For the best experience, open
https://m.samyuktakarnataka.in
on your mobile browser.

ರಾಜಕೀಯ ನಾಯಕತ್ವಕ್ಕೆ ಚುನಾವಣೆ-ಈಡು ಜೋಡಿನ ಸತ್ವ ಪರೀಕ್ಷೆ

03:22 AM Nov 18, 2024 IST | Samyukta Karnataka
ರಾಜಕೀಯ ನಾಯಕತ್ವಕ್ಕೆ ಚುನಾವಣೆ ಈಡು ಜೋಡಿನ ಸತ್ವ ಪರೀಕ್ಷೆ

ಸಾರ್ವತ್ರಿಕ ಚುನಾವಣೆಗಳು ಆಯಾ ಕಾಲದ ರಾಜಕೀಯ ನಾಯಕತ್ವದ ವೈಚಾರಿಕತೆ ಹಾಗೂ ಆಚಾರವಂತಿಕೆ ಎಂಬ ಈಡು ಜೋಡಿನ ಅಗ್ನಿ ಪರೀಕ್ಷೆ; ಇದರ ಪರಿಣಾಮವಾಗಿಯೇ ಚುನಾವಣೆ ಯಾವುದೇ ಹಂತದ್ದಾದರೂ ಅದಕ್ಕಿರುವ ಮಹತ್ವ ವಿಶಿಷ್ಟ. ಭಾರತದಲ್ಲಂತೂ ಸರ್ವತೋಮುಖ ದೃಷ್ಟಿಯಿಂದ ಇದಕ್ಕೊಂದು ಹಬ್ಬದ ಕಳೆ. ಇನ್ನು ಉಪ ಚುನಾವಣೆಗಳ ಮಹತ್ವ ಬೇರೆ. ಏಕೆಂದರೆ, ಈ ಚುನಾವಣೆಗಳು ನಡೆಯುವ ಕಾರಣ ಹಾಗೂ ಪ್ರೇರಣೆಗಳೇ ಬೇರೆ-ಅಷ್ಟೆ ಅಲ್ಲ-ಸೀಮಿತ ಕೂಡಾ. ಆದರೂ ಹಲವಾರು ಸಂದರ್ಭಗಳಲ್ಲಿ ರಾಜಕೀಯ ಪರಿಸ್ಥಿತಿಯ ಶುದ್ದೀಕರಣಕ್ಕೆ ಈ ಉಪ ಚುನಾ ವಣೆಗಳ ಫಲಿತಾಂಶ ನಿಜಕ್ಕೂ ನಿರ್ಣಾಯಕ.
ಟೀಕೆ ಟಿಪ್ಪಣಿಗಳು ಏನೇ ಇರಲಿ, ಭಾರತದಲ್ಲಿ ಪ್ರತಿವರ್ಷ ಒಂದಲ್ಲಾ ಒಂದು ಚುನಾವಣೆ. ಲೋಕಸಭೆಯಾದರೆ ಇಡೀ ದೇಶಕ್ಕೆ ಅನ್ವಯಿಸುತ್ತದೆ. ವಿಧಾನಸಭೆಯಾದರೆ ಆಯಾ ರಾಜ್ಯಕ್ಕೆ ಸೀಮಿತ. ಇನ್ನು ವಿವಿಧ ಹಂತದ ಪಂಚಾಯ್ತಿ ಚುನಾವಣೆಗಳು ಕೂಡಾ ರಾಜ್ಯಕ್ಕಷ್ಟೆ ಸೀಮಿತ. ಇದರ ನಡುವೆ ಬರುವ ರಾಜ್ಯಸಭೆ ಹಾಗೂ ವಿಧಾನಪರಿಷತ್ತಿನ ಚುನಾವಣೆಗಳು ಪರೋಕ್ಷ ಸ್ವರೂಪದ್ದಾದರೂ ಅವುಗಳು ಸೃಷ್ಟಿಸುವ ಕಾವಿನ ವಾತಾವರಣ ಕಂಡವರಿಗಷ್ಟೆ ಗೊತ್ತು.
