಂಧಿಸಿದ ಮಾತಲ್ಲ. ಇಡೀ ಭಾರತಕ್ಕೆ ಅನ್ವಯವಾಗುವ ಮಾತು. ಕೇವಲ ಒಂಬತ್ತು ತಿಂಗಳ ಹಿಂದೆ ಬಿಜೆಪಿಯನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶರವೇಗದ ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ತವರು ಮನೆಗೆ ಹಿಂತಿರುಗಿರುವುದು ಇಂತಹ ಒಂದು ಪರಿಸ್ಥಿತಿಯ ದಿಕ್ಸೂಚಿ. ಶೆಟ್ಟರ್ ಬಿಜೆಪಿಯಿಂದ ನಿರ್ಗಮಿಸುವಾಗ ಯಾರಿಗೂ ಅದರ ಸುಳಿವು ಹೇಗೆ ಇರಲಿಲ್ಲವೋ ಹಾಗೆಯೇ ಪುನರಾಗಮನದ ಸಂದರ್ಭದಲ್ಲಿಯೂ ಕೆಲವರನ್ನು ಬಿಟ್ಟರೆ ಬಹುತೇಕ ಮಂದಿಗೆ ಅದರ ಸುಳಿವೇ ಇರಲಿಲ್ಲ. ಇಷ್ಟಕ್ಕೂ ರಾಜಕಾರಣವೆಂಬುದು ಬಹಿರಂಗವಾಗಿ ಹೇಳಿ ಮಾಡುವ ಕೆಲಸವೂ ಅಲ್ಲ. ಅದೇನೇ ಇರಲಿ ಶೆಟ್ಟರ್ ಪುನರಾಗಮನದಿಂದ ಬಿಜೆಪಿ ವಲಯದಲ್ಲಿ ಉತ್ಸಾಹ ಉಮ್ಮಳಿಸಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಸ್ಥಿತಿ ಕಾಣದೇ ಇರಲು ಕಾರಣಗಳು ಹಲವಾರು. ಕಾಂಗ್ರೆಸ್‌ಗೆ ಶೆಟ್ಟರ್ ಬರುವಾಗ ವಿಧಾನಸಭೆ ಚುನಾವಣೆ ಇತ್ತು. ನಿರ್ಗಮಿಸುವಾಗ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ತಕ್ಕಡಿ ಏರುಪೇರಾಗುವ ಸಾಧ್ಯತೆಗಳನ್ನು ಯಾವತ್ತಿಗೂ ತಳ್ಳಿಹಾಕಲಾಗುವುದಿಲ್ಲ. ಒಟ್ಟಾರೆ ಕಾಲಚಕ್ರದ ಉರುಳಿಗೆ ಕೊರಳನ್ನು ಕೊಟ್ಟು ಅದರಿಂದ ಲಾಭ ಪಡೆದವರು ಎಷ್ಟು ಮಂದಿ ಇದ್ದಾರೋ ಬಹುಶಃ ಅದಕ್ಕಿಂತಲೂ ಹೆಚ್ಚಿನ ಮಂದಿ ನಷ್ಟ ಹೊಂದಿದವರು ಇದ್ದಾರೆ. ಇದೆಲ್ಲ ಅವರವರ ರಾಜಕೀಯ ಸಾಮರ್ಥ್ಯದ ಪೂಜಾಫಲ.
ಶೆಟ್ಟರ್ ಅವರ ಪುನರಾಗಮನದ ಬೆಳವಣಿಗೆ ಜರುಗುತ್ತಿರುವ ಸಂದರ್ಭದಲ್ಲಿಯೇ ಬಿಹಾರದಲ್ಲಿ ರಾಜಕೀಯ ಭೂಕಂಪದ ರೀತಿಯ ನಾಟಕೀಯ ಘಟನಾವಳಿಗಳು ತೆರೆಮರೆಯಲ್ಲಿ ಬಿಚ್ಚಿಕೊಳ್ಳುತ್ತಿರುವುದು ಒಂದು ರೀತಿ ಕಾಕತಾಳೀಯವೇ. ಇಂಡಿಯಾ' ಮೈತ್ರಿ ಕೂಟದ ಪ್ರಮುಖ ಪಕ್ಷವಾದ ಜೆಡಿಯು ನೇತೃತ್ವದ ನಿತೀಶ್ ಕುಮಾರ್ ಸರ್ಕಾರ ಬಿಜೆಪಿ ಮಾರ್ಗವಾಗಿ ಎನ್‌ಡಿಎ ಕೂಟಕ್ಕೆ ಮರುಪ್ರವೇಶ ಮಾಡಲು ಮುಂದಾಗುತ್ತಿರುವ ಬೆಳವಣಿಗೆ ಇಡೀ ಲೋಕಸಭಾ ಚುನಾವಣೆಯ ಚಿತ್ರಣವನ್ನೇ ಬದಲಾಯಿಸುವಂತಿದೆ. ನಿತೀಶ್ ಕುಮಾರ್ ವರ್ತನೆ ನಿಜಕ್ಕೂ ನಿಗೂಢವೇ. ಏಕೆಂದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮೂಲೋತ್ಪಾಟನೆ ಮಾಡುವುದೇ ತಮ್ಮ ಸಂಕಲ್ಪ ಎಂದು ಘೋಷಿಸಿ
