For the best experience, open
https://m.samyuktakarnataka.in
on your mobile browser.

ರಾಜಕೀಯ ಭಾಷಣ ಮಾಡುವುದು ಮೋದಿ ಅವರಿಂದಲೇ ಕಲಿತಿದ್ದು

03:24 PM Mar 01, 2024 IST | Samyukta Karnataka
ರಾಜಕೀಯ ಭಾಷಣ ಮಾಡುವುದು ಮೋದಿ ಅವರಿಂದಲೇ ಕಲಿತಿದ್ದು

ಹಾಸನ: ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಕಲಿತಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಹಾಸನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಬಗ್ಗೆ ಎಫ್.ಎಸ್.ಎಲ್ ವರದಿ ಬಂದ ತಕ್ಷಣವೇ ಬಹಿರಂಗ ಮಾಡುತ್ತೇವೆ. ಯಾರೇ ಭಾರತದ ವಿರುದ್ಧ ಇದ್ದರೂ, ದೇಶವಿರೋಧಿ ಘೋಷಣೆ ಕೂಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ದೇಶಭಕ್ತಿಯನ್ನು ಬಿಜೆಪಿಯವರು ನಮಗೆ ಹೇಳಿಕೊಡುವ ಅಗತ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದು ನಮ್ಮವರೇ ಹೊರತು ಬಿಜೆಪಿಯಲ್ಲ.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವರದಿಯನ್ನು ನಿನ್ನೆಯಷ್ಟೇ ಸ್ವೀಕರಿಸಲಾಗಿದೆ. ಆದರೆ ವರದಿಯಲ್ಲಿರುವ ಅಂಶಗಳ ಬಗ್ಗೆ ಮಾಹಿತಿಯಿಲ್ಲ. ಸದರಿ ವರದಿಯನ್ನು ಸಚಿವ ಸಂಪುಟದ ಮುಂದೆ ಇರಿಸಿ ಚರ್ಚಿಸಲಾಗುವುದು.

ವಿರೋಧ ಪಕ್ಷದವರು ಅಧಿವೇಶನವನ್ನು ಬಹಿಷ್ಕರಿಸಿ ರಾಜ್ಯಪಾಲರ ಬಳಿ ದೂರು ನೀಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಶಾಸಕರೊಬ್ಬರು ನಮಗೆ ಮತಹಾಕಿದ್ದರು, ಮತ್ತೊಬ್ಬರು ಗೈರಾಗಿದ್ದರು. ಇದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ವಿಪಕ್ಷಗಳ ಮೈತ್ರಿಯನ್ನು ಶಾಸಕರೇ ಒಪ್ಪಿರುವುದಿಲ್ಲ. ಜೆಡಿಎಸ್ ಅವರು ನಾವು ಜಾತ್ಯಾತೀತರು, ಎಂದಿಗೂ ಕೋಮುವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರು.

ನಾವು ಶಂಕುಸ್ಥಾಪನೆ ನೆರವೇರಿಸಿ, ಅನುದಾನ ನೀಡಿದ್ದ ಹಲವು ಕಾರ್ಯಕ್ರಮಗಳನ್ನು ಜೆಡಿಎಸ್ ಹಾಗೂ ಬಿಜೆಪಿಯವರು ಉದ್ಘಾಟನೆ ಮಾಡಿದ್ದಾರೆ. ಸರ್ಕಾರದಲ್ಲಿ ಇದು ನಿರಂತರ ಪ್ರಕ್ರಿಯೆ. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಕಲಿತಿದ್ದು. ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ, ಸಂಸತ್ ಭವನದಲ್ಲಿ ರಾಜಕೀಯ ಭಾಷಣ ಮಾಡುತ್ತಾರೆ ಎಂದರು.