ಇದಕ್ಕೆಲ್ಲಾ ಮುಖ್ಯ ಕಾರಣವಾಗುವುದು ಸಾರ್ವಜನಿಕರ ಪಾಲ್ಗೊಳ್ಳುವಿಕೆ. ಅಭ್ಯರ್ಥಿಗಳಾದವರು ಹಾಗೂ ಆಯಾ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸೂತ್ರ ಧಾರಿಗಳಂತೆ ಬಡಿವಾರದಿಂದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಆದರೆ, ಸಾರ್ವಜನಿಕರು ಕ್ರಿಯೆಗೆ ಪ್ರತಿಕ್ರಿಯೆಯಾಗಿ, ಹಲವಾರು ಸಂದರ್ಭಗಳಲ್ಲಿ ಪ್ರತಿಕ್ರಿಯೆಗೆ ಇನ್ನೊಂದು ಪ್ರತಿಕ್ರಿಯೆ ಸೃಷ್ಟಿಸುವ ಮೂಲಕ ಜನಾಭಿಪ್ರಾಯದ ದಿಕ್ಕನ್ನೇ ಮಾರ್ಪಾಡು ಮಾಡುವ ಸಾಮರ್ಥ್ಯ ಪ್ರದರ್ಶಿಸುವ ಅನುಭವಗಳ ಹಿನ್ನೆಲೆಯಲ್ಲಿ ವಾದಗಳ ಮಂಡನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಎಚ್ಚರ ವಹಿಸುವ ಮುಖಂಡರಿಗೆ ಯಾವಾಗಲೂ ಚೌಕಟ್ಟು ಮುರಿದು ಮಾತನಾಡುವ ಸಹೋದ್ಯೋಗಿಗಳದೇ ಚಿಂತೆ. ಏಕೆಂದರೆ, ಸುಂದರವಾಗಿ ಮೂಡುತ್ತಿರುವ ಚಿತ್ರದ ಮೇಲೆ ಕಪುö್ಪ ಮಸಿ ಕೊಂಚ ಬಿದ್ದರೂ ಸಾಕು ಅದರ ಕಲಾತ್ಮಕತೆಯೇ ಅಳಿಸಿಹೋಗುವ ಪರಿಜ್ಞಾನ ಇದಕ್ಕೆ ಕಾರಣ. ಹೀಗಾಗಿಯೇ ಚುನಾವಣೆಗಳಲ್ಲಿ ಮುಖಂಡರ ಮಾತುಗಳನ್ನು ನಿಯಂತ್ರಿಸುವ ಬೌದ್ಧಿಕತೆಯ ಅರಿವು ಹಾಗೂ ಅನುಭವದ ಬೆರಗು ಇರುವ ಮುಖಂಡರ ಮಾತುಗಳಿಗೆ ಹೆಚ್ಚಿನ ಬೆಲೆ. ಆದರೆ, ಓಟಿನ ಲೋಕದಲ್ಲಿ ಮಾತಿನ ವ್ಯಾಪಾರವೇ ಚೌಕಾಶಿಗೆ ತಿರುಗುತ್ತಿರುವ ಸಂದರ್ಭದಲ್ಲಿ ಜ್ಞಾನವಂತ ಮುಖಂಡರ ಮಾತಿಗೆ ಒಂದು ರೀತಿಯ ಜಾಣ ಕಿವುಡು. ಇದು ಚುನಾವಣೆಗೆ ಇತ್ತೀಚೆಗೆ ಬಡಿದಿರುವ ಪ್ರಾರಬ್ದ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ದೇಶ ಒಂದು ಚುನಾವಣೆ ಎಂಬ ನೀತಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದೇನೋ ನಿಜ. ಆದರೆ, ಭಾರತದಂತಹ ವೈವಿಧ್ಯಮಯ ಸಂಸ್ಕೃತಿಯ ದೇಶದಲ್ಲಿ ಎಲ್ಲವನ್ನೂ ಏಕಾತ್ಮಕ ದೃಷ್ಟಿಯಲ್ಲಿ ನೋಡಿ ಒಂದೇ ದಾರಿಗೆ ಎಳೆದು ತರುವ ಮಾರ್ಗ ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕಿಂತ ಇಂತಹ ಮಾರ್ಗವನ್ನು ಜನ ಸ್ವೀಕರಿಸಿಯಾರೇ ಎಂಬ ಬಗ್ಗೆ ನೂರೆಂಟು ಅನುಮಾನ. ಅದೇನೇ ಇರಲಿ ಬದಲಾವಣೆಯ ಪರ್ವದ ಈ ಘೋಷಣೆಯ ಕಾರ್ಯೋನ್ಮುಖತೆಯನ್ನು ಕಾದುನೋಡುವುದೇ ಸೂಕ್ತ.