ಇಂಡಿಯಾ' ಕೂಟದಲ್ಲಿ ಉತ್ಸಾಹ ಮೂಡಿಸಿದ್ದ ನಿತೀಶ್ ಕುಮಾರ್ ಈಗ ರಾಗ ಬದಲಾಯಿಸಿ ಬಿಜೆಪಿಗೆ ಹಿಂತಿರುಗಲು ಹೆಜ್ಜೆ ಹಾಕುತ್ತಿರುವುದು ಕೂಡಾ ಕಾಲಚಕ್ರದ ಉರುಳಿಗೆ ಕೊರಳು ಕೊಟ್ಟಂತೆಯೇ. ಕಳೆದ ೧೧ ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಜೊತೆ ಸೇರ್ಪಡೆಯಾಗುವುದು ಹಾಗೂ ಬೇರ್ಪಡೆಯಾಗುವುದು ನಿತೀಶ್ ಕುಮಾರ್‌ಗೆ ಒಂದು ರೀತಿಯ ವಾಡಿಕೆ. ಹೀಗಾಗಿ ನಿತೀಶ್ ಕುಮಾರ್ ಅವರನ್ನು `ಪಲ್ಟಿ ಕುಮಾರ್' ಎಂಬ ಗೇಲಿ ಮಾತು ಮತ್ತೆ ಚಾಲ್ತಿಗೆ ಬರಲು ಕಾರಣವಾಗಿದೆ. ಈಗ ಜರುಗುತ್ತಿರುವ ಬೆಳವಣಿಗೆಗಳೆಲ್ಲ ನಿಜವಾದರೆ ಬಿಹಾರದಲ್ಲಿ ಮತ್ತೆ ಬಿಜೆಪಿ - ಜೆಡಿಯು ಮೈತ್ರಿ ಸರ್ಕಾರ ಒಂದೆರಡು ದಿನದಲ್ಲಿ ಅಧಿಕಾರಕ್ಕೆ ಬರುವುದು ಖಂಡಿತ.
ನೆರೆಯ ಆಂಧ್ರಪ್ರದೇಶದ ಬೆಳವಣಿಗೆಯೂ ಕೂಡಾ ವಿಚಿತ್ರವಾಗಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೆ.ಸಿ.ಆರ್. ಸರ್ಕಾರದ ವಿರುದ್ಧ ನಗಾರಿ ಬಾರಿಸಿ ಯಶಸ್ಸು ಕಂಡಿದ್ದ ವೈ.ಎಸ್. ರಾಜಶೇಖರ ಪುತ್ರಿ ಶರ್ಮಿಳಾ ತಮ್ಮ ನೇತೃತ್ವದ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ ನಂತರ ಈಗ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದರಿಂದ ಆಂಧ್ರದಲ್ಲಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಹಾಗೂ ಸೋದರಿ ಶರ್ಮಿಳಾ ನೇತೃತ್ವದ ಕಾಂಗ್ರೆಸ್ ಪಕ್ಷಗಳ ನಡುವೆ ನಡೆಯುವ ಹೋರಾಟ ಇಡೀ ರಾಜಕಾರಣಕ್ಕೆ ಹೊಸ ರಂಗು ತಂದುಕೊಟ್ಟಿದೆ. ಸೋದರ ಸೋದರಿಯರ ನಡುವಣ ಈ ರಾಜಕೀಯ ಕಲಹವೂ ಕೂಡಾ ಕಾಲಚಕ್ರದ ಉರುಳಿಗೆ ಕೊರಳು ಕೊಡುವಂತದ್ದೇ ಆಗಿದೆ. ಆಂಧ್ರದಲ್ಲಿಯೂ ಕೂಡಾ ಈಗ ವಿಧಾನಸಭೆಯ ಚುನಾವಣೆ ನೆರಳು ದಟ್ಟವಾಗಿ ಕವಿದಿದೆ.
ಈ ಬೆಳವಣಿಗೆಗಳನ್ನೆಲ್ಲ ಗಮನಿಸಿದಾಗ ರಾಜಕಾರಣದಲ್ಲಿ ವೈಚಾರಿಕತೆ ಎಂಬುದು ಕಾಲಚಕ್ರದ ಉರುಳಿಗೆ ತನ್ನ ಕೊರಳನ್ನು ಕೊಟ್ಟಂತಾಗಿದೆ. ಈ ಉರುಳಿನಲ್ಲಿ ವೈಚಾರಿಕತೆಗಳು ಪಡೆದುಕೊಳ್ಳುವ ಬಣ್ಣ ಹಾಗೂ ರೂಪ ಸಾರ್ವಜನಿಕರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎನ್ನುವುದಕ್ಕಿಂತ ಮತದಾರರು ಇಂತಹ ಬೆಳವಣಿಗೆಗಳನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದರ ಮೇಲೆ ರಾಜಕಾರಣದ ಪ್ರಬುದ್ಧತೆ ನಿಶ್ಚಯವಾಗಲಿದೆ.