ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಾಟ

09:39 PM Apr 23, 2024 IST | Samyukta Karnataka

ಮಂಡ್ಯ/ಮಳವಳ್ಳಿ: ಕಾವೇರಿ ನೀರನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ನೆರೆಯ ರಾಜ್ಯಕ್ಕೆ ಮಾರಾಟ ಮಾರಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯದ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಮದ್ದೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ಮಾಡಿರುವ ಅನ್ಯಾಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ನಮ್ಮ ರೈತರ ಹಾಳು ಮಾಡಿ ಕಾವೇರಿ ನೀರನ್ನು ಮಾರಾಟ ಮಾಡಿಕೊಂಡವರು ನೀವು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಡಿಎಂಕೆ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ಮೌನ
ಇಲ್ಲಿ ಮೇಕೆದಾಟು ತರುತ್ತೇವೆ ಎನ್ನುತ್ತಾರೆ, ಕಾವೇರಿಯನ್ನು ಕಾಪಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಮೇಕೆದಾಟು ವಿರೋಧಿ ಆಗಿರುವ ಡಿಎಂಕೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ರಾಜಕೀಯ ಸ್ವಾರ್ಥಕ್ಕಾಗಿ ಸ್ಟಾಲಿನ್ ಅವರನ್ನು ಓಲೈಕೆ ಮಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಮೇಕೆದಾಟು ಯೋಜನೆಗೆ ಡಿಎಂಕೆ ತಕರಾರು ತೆಗೆದಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಾಟಕ ರಾಜ್ಯ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ. ಎಲ್ಲಾ ರೀತಿಯಲ್ಲಿಯೂ ಅಡ್ಡಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರ ಬಗ್ಗೆ ಸಿದ್ದರಾಮಯ್ಯ ಅವರಾಗಲಿ, ಡಿ.ಕೆ. ಶಿವಕುಮಾರ್ ಅವರಾಗಲಿ ಈ ಬಗ್ಗೆ ಇದುವರೆಗೂ ಚಕಾರ ಎತ್ತಿಲ್ಲ ಎಂದು ಅವರು ಕಿಡಿಕಾರಿದರು.

ಕೋಟ್ಯಂತರ ರೂ. ಮೌಲ್ಯದ ಬೆಳೆ ನಾಶ
ಕೆಆರ್‌ಎಸ್‌ನಲ್ಲಿ 98 ಅಡಿ ನೀರಿದ್ದರೂ ಭತ್ತ ನಾಟಿ ಮಾಡಬೇಡಿ ಈ ಸರ್ಕಾರ ಫರ್ಮಾನು ಹೊರಡಿಸಿದೆ. ಮಂಡ್ಯ ಜನರನ್ನು ಅಪಮಾನ ಮಾಡಿದೆ. ಮಂಡ್ಯ ನೆಲಕ್ಕೆ ಪ್ರವೇಶ ಮಾಡುವಾಗ ʻಸಕ್ಕರೆ ನಾಡಿಗೆ ಸ್ವಾಗತʼ ಎಂದು ನಾಮಫಲಕ ಇರುತ್ತದೆ, ಆದರೆ, ಈ ಸರಕಾರ ಮಂಡ್ಯವನ್ನು ಬರಡು ಜಿಲ್ಲೆ ಮಾಡಿದೆ. ಈ ಸರ್ಕಾರ ಬಂದ ಮೇಲೆ ಎಲ್ಲಾ ಕಡೆ ಕಬ್ಬು ಒಣಗಿದೆ. ಇನ್ನು ಅದಕ್ಕೆ ಬೆಂಕಿ ಹಾಕೋದು ಮಾತ್ರ ಬಾಕಿ ಇದೆ. ಕೋಟ್ಯಂತರ ರೂಪಾಯಿ ನಾಶವಾಗಿದೆ. ಆದರೆ, ಕಾಂಗ್ರೆಸ್ ₹2000 ಕೊಟ್ಟರೆ ಉಪಯೋಗ ಏನು? ಎಂದು ಅವರು ಪ್ರಶ್ನಿಸಿದರು.