ಚುನಾವಣೆ ಎಂಬುದು ಕೇವಲ ನಾಯಕತ್ವದ ಅಗ್ನಿಪರೀಕ್ಷೆ ಎಂಬುದನ್ನು ಹೇಳಿದರೆ ಎಲ್ಲವನ್ನೂ ಹೇಳಿದಂತಾಗುವುದಿಲ್ಲ. ಈಗಿರುವ ನಾಯಕತ್ವದ ಸ್ಥಿರೀಕರಣ ಇಲ್ಲವೇ ನಿರಾಕರಣ ಇತ್ಯರ್ಥವಾಗುವುದರಿಂದ ಹೊಸ ವಾತಾವರಣ ಸೃಷ್ಟಿಗೆ ಒಂದು ರೀತಿಯ ನಾಂದಿ. ಸ್ಥಿರೀಕರಣ ಮತ್ತು ನಿರಾಕರಣ ಎಂಬುದು ಈಡು ಜೋಡು ಇದ್ದ ಹಾಗೆ. ಎಲ್ಲವನ್ನೂ ಒಪ್ಪಿದರೆ ನಾಯಕತ್ವವನ್ನು ಒಪ್ಪಿದಂತಲ್ಲ. ನಿರಾಕರಣೆಯಲ್ಲಿ ಸ್ಥಿರೀಕರಣ ಮಾಡುವುದು ಪ್ರಬುದ್ಧತೆಯ ರಾಜಕೀಯ ಪರಿಸ್ಥಿತಿಯ ದಿಕ್ಸೂಚಿ. ಭಾರತ ಈಗ ರಾಜಕೀಯವಾಗಿ ಪ್ರಬುದ್ಧತೆಯ ಮಾರ್ಗದಲ್ಲಿರುವ ಒಂದು ಜನತಂತ್ರ ದೇಶ. ನಾಯಕತ್ವ ಎಷ್ಟೇ ಜನಪ್ರಿಯವಾಗಿದ್ದರೂ ತಪ್ಪು ಒಪ್ಪುಗಳ ಸ್ಥಿರೀಕರಣ ಹಾಗೂ ನಿರಾಕರಣ ಏಕ ಕಾಲದಲ್ಲಿ ಜರುಗುವುದು ಅದರ ಸೌಂದರ್ಯ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸಾಧಿಸಿದ ಅಪರಿಮಿತ ಗೆಲುವಿಗೂ ೨೦೨೪ರಲ್ಲಿ ನಡೆದ ಚುನಾವಣೆಯ ಗೆಲುವಿನ ಸಂದೇಶಕ್ಕೂ ಇರುವ ವ್ಯತ್ಯಾಸದ ಗುಣಾತ್ಮಕ ಅಂಶಗಳನ್ನು ಪರಿಶೀಲಿಸಿದರೆ ಅದರ ಮಹತ್ವ ಏನೆಂಬುದು ಗೊತ್ತಾಗುತ್ತದೆ. ಮೊದಲ ಎರಡು ಅವಧಿಯಲ್ಲಿ ಎನ್‌ಡಿಎ ಸರ್ಕಾರದವರು ಅಂದುಕೊಂಡದ್ದನ್ನೆಲ್ಲಾ ಕಾರ್ಯರೂಪಕ್ಕೆ ತರುವ ಜನಾದೇಶ ಪಡೆದಿದ್ದರು. ಆದರೆ, ಅದೇ ಮಾತನ್ನು ಈಗ ಹೇಳುವಂತಿಲ್ಲ. ಈಗಿರುವುದು ಹಂಗಿನ ಅರಮನೆ. ತೆಲಗುದೇಶಂ ಹಾಗೂ ಜೆಡಿಯು, ಜೆಡಿಎಸ್ ಪಕ್ಷ ಸೇರಿ ಎನ್‌ಡಿಎ ಅಂಗಪಕ್ಷಗಳ ಸಹಮತವಿದ್ದರೆ ಮಾತ್ರ ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಅವಕಾಶ. ಇಲ್ಲದಿದ್ದರೆ ಯಾವುದೂ ಆಗದಂತಹ ಸ್ಥಿತಿ. ಚುನಾವಣೆ ಗೆದ್ದರೂ ಕೂಡಾ ಮತದಾರ ಚಲಾಯಿಸಿರುವ ಸ್ಥಿರೀಕರಣ ಹಾಗೂ ನಿರಾಕರಣೆಯ ಅಂಶಗಳ ಮತದಾನದ ಮೂಲಕ ತನ್ನ ನಿರೀಕ್ಷೆಯ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸಿರುವುದು ನಿಜಕ್ಕೂ ಒಂದು ರೀತಿಯ ವಿಸ್ಮಯ.
ಇನ್ನು ಉಪ ಚುನಾವಣೆಗಳ ವಿಷಯವೇ ಬೇರೆ. ಲೋಕಸಭೆಗೆ ಇದುವರೆಗೆ ನಡೆದಿರುವ ಉಪಚುನಾವಣೆಗಳಲ್ಲಿ ಪಾಣಿಪಟ್ ಯುದ್ಧವನ್ನು ಜ್ಞಾಪಿಸುವ ಚುನಾವಣೆಗಳು ಜರುಗಿವೆ. ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರಿಲ್ಲ. ಆದರೆ, ಮಧುಲಿಮೆಯೆ, ಜಾರ್ಜ್ ಫರ್ನಾಂಡಿಸ್ ಮೊದಲಾದವರು ಆಯ್ಕೆಯಾದ ನಂತರ ಜನದನಿಯ ಪ್ರಮಾಣ ಸದನದಲ್ಲಿ ಹೆಚ್ಚಾಗಿದ್ದು ಮಾತ್ರ ಅನುಭವಕ್ಕೆ ಬಂದ ಸಂಗತಿ. ಅಷ್ಟರ ಮಟ್ಟಿಗೆ ಅದರ ಪ್ರಭಾವ. ಇನ್ನು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ವಿಧಾನಸಭೆಗೆ ನಡೆದಿರುವ ಉಪ ಚುನಾವಣೆಗಳಲ್ಲಿ ಸರ್ಕಾರ ಪದಚ್ಯುತಿಯಾದ ನಿದರ್ಶನಗಳಿರುವ ಬೆಳವಣಿಗೆಗಳು ಇಲ್ಲ. ಆದರೆ, ಭಿನ್ನಮತೀಯರ ಧ್ವನಿ ಹೆಚ್ಚಾಗುವ ರೀತಿಯಲ್ಲಿ ೧೯೯೧-೯೨ರ ಗದಗ್ ಹಾಗೂ ಕುಣಿಗಲ್ ಕ್ಷೇತ್ರಗಳ ಚುನಾವಣಾ ಫಲಿತಾಂಶಗಳು ಬಂದ ನಂತರ ಜರುಗಿದ ಬೆಳವಣಿಗೆ ಒಂದು ರೀತಿಯಲ್ಲಿ ದಿಕ್ಸೂಚಿ. ಈಗ ಮತದಾನ ಮುಗಿದಿರುವ ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಚುನಾವಣೆಯ ಫಲಿತಾಂಶದ ಸ್ಥಿತಿಯೂ ಅಷ್ಟೆ. ಯಾರೇ ಗೆಲ್ಲಲಿ-ಸೋಲಲಿ ಸರ್ಕಾರಕ್ಕೆ ಹಾಗೂ ರಾಜಕೀಯ ಪಕ್ಷಗಳಿಗೆ ಒಂದು ರೀತಿಯ ಎಚ್ಚರಿಕೆಯ ಗಂಟೆ ಇಲ್ಲವೇ ಒಂದು ಮಾದರಿಯ ಸೂತ್ರ ಆಗಬಹುದಷ್ಟೆ. ಮತದಾನದಲ್ಲಿ ಮತದಾರ ಪ್ರಭು ಚಲಾಯಿಸುವ ಸ್ಥಿರೀಕರಣ ಹಾಗೂ ನಿರಾಕರಣದ ಮಾರ್ಗದ ಮತದಾನದ ಮಹಿಮೆ ಕಾಲಧರ್ಮಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿರುವ ಪವಾಡವೇ ಹೊಸ ಹೊಸ ರಾಜಕೀಯ ಬೆಳವಣಿಗೆಗಳ ಪ್ರೇರಕ ಶಕ್ತಿ.