For the best experience, open
https://m.samyuktakarnataka.in
on your mobile browser.

ರಾಜಕೀಯ ಮೇಲಾಟದಲ್ಲಿ ವಿಷಯಗಳೇ ಮರೆತಾಗ…!

12:05 AM Oct 17, 2024 IST | Samyukta Karnataka
ರಾಜಕೀಯ ಮೇಲಾಟದಲ್ಲಿ ವಿಷಯಗಳೇ ಮರೆತಾಗ…

ನಮ್ಮ ತೆರಿಗೆ ನಮ್ಮ ಹಕ್ಕು…
ಮತ್ತೆ ಈ ಕೂಗು, ಅಭಿಯಾನ ಆರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಇಡೀ ದೇಶದಲ್ಲಿಯೇ ಅತೀ ಹೆಚ್ಚು ತೆರಿಗೆ ಸಂಗ್ರಹಿಸುವ ಎರಡನೇ ರಾಜ್ಯ ಕರ್ನಾಟಕ. ಆದರೆ ಕೇಂದ್ರದ ಪಾಲು ನ್ಯಾಯಯುತವಾಗಿ ಸಲ್ಲುತ್ತಿಲ್ಲ ಎಂಬ ಆರೋಪಕ್ಕೆ ಪುಷ್ಟಿ ಎನ್ನುವಂತೆ ಕಳೆದ ವಾರ ಕೇಂದ್ರ ಸರ್ಕಾರ ಉತ್ತರ ಪ್ರದೇಶಕ್ಕೆ ಬರೋಬ್ಬರಿ ೩೧,೯೬೨ ಕೋಟಿ ರೂಪಾಯಿ ಹಾಗೂ ಕರ್ನಾಟಕಕ್ಕೆ ಕೇವಲ ೬,೪೯೮ ಕೋಟಿ ರೂಪಾಯಿ ಹಂಚಿಕೆ ಮಾಡಿದ ಕ್ಷಣದಿಂದ ಈ ಆಕ್ರೋಶ ಮತ್ತೆ ಶುರುವಾಗಿದೆ.
ಎನ್‌ಡಿಎಯೇತರ ಸರ್ಕಾರಗಳಿರುವ ರಾಜ್ಯಗಳಿಗೆ ಕಡಿಮೆ ಅನುದಾನವನ್ನು ನೀಡಿ, ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಅತೀ ಹೆಚ್ಚು ಅನುದಾನ ನೀಡಿರುವ ಆರೋಪವನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸಲಾಗಿದೆ. ಇದು ಹಣಕಾಸು ಆಯೋಗದ ನೀತಿ ನಿರ್ಧಾರದಂತೆ, ಸಾಂವಿಧಾನಿಕ ಚೌಕಟ್ಟಿಗೆ ಅನುಗುಣವಾಗಿ, ಒಕ್ಕೂಟ ವ್ಯವಸ್ಥೆಯ ಹಂಚಿಕೆಯ ನೀತಿ ನಿಯಮದಂತೆ ಸಮರ್ಪಕವಾಗಿದೆ ಎಂಬ ಕೇಂದ್ರ ಸರ್ಕಾರದ ಸ್ಪಷ್ಟನೆ ಜನರ ಮತ್ತು ದಕ್ಷಿಣ ರಾಜ್ಯಗಳ ಆಕ್ರೋಶದ ಕೂಗನ್ನು ತಡೆಯಲಾರದು.
ಆರು ತಿಂಗಳ ಹಿಂದಷ್ಟೇ ಇದೇ ಅಸಮಾಧಾನ ದೆಹಲಿಯ ಜಂತರ್ ಮಂತರ್ ಎದುರು ಪ್ರತಿಭಟನೆಗೆ ದಾರಿ ಮಾಡಿಕೊಟ್ಟು, ಇತರ ರಾಜ್ಯಗಳು ಕರ್ನಾಟಕದ ಕೂಗಿಗೆ ಬೆಂಬಲಿಸಿದ್ದವು. ಈಗ ಕೇರಳ, ತಮಿಳುನಾಡು, ತೆಲಂಗಾಣ ಸರ್ಕಾರಗಳು ತೆರಿಗೆ ಅನುದಾನ ತಾರತಮ್ಯದ ವಿರುದ್ಧ ಒಗ್ಗೂಡುವ ಲಕ್ಷಣಗಳು ಗೋಚರಿಸುತ್ತಿವೆ.
ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹಲವು ರಾಜ್ಯಗಳ ವಿಧಾನಸಭೆ ಉಪ ಚುನಾವಣೆಗಳಲ್ಲಿ ಈ ತಾರತಮ್ಯವೇ ಪ್ರಮುಖ ಅಸ್ತçವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಣಕಾಸು ಖಾತೆಯನ್ನೂ ಹೊಂದಿದ್ದಾರೆ. ಅವರ ಗಟ್ಟಿ ಧ್ವನಿ ಮತ್ತು ವಾದಕ್ಕೆ ಸದ್ಯಕ್ಕಂತೂ ಕೇಂದ್ರ ಹಣಕಾಸು ಸಚಿವರಾಗಲೀ ಅಥವಾ ಕೇಂದ್ರದಲ್ಲಿರುವ ರಾಜ್ಯದ ಮಂತ್ರಿಗಳಾಗಲೀ, ಸಮರ್ಥವಾಗಿ ಎದುರು ನಿಂತು ಮಾತನಾಡುವ ಸ್ಥಿತಿಯಲ್ಲಿ ಇಲ್ಲ.
ಈಗ ಬಂದಿರುವ ಪ್ರತಿವಾದ ಏನೆಂದರೆ, ಮನಮೋಹನ ಸಿಂಗ್ ಸರ್ಕಾರ ಆಗ ನೀಡಿದ್ದ ಒಟ್ಟು ಅನುದಾನ ಎಷ್ಟು? ಮೋದಿ ಸರ್ಕಾರ ಬಂದ ನಂತರ ಹತ್ತು ವರ್ಷದಲ್ಲಿ ರಾಜ್ಯಕ್ಕೆ ನೀಡಿರುವ ಅನುದಾನ ಎಷ್ಟು ಎಂಬ ಅಂಕಿ ಸಂಖ್ಯೆಯನ್ನು ಬಿಡುಗಡೆ ಮಾಡಿ ಸಮರ್ಥನೆ ಮಾಡಿಕೊಳ್ಳುವ ಕೇಂದ್ರದ ಸಚಿವರಿಗೆ ಅಂದಿನ ಕೇಂದ್ರ ಬಜೆಟ್ ಗಾತ್ರ, ತೆರಿಗೆ ಸಂಗ್ರಹ ಪ್ರಮಾಣ ಹಾಗೂ ಇಂದಿನ ಬಜೆಟ್ ಮತ್ತು ತೆರಿಗೆ ಸಂಗ್ರಹ ಪ್ರಮಾಣ, ಹಾಗೂ ಇತರೆ ರಾಜ್ಯಗಳು ಪಡೆದ ತೆರಿಗೆ ಅನುದಾನ ಅಂದು ಮತ್ತು ಇಂದು, ಈ ಅಂಕಿಸಂಖ್ಯೆಗಳನ್ನು ಮಂಡಿಸುತ್ತಿಲ್ಲ. ಏಕೆಂದರೆ ಈ ಎಲ್ಲ ಅಂಕಿಸಂಖ್ಯೆಗಳ ಚಿತ್ರಣ ಕೇಂದ್ರ ಹಣಕಾಸು ಸಚಿವರಿಗೆ ತಿರುಗುಬಾಣವಾಗಿ ಕೇಂದ್ರ ಸರ್ಕಾರದ ನೀತಿ ಧೋರಣೆ, ತಾರತಮ್ಯಗಳೇ ಬಯಲಿಗೆ ಬರುವ ಸಾಧ್ಯತೆ ಹೆಚ್ಚು ಎಂಬುದು ಆರ್ಥಿಕ ತಜ್ಞರ ವಾದ.
ಹಾಗಾಗಿ ಈ ತೆರಿಗೆ ನೀತಿ ಮತ್ತು ಅನುದಾನ ಹಂಚಿಕೆ ತಾರತಮ್ಯ ದಕ್ಷಿಣ ರಾಜ್ಯಗಳು ಮತ್ತು ಅಸಮಾಧಾನಗೊಂಡಿರುವ ರಾಜ್ಯಗಳಿಂದ ಸಂಘಟಿತ ಹೋರಾಟ ಖಂಡಿತ ನಡೆಯುವ ಸಾಧ್ಯತೆ ಇದೆ. ಅದರೊಟ್ಟಿಗೆ ಒಕ್ಕೂಟ ವ್ಯವಸ್ಥೆಯ ಮೇಲೆ ಘಾತುಕ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗೇ ಮತ್ತೆ ಸರ್ಕಾರಗಳು ತಮ್ಮ ಮೂಗಿನ ನೇರಕ್ಕೆ ಸೇಡು, ಪ್ರತಿಸೇಡು ತೀರಿಸಿಕೊಳ್ಳುವ ಎಲ್ಲ ಅವಕಾಶಗಳಿಗೂ ದ್ವಾರ ತೆರೆದಂತಾಗುತ್ತದೆ.
ಹದಿನೈದನೇ ಕೇಂದ್ರ ಹಣಕಾಸು ಆಯೋಗದ ನೀತಿ ನಿಯಮದಂತೆಯೇ ಉತ್ತರ ಪ್ರದೇಶಕ್ಕೆ ೩೧,೯೬೨ ಕೋಟಿ, ಬಿಹಾರಕ್ಕೆ ೧೭,೯೨೧ ಕೋಟಿ. ಕರ್ನಾಟಕಕ್ಕಿಂತಲೂ ಕಡಿಮೆ ವಿಸ್ತೀರ್ಣ ಇರುವ, ತೆರಿಗೆ ಸಂಗ್ರಹದಲ್ಲಿ ತೀರ ಕಡಿಮೆ ಇರುವ ಆಂಧ್ರಪ್ರದೇಶ ೭,೭೧೧ ಕೋಟಿ ರೂಪಾಯಿ ಗಿಟ್ಟಿಸಿಕೊಂಡಿದೆ. ಆದರೆ ಕರ್ನಾಟಕಕ್ಕೆ ದೊರಕಿದ್ದು ೬,೪೯೮ ಕೋಟಿ ಮಾತ್ರ.
ನೀತಿ ಆಯೋಗದ ಸಮರ್ಥನೆ ಏನೆಂದರೆ, ಜನಸಂಖ್ಯೆ, ಅಭಿವೃದ್ಧಿ, ಜಿಡಿಪಿ, ಅರಣ್ಯ, ಬರಡು ಭೂಮಿ, ಇತ್ಯಾದಿ ಅಂಶಗಳಿಗೆ ಅನುಗುಣವಾಗಿ ತೆರಿಗೆ ಹಂಚಿಕೆಯಾಗುತ್ತದೆ ಎಂಬುದು. ಆದರೆ ಇದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಿಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಯಾವ ಮಾನದಂಡದಲ್ಲಿ, ನೀತಿ ನಿರೂಪಣೆ ಅಡಿಯಲ್ಲಿ ಅಷ್ಟು ಹಣ ನೀಡಲಾಗಿದೆ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಇಲ್ಲ.
ಬಿಮಾರ್' ರಾಜ್ಯಗಳಿಗೆ, ಗೂಂಡಾ, ದರೋಡೆಕೋರರ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುವ ಕೇಂದ್ರ ಹಣಕಾಸು ನೀತಿ ಎಷ್ಟು ಸರಿ? ನಾವು ಅಭಿವೃದ್ಧಿ ಹೊಂದಿರುವುದೇ ತಪ್ಪಾಯಿತೇ? ಜನಸಂಖ್ಯೆ ನಿಯಂತ್ರಣ, ಅರಣ್ಯ ಸಂರಕ್ಷಣೆ, ಜಲಸಂಪನ್ಮೂಲ ಅಭಿವೃದ್ಧಿ, ಜಿಡಿಪಿ ಹೆಚ್ಚಳ ಇವೆಲ್ಲವುಗಳೇ ನಮಗೆ ಮಾರಕವಾದವೇ ಎನ್ನುವ ಪ್ರಶ್ನೆ ಎದ್ದಿದೆ. ಬೆಂಗಳೂರು ಮಹಾನಗರದ ತೆರಿಗೆ ಹೆಚ್ಚು ಸಂಗ್ರಹವಾಗಿದೆ ಎಂದು ಮಹದೇವಪುರಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತದೆಯೇ? ಅದಕ್ಕೊಂದು ನೀತಿ ಬೇಡವಾ ಎಂದು ಬಿಜೆಪಿ ನಾಯಕರು ಮಾರುತ್ತರ ನೀಡಿದ್ದರು. ಆದರೆ ಅವರ ಸಮರ್ಥನೆ ಅಷ್ಟೇ ಅಪಹಾಸ್ಯಕ್ಕೆ ಈಡಾಯಿತೆನ್ನಿ. ಇದರಲ್ಲಿ ತಮಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಧ್ವನಿ ಎತ್ತಿರುವ ರಾಜ್ಯ ಸರ್ಕಾರ, ತಾನೇ ಸ್ವತಃ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸದೇ ವಾರ್ಷಿಕ ೨೯೦೦ ಕೋಟಿ ರೂಪಾಯಿ ಕಳೆದುಕೊಂಡಿದ್ದು ಈಗ ಮೌನವಾಗಿದೆ. ಸ್ವತಃ ಗ್ರಾಮಾಭಿವೃದ್ಧಿ ಸಚಿವರು, ಹೌದು, ಚುನಾವಣೆ ನಡೆಸದೇ ಇರುವುದರಿಂದ ಇಷ್ಟು ಹಣ ಬಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕ್ಯಾರು ಹೊಣೆ? ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡದೇ ಅಥವಾ ವ್ಯಯ ಮಾಡದೇ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಅನುಷ್ಠಾನಗೊಳ್ಳದೇ ನಿಂತಿವೆ. ಹಲವು ರಸ್ತೆ.. ಮೂಲ ಸೌಕರ್ಯ ಇತ್ಯಾದಿ ಕಾಮಗಾರಿಗಳು ಪಂಚ ಗ್ಯಾರಂಟಿ ಹೊಡೆತಕ್ಕೆ, ರಾಜ್ಯ ಸರ್ಕಾರ ಪಾಲು ಕೊಡದೇ ನಿಂತಿವೆ. ಇದನ್ನೇಕೆ ಹೇಳುತ್ತಿಲ್ಲ. ರಾಜ್ಯ ಒಪ್ಪಿದ್ದು ಮೊದಲು ತಾವು ಹಣ ವಿನಿಯೋಗಿಸಿ, ನಂತರ ಅದರ ವಿನಿಯೋಗದ ಪ್ರಮಾಣ ಪತ್ರ (ಯುಟಿಲೈಸೇಷನ್ ಸರ್ಟಿಫಿಕೇಟ್) ಸಲ್ಲಿಸಿದ ನಂತರ ಕೇಂದ್ರದ ಹಣ ಪಡೆದುಕೊಳ್ಳುವುದು ಎಂಬ ನಿಯಮಕ್ಕೆ. ಇವು ಸುಮಾರು ಹತ್ತಾರು ಸಾವಿರ ಕೋಟಿಯ ಯೋಜನೆಗಳು. ಈಗ ರಾಜ್ಯ ಹೆದ್ದಾರಿಗಳು, ಸ್ಮಾರ್ಟ್ ಸಿಟಿ ಯೋಜನೆಗಳೆಲ್ಲ ಸ್ಥಗಿತಗೊಂಡಿರುವುದು ಇದೇ ಕಾರಣಕ್ಕೆ. ನಿಜ. ರಾಜಕೀಯವಾಗಿ ರಾಜ್ಯದ ಸಂಸದರು, ವಿಶೇಷವಾಗಿ ಬಿಜೆಪಿ ಸಂಸದರು, ಈ ಅನುದಾನ ತಾರತಮ್ಯದಿಂದ ಮುಜುಗರಕ್ಕೆ ಒಳಗಾಗಿದ್ದಾರೆ. ಪ್ರಲ್ಹಾದ ಜೋಶಿ, ಸೋಮಣ್ಣ ಒಂದಿಷ್ಟು ಸಮರ್ಥನೆಗೆ ಇಳಿದರೂ ಅದಕ್ಕೆ ಬಲ ಬಂದಿಲ್ಲ. ಒಂದು ದೃಷ್ಟಿಯಲ್ಲಿ ಎಲ್ಲರೂ ನಿಸ್ಸಹಾಯಕರೇ. ಇಂತಹ ಗಂಭೀರ ವಿಚಾರಗಳು ಎದ್ದಾಗಲೆಲ್ಲ, ಅದನ್ನು ಅನ್ಯ ವಿಷಯಗಳತ್ತ ತಿರುಗಿಸುವ ಅನೇಕ ಅವಕಾಶಗಳಿರುತ್ತವೆ. ಅಥವಾ ಇಂತಹ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಅನುದಾನ ತಾರತಮ್ಯ ವಿವಾದ ಎದ್ದಾಗ, ರಾಜ್ಯ ಸರ್ಕಾರ ಅನಗತ್ಯವಾಗಿ ಹುಬ್ಬಳ್ಳಿ ಗಲಭೆ ಪ್ರಕರಣಗಳನ್ನು ಹಿಂಪಡೆದು ಬಿಜೆಪಿಗೆ ಕೈಯಾರೆ ಅಸ್ತ್ರ ಒದಗಿಸಿತು. ತೆರಿಗೆ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿದರೆ ಕಾಂಗ್ರೆಸ್ ತುಷ್ಟೀಕರಣದ ಬಗ್ಗೆ ಬಿಜೆಪಿ ಪ್ರತ್ಯಾಸ್ತ್ರ ಹೂಡಿತು. ಭಯೋತ್ಪಾದಕರಿಗೆ, ಓಲೈಕೆ ರಾಜಕಾರಣಕ್ಕೆ ಕಾಂಗ್ರೆಸ್ ಮಣೆ ಹಾಕಿದೆ ಎಂದು ರಾಷ್ಟ್ರ ಭದ್ರತೆಯ ಕೂಗು ಎಬ್ಬಿಸಿತು. ಸಿದ್ದರಾಮಯ್ಯ ವಿರುದ್ಧ ಮೂಡಾ ವಿವಾದ ಎದ್ದಾಗ, ಪ್ರಧಾನಿ ಮೋದಿಯವರೇ ಹರಿಯಾಣಾ ಮತ್ತು ಜಮ್ಮು ಕಾಶ್ಮೀರ ಚುನಾವಣೆಯಲ್ಲಿ,ಕರ್ನಾಟಕ್ ಕಿ ಮುಖ್ಯಮಂತ್ರಿಕಾ ಲಫಡಾ ದೇಖೋ… ಉನ್ಹೋನೆ ಸರ್ಕಾರಿ ಸೈಟ್ ಕಾ ಘೋಟಾಲಾ ಕಿಯೆ ಹೈ' ಎಂದು ಅಬ್ಬರಿಸಿದ್ದರು. ಇಲ್ಲಿ ವಾಲ್ಮೀಕಿ ಹಗರಣ ಎದ್ದು ಮಾಜಿ ಸಚಿವರು, ಶಾಸಕರು ಜೈಲಿಗೆ ತಳ್ಳಲ್ಪಟ್ಟರೆ, ಪ್ರತಿಯಾಗಿ ಬಿಜೆಪಿ ಶಾಸಕರ ಎಚ್‌ಐವಿ, ಹನಿಟ್ರ್ಯಾಪ್ ಪ್ರಕರಣ ಎದ್ದಿತು.
ಮೂಡಾ ಸೈಟ್ ಜೊತೆ ಅರ್ಕಾವತಿ ರಿ ಡೂ ಪ್ರಕರಣ ಎದ್ದರೆ, ಪ್ರತಿಪಕ್ಷದ ನಾಯಕರ ಮೇಲೆ ಐದು ಎಕರೆ ಭೂಮಿ ಹೊಡೆದ ಹಳೆಯ ಪ್ರಕರಣ ಹೊರಬಂತು. ಹಾಗೇ ಅಸ್ತ್ರಕ್ಕೆ ಪ್ರತಿ ಅಸ್ತ್ರ, ಬೇಲಿಗೆ ಪ್ರತಿ ಬೇಲು, ಅಸಹ್ಯಕರ ಶಬ್ದಗಳ ಪ್ರಯೋಗ, ರೇಪಿಸ್ಟರಿಂದ ಪೋಕ್ಸೋ ಪ್ರಕರಣಗಳವರೆಗೆ ಒಬ್ಬಲ್ಲ, ಒಬ್ಬ ನಾಯಕನ ಪ್ರಕರಣಗಳು. ಮಾಜಿ ಮುಖ್ಯಮಂತ್ರಿಯಿಂದ ಹಾಲಿ ಶಾಸಕರವರೆಗೆ, ವಿಡಿಯೋ, ಸಿಡಿ, ಬ್ಲ್ಯಾಕ್‌ಮೇಲ್, ರೇಪ್ ಪ್ರಕರಣಗಳೆಲ್ಲ ಎದ್ದವು.
ಈ ಎಲ್ಲ ಅಸ್ತ್ರ, ಪ್ರತ್ಯಾಸ್ತ್ರಗಳು, ಟೀಕೆ ಪ್ರತಿ ಟೀಕೆಗಳಿಂದಾಗಿ ಜನರಿಂದ ಗಂಭೀರ ವಿಷಯಗಳೇ ಮರೆಮಾಚಿದಂತಾದವು.
ತೆರಿಗೆ ತಾರತಮ್ಯ ರಾಷ್ಟ್ರ ಮಟ್ಟದ, ಹದಿನಾರನೇ ಹಣಕಾಸು ಆಯೋಗದ ಪ್ರಮುಖ ವಿಷಯವಾಗಬೇಕು. ಡಾ. ಅರವಿಂದ ಪನಗಡಿಯಾ ೧೬ನೇ ಹಣಕಾಸು ಅಯೋಗದ ಅಧ್ಯಕ್ಷರು. ರಾಷ್ಟ್ರ ಮಟ್ಟದ ಚರ್ಚೆ, ನೀತಿ ನಿರೂಪಣೆಯ ಸಂಗತಿ, ನಿಜವಾಗಿಯೂ ತಾರತಮ್ಯವಾಗಿದ್ದರೆ ಅದಕ್ಕೆ ಹೊಣೆಗಾರರು ಯಾರು ಎಂಬುದು ತೀರ್ಮಾನವಾಗಬೇಕು.
ಬೆಂಗಳೂರಿಗೆ ಜಲದಿಗ್ಬಂಧನ ಎದ್ದಿದೆ. ಐಟಿ-ಬಿಟಿ ನಗರದ ಕರಾಳ ದುಸ್ಥಿತಿ, ಇಡೀ ರಾಜ್ಯದಲ್ಲಿ ಅನಾವೃಷ್ಟಿ, ಅತಿವೃಷ್ಟಿ, ಭೂಕುಸಿತ, ಮುಂಗಾರು ಮಳೆಯಿಂದ ಬೆಳೆ ಹಾನಿ, ಹಿಂಗಾರು ಬಿತ್ತನೆಗೆ ಈಗಲೇ ಅಡ್ಡಿ, ದೇಶಾದ್ಯಂತ ಅಟ್ಟಹಾಸಗೈಯುತ್ತಿರುವ ಡ್ರಗ್ ಮಾಫಿಯಾ, ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು, ದಿನಕ್ಕೊಂದು ಅಸ್ತ್ರ- ಪ್ರತ್ಯಸ್ತ್ರಗಳ ಮೇಲಾಟವನ್ನು ಜನ ಸಹಿಸಿಕೊಳ್ಳಬೇಕಾಗಿದೆ. ನಮ್ಮ ನಡುವಿನ ಸಮಾಜದ ಈ ಮೂಕ ರೋದನೆ ಇದು!