ಕಾವೇರಿ ಬಗ್ಗೆ ಕಾಂಗ್ರೆಸ್ ಮೌನ
ದೇವೇಗೌಡರು ಈ ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಕೆಲವರು ಕೇಳಿದ್ದಾರೆ. ಅವರು ಕೊಟ್ಟಿರುವ ಕೊಡುಗೆ ಏನು ಎನ್ನುವುದು ಜನರಿಗೆ ಗೊತ್ತಿದೆ. ಗೊತ್ತಿಲ್ಲ ಎಂದರೆ ತಿಳಿದುಕೊಳ್ಳಿ. ಮೇಕೆದಾಟು, ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಸಭೆಯಲ್ಲಿ ದೇವೇಗೌಡರು ಪರಿಪರಿಯಾಗಿ ಬೇಡಿಕೊಂಡರೂ ಸದನದಲ್ಲಿಯೇ ಕೂತಿದ್ದ ಮಲ್ಲಿಕಾರ್ಜುನ ಖರ್ಗೆ, ಇತರೆ ಕಾಂಗ್ರೆಸ್ ಸದಸ್ಯರು ಮೌನವಾಗಿ ಕೂತಿದ್ದರು. ಅವರು ಒಂದು ಮಾತನ್ನು ಆಡಲಿಲ್ಲ. ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ಮೊದಲು ಡಿಎಂಕೆಗೆ ಹೇಳಿ ಮನವೊಲಿಕೆ ಮಾಡಿ. ಅಥವಾ ಡಿಎಂಕೆ ಬೆದರಿಕೆ ಸೊಪ್ಪು ಹಾಕಲ್ಲ, ನಮಗೆ ಮೇಕೆದಾಟು ಬೇಕು ಎಂದು ಹೇಳಿ. ಮೇಕೆದಾಟು ಯೋಜನೆಗೆ ನಾವು ಐದು ನಿಮಿಷದಲ್ಲಿ ಅನುಮತಿ ಕೊಡಿಸುತ್ತೇವೆ. ನಿಮ್ಮ ಮಿತ್ರಪಕ್ಷ ಡಿಎಂಕೆ ಸರ್ಕಾರದ ಮನವೊಲಿಸಿ ತಮಿಳುನಾಡು ಸಲ್ಲಿಸಿರುವ ತಕರಾರು ಅರ್ಜಿಗಳನ್ನು ಹಿಂಪಡೆಯುವಂತೆ ಮಾಡಿ ಎಂದು ಅವರು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.
ನಾನು ಸಾಯಲ್ಲ, ಇನ್ನೂ ಬದುಕಿರುತ್ತೇನೆ, ನಿನ್ನ ಕೈಯ್ಯಿಂದಲೇ ಕಾವೇರಿ ನೀರಿನ ವಿಷಯದಲ್ಲಿ ನ್ಯಾಯ ಕೊಡಿಸುತ್ತೇನೆ ಎಂದು ಮೂರು ದಿನಗಳ ಹಿಂದೆಯೂ ನನಗೆ ನಮ್ಮ ತಂದೆಯವರು ಹೇಳಿದ್ದರು. ಅವರ ಮಾತು ನಡೆದೇ ನಡೆಯುತ್ತದೆ. ಮೈಸೂರಿನಲ್ಲಿ ಮೋದಿ ಅವರೂ ಹೇಳಿದ್ದರು. ದೇವೇಗೌಡರ ಮಾರ್ಗದರ್ಶನ, ಕುಮಾರಸ್ವಾಮಿ ಅವರ ಅನುಭವವನ್ನು ಬಳಸಿಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದರು ಎಂಬುದನ್ನು ಇದೇ ವೇಳೆ ಅವರು ಜನತೆಯ ಗಮನಕ್ಕೆ ತಂದರು.

ಬರಗಾಲ ಬಂದರೆ ಹಣ ಮಾಡಲು ಕಾಂಗ್ರೆಸ್ಸಿಗರಿಗೆ ಸುವರ್ಣಕಾಲ
ಕಾಂಗ್ರೆಸ್ ಹೇಳಿಕೆ, ಟೀಕೆಗಳಿಗೆ ತಿರುಗೇಟು ಕೊಟ್ಟ ಅವರು; ದೇವೇಗೌಡರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ, ನರೇಂದ್ರ ಮೋದಿ ಅವರು ಹೇಗೆ ಗೌರವಿಸುತ್ತಾರೆ ಎನ್ನುವುದು ಜನರಿಗೆ ಗೊತ್ತಿದೆ. ನಾನು ಮಂಡ್ಯ ಜಿಲ್ಲೆಗೆ 700 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೆ. ಕಾಂಗ್ರೆಸ್ ಬಂದಾಗಲೆಲ್ಲ ಬರಗಾಲ ಬರುತ್ತದೆ. ಕಾಂಗ್ರೆಸ್ ತನ್ನ ಜತೆಯಲ್ಲಿಯೇ ಬರಗಾಲವನ್ನು ಕರೆದುಕೊಂಡು ಬರುತ್ತದೆ. ಜನರಿಗೆ ಬರಗಾಲ, ಕಾಂಗ್ರೆಸ್ ನಾಯಕರಿಗೆ ದುಡ್ಡು ಮಾಡಲು ಸುವರ್ಣಕಾಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು.

Next